ಮರಾಠಿ ಕಲಿಯಲ್ಲ ಎಂದ ಉದ್ಯಮಿ ಸುಶೀಲ್ ಕೇಡಿಯಾ ಕಚೇರಿ ಮೇಲೆ ಎಮ್ಎನ್ಎಸ್ ದಾಳಿ
ಕೇಡಿಯಾ ಅವರ ಕಚೇರಿ ಆವರಣದಲ್ಲಿ ಎಮ್ಎನ್ಎಸ್ ಕಾರ್ಯಕರ್ತರು ದಾಂಧಲೆ ನಡೆಸುತ್ತಿರುವ ದೃಶ್ಯಗಳನ್ನು ಒಳಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ.;
ಮರಾಠಿ ಕಲಿಯಲು ನಿರಾಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ರಾಜ್ ಠಾಕ್ರೆ ಅವರನ್ನು ಟ್ಯಾಗ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದ ಮುಂಬೈ ಮೂಲದ ಉದ್ಯಮಿ ಸುಶೀಲ್ ಕೇಡಿಯಾ ಅವರ ಕಚೇರಿಯ ಮೇಲೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಕಾರ್ಯಕರ್ತರು ಶುಕ್ರವಾರ ದಾಳಿ ನಡೆಸಿದ್ದಾರೆ.
ಕೇಡಿಯಾ ಅವರ ಕಚೇರಿ ಆವರಣದಲ್ಲಿ ಎಮ್ಎನ್ಎಸ್ ಕಾರ್ಯಕರ್ತರು ದಾಂಧಲೆ ನಡೆಸುತ್ತಿರುವ ದೃಶ್ಯಗಳನ್ನು ಒಳಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಘಟನೆ ನಡೆದ ಕೂಡಲೇ ಮುಂಬೈ ಪೊಲೀಸರು ಸ್ಥಳಕ್ಕೆ ಧಾವಿಸಿ, ಉದ್ರಿಕ್ತ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿವಾದಕ್ಕೆ ಕಾರಣವಾದ ಉದ್ಯಮಿಯ ಎಕ್ಸ್ (X) ಪೋಸ್ಟ್
ಈ ಇಡೀ ಘಟನೆಗೆ ಕಾರಣವಾದದ್ದು ಉದ್ಯಮಿ ಸುಶೀಲ್ ಕೇಡಿಯಾ ಅವರು 'ಎಕ್ಸ್' (ಹಿಂದಿನ ಟ್ವಿಟರ್) ನಲ್ಲಿ ಮಾಡಿದ್ದ ಒಂದು ಪೋಸ್ಟ್. ಭಾಷಾ ಅಭಿಮಾನದ ಬಗ್ಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದ ಕೇಡಿಯಾ, "30 ವರ್ಷದಿಂದ ಮುಂಬೈನಲ್ಲಿ ವಾಸಿಸುತ್ತಿದ್ದರೂ ನನಗೆ ಮರಾಠಿ ಸರಿಯಾಗಿ ಬರುತ್ತಿಲ್ಲ. ಭಾಷೆ ಉಳಿಸುವ ಸೋಗು ಹಾಕಿಕೊಂಡಿರುವ ನಿಮ್ಮಂತವರನ್ನು ನೋಡಿದ ಮೇಲಂತೂ ಮರಾಠಿ ಕಲಿಯಬಾರದು ಎಂದು ನಾನು ಪ್ರತಿಜ್ಞೆ ಮಾಡಿದ್ದೇನೆ. ಏನು ಮಾಡೋಣ ಹೇಳು?" ಎಂದು ನೇರವಾಗಿ ಎಮ್ಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಟ್ಯಾಗ್ ಮಾಡಿದ್ದರು.
ಕೇಡಿಯಾ ಅವರ ಈ ಹೇಳಿಕೆ ಎಮ್ಎನ್ಎಸ್ ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಕೇಡಿಯಾ ಅವರ ಕಚೇರಿಯ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಸರಣಿ ದಾಳಿಗಳ ಎಚ್ಚರಿಕೆ
ಇದೇ ರೀತಿಯ ಘಟನೆ ಇದು ಮೊದಲೇನಲ್ಲ. ಕೇವಲ ನಾಲ್ಕು ದಿನಗಳ ಹಿಂದಷ್ಟೇ ಠಾಣೆ ನಗರದಲ್ಲಿ ಮರಾಠಿ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಎಮ್ಎನ್ಎಸ್ ಕಾರ್ಯಕರ್ತರು ಅಂಗಡಿ ಮಾಲೀಕರೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಮಾಲೀಕನ ಕೆನ್ನೆಗೆ ನಾಲ್ಕೈದು ಬಾರಿ ಹೊಡೆದು ಹಲ್ಲೆ ನಡೆಸಿದಲ್ಲದೆ, ಬೆದರಿಕೆಯನ್ನೂ ಹಾಕಿದ್ದರು. ಈ ಕೃತ್ಯದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದರು.
ಎಮ್ಎನ್ಎಸ್ ಪಕ್ಷವು ಮಹಾರಾಷ್ಟ್ರದಲ್ಲಿ 'ಮರಾಠಿ ಮಾಣೂಸ್' (ಮರಾಠಿ ಮಣ್ಣಿನ ಮಗ) ಮತ್ತು ಮರಾಠಿ ಭಾಷೆಯ ಪ್ರಾಧಾನ್ಯತೆಯನ್ನು ಪ್ರತಿಪಾದಿಸುತ್ತಾ ಬಂದಿದೆ. ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯನ್ನು ಕಡೆಗಣಿಸುವವರ ವಿರುದ್ಧ ಇಂತಹ ದಾಳಿಗಳನ್ನು ನಡೆಸುವ ಮೂಲಕ ಪಕ್ಷವು ತಮ್ಮ ಅಸ್ತಿತ್ವವನ್ನು ಪ್ರದರ್ಶಿಸಲು ಪ್ರಯತ್ನಿಸುತ್ತಿದೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.