Manipur Violence| ಅಸ್ಸಾಂಗೆ ತೆರಳಿದ ರಾಜ್ಯಪಾಲ: ವಿಶ್ವವಿದ್ಯಾನಿಲಯ ಪರೀಕ್ಷೆ ಮುಂದೂಡಿಕೆ

Update: 2024-09-11 10:33 GMT

ಇಂಫಾಲ: ಮಣಿಪುರ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರು ಗುವಾಹಟಿಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಏತನ್ಮಧ್ಯೆ, ಮಣಿಪುರ ವಿಶ್ವವಿದ್ಯಾನಿಲಯವು ಪದವಿ- ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಿದೆ. ಮರು ಪರೀಕ್ಷೆ ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಮಣಿಪುರದ ಹೆಚ್ಚುವರಿ ಉಸ್ತುವಾರಿ ಹೊಂದಿರುವ ಆಚಾರ್ಯ ಅವರು ಬೆಳಗ್ಗೆ 10 ಗಂಟೆಗೆ ಗುವಾಹಟಿಗೆ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಭವನದ ಬಳಿ ಮಂಗಳವಾರ ನಡೆದ ಘರ್ಷಣೆಯಲ್ಲಿ 55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.ರಾಜ್ಯ ಜನಾಂಗೀಯ ಹಿಂಸಾಚಾರದಿಂದ ಬಳಲಿದ್ದು, ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಭಾಯಿಸಲು ಅಸಮರ್ಥರಾಗಿರುವ ಡಿಜಿಪಿ ಮತ್ತು ಭದ್ರತಾ ಸಲಹೆಗಾರರನ್ನು ತೆಗೆದುಹಾಕಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ರಾಜಭವನದ ಬಳಿ ಘರ್ಷಣೆ ನಡೆದ ಕೆಲವೇ ಗಂಟೆಗಳ ನಂತರ ರಾಜ್ಯಪಾಲರು ಮಂಗಳವಾರ ರಾತ್ರಿ 11ಕ್ಕೆ ವಿದ್ಯಾರ್ಥಿ ಪ್ರತಿನಿಧಿಗಳನ್ನು ಭೇಟಿ ಮಾಡಿದರು. 

ಇಂಫಾಲ್ ಕಣಿವೆಯಲ್ಲಿ ಬುಧವಾರ ಹೊಸ ಪ್ರತಿಭಟನೆ ಮತ್ತು ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕರ್ಫ್ಯೂ ವಿಧಿಸಲಾಗಿದ್ದು, ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಹೆಚ್ಚುವರಿ ಪಡೆಗಳ ನಿಯೋಜನೆಯಲ್ಲದೆ, ಇಂಫಾಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಮುಖ್ಯಮಂತ್ರಿ ಭೇಟಿ: ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಇಂಫಾಲ್ ಕಾಲೇಜು ಮತ್ತು ಇಬೊಟೊನ್ಸಾನಾ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದು, ಸಮಸ್ಯೆಗಳನ್ನು ಪರಿಹರಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. 

ʻರಾಜ್ಯದಲ್ಲಿ ನಡೆಯುತ್ತಿರುವ ಅಡಚಣೆಗಳ ಬಗ್ಗೆ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ಗೌರವಿಸುತ್ತೇನೆ. ಅವರು ಎದುರಿಸುತ್ತಿರುವ ಸವಾಲುಗಳು ಮತ್ತು ಅವರ ಶಿಕ್ಷಣದ ಮೇಲೆ ಪರಿಣಾಮ ಕುರಿತು ರಚನಾತ್ಮಕ ಚರ್ಚೆ ನಡೆಸಿದ್ದೇವೆ. ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡುತ್ತೇನೆ,ʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ʻಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ನ್ಯಾಯ ಸಲ್ಲಿಸಲಾಗುವುದು,ʼ ಎಂದು ಹೇಳಿದ್ದಾರೆ.

Tags:    

Similar News