ಮಣಿಪುರ | ಮೈತಿ, ಕುಕಿಗಳೊಂದಿಗೆ ಸರ್ಕಾರ ಮಾತುಕತೆ: ಅಮಿತ್ ಶಾ
ಕಳೆದ ಒಂದು ವರ್ಷದಿಂದ ಶಾಂತಿಯುತವಾಗಿದ್ದ ಜಿರಿಬಾಮ್‌ನಂತಹ ಹೊಸ ಪ್ರದೇಶಗಳಿಗೆ ಹಿಂಸಾಚಾರ ಹರಡುತ್ತಿರುವ ಬಗ್ಗೆ ಕೇಂದ್ರ ಆತಂಕಗೊಂಡಿದೆ ಎಂದು ಹೇಳಲಾಗಿದೆ.;
ಮಣಿಪುರದಲ್ಲಿ ಜನಾಂಗೀಯ ಸಂಘರ್ಷವನ್ನು ನಿವಾರಿಸಲು, ಮೈತಿ ಮತ್ತು ಕುಕಿ ಸಮುದಾಯಗಳೊಂದಿಗೆ ಗೃಹ ವ್ಯವಹಾರಗಳ ಸಚಿವಾಲಯ ಶೀಘ್ರವೇ ಮಾತುಕತೆ ನಡೆಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ (ಜೂನ್ 17) ನಡೆದ ಪರಿಶೀಲನೆ ಸಭೆಯಲ್ಲಿ ತಿಳಿಸಿದ್ದಾರೆ.
ಮಣಿಪುರದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಅವರು, ಅಗತ್ಯಬಿದ್ದರೆ ಕೇಂದ್ರ ಪಡೆಯನ್ನು ಹೆಚ್ಚಿಸಲಾಗುವುದು. ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು,ಅಗತ್ಯವಿರುವಲ್ಲಿ ಪಡೆಯನ್ನು ನಿಯೋಜಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಒಂದು ವರ್ಷದಿಂದ ಜನಾಂಗೀಯ ಘರ್ಷಣೆಗೆ ಸಾಕ್ಷಿಯಾಗಿರುವ ರಾಜ್ಯದಲ್ಲಿ ಹಿಂಸಾಚಾರ ಘಟನೆಗಳು ನಡೆಯದಂತೆ ನೋಡಿಕೊಳ್ಳುವಂತೆ ಶಾ ಅಧಿಕಾರಿಗಳಿಗೆ ಸೂಚಿಸಿದರು. ಮೈತಿ ಮತ್ತು ಕುಕಿಗಳೊಂದಿಗೆ ಗೃಹ ವ್ಯವಹಾರಗಳ ಸಚಿವಾಲಯ ಮಾತುಕತೆ ನಡೆಸಲಿದೆ. ಇದರಿಂದ ಜನಾಂಗೀಯ ಸಂಘರ್ಷ ಶೀಘ್ರವಾಗಿ ನಿವಾರಣೆ ಆಗುತ್ತದೆ ಎಂದು ಷಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳಾಂತರಗೊಂಡ ಜನರಿಗೆ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯ ನೀಡಬೇಕು; ಅವರ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಬೇಕೆಂದು ಮಣಿಪುರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದರು.
ಸಮನ್ವಯ ವಿಧಾನದ ಅಗತ್ಯ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈಶಾನ್ಯ ರಾಜ್ಯದ ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಗೃಹ ಸಚಿವರು ಹೇಳಿದರು. ಷಾ ಅವರು ಪರಿಹಾರ ಶಿಬಿರಗಳಲ್ಲಿನ ಪರಿಸ್ಥಿತಿಯನ್ನು, ವಿಶೇಷವಾಗಿ, ಆಹಾರ, ನೀರು, ಔಷಧ ಮತ್ತು ಇತರ ಮೂಲಭೂತ ಸೌಕರ್ಯಗಳ ಸಮರ್ಪಕ ಲಭ್ಯತೆಯನ್ನು ಪರಿಶೀಲಿಸಿದರು. ಜನಾಂಗೀಯ ಸಂಘರ್ಷವನ್ನು ಪರಿಹರಿ ಸಲು ಸಂಘಟಿತ ವಿಧಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ರಾಜ್ಯದಲ್ಲಿ ಭದ್ರತಾ ಪರಿಸ್ಥಿತಿಯನ್ನು ಬಲಗೊಳಿಸಲು ಕೇಂದ್ರವು ಮಣಿಪುರ ಸರ್ಕಾರವನ್ನು ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಹಿಂಸಾಚಾರ ವಿಸ್ತರಣೆ: ಉನ್ನತ ಮಟ್ಟದ ಸಭೆಯಲ್ಲಿ ಶಾ ಅವರಿಗೆ ಅಧಿಕಾರಿಗಳು ರಾಜ್ಯದ ಪ್ರಸ್ತುತ ಪರಿಸ್ಥಿತಿ ಕುರಿತು ವಿವರ ನೀಡಿದರು ಎಂದು ಮೂಲಗಳು ತಿಳಿಸಿವೆ. ರಾಜ್ಯಪಾಲರಾದ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಗೃಹ ಸಚಿವರು ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ರಾಜ್ಯಪಾಲರು ಕಾನೂನು-ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಶಾ ಅವರಿಗೆ ತಿಳಿಸಿದ್ದಾರೆ ಎಂದು ನಂಬಲಾಗಿದೆ. ರಾಜಧಾನಿ ಇಂಫಾಲ್ ಮತ್ತು ಜಿರಿಬಾಮ್ ನಲ್ಲಿ ಇತ್ತೀಚೆಗೆ ಹಿಂಸಾಚಾರ ನಡೆದಿದೆ. ಜಿರಿಬಾಮ್‌ನಂತಹ ಹೊಸ ಪ್ರದೇಶಗಳಿಗೆ ಹಿಂಸಾಚಾರ ಹರಡಿರುವ ಬಗ್ಗೆ ಕೇಂದ್ರ ಆತಂಕಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಯಾರು ಪಾಲ್ಗೊಂಡಿದ್ದರು?: ರಾಜ್ಯ ಸರ್ಕಾರದ ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್, ಡಿಜಿಪಿ ರಾಜೀವ್ ಸಿಂಗ್ ಮತ್ತು ಮುಖ್ಯ ಕಾರ್ಯದರ್ಶಿ ವಿನೀತ್ ಜೋಶಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋದ ನಿರ್ದೇಶಕ ತಪನ್ ದೇಕಾ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನಿಯೋಜಿತ ಸೇನಾ ಮುಖ್ಯಸ್ಥ ಲೆ.ಜ. ಉಪೇಂದ್ರ ದ್ವಿವೇದಿ ಮತ್ತು ಇತರ ಹಿರಿಯ ಅಧಿಕಾರಿಗಳು ಒಂದು ಗಂಟೆ ಕಾಲ ನಡೆದ ಸಭೆಯಲ್ಲಿ ಉಪಸ್ಥಿತರಿ ದ್ದರು. ಆದರೆ, ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಸಭೆಯಲ್ಲಿ ಹಾಜರಿರಲಿಲ್ಲ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಬಗ್ಗೆ ಸಭೆ ನಡೆಸಿದ ಒಂದು ದಿನದ ನಂತರ ಮಣಿಪುರ ಕುರಿತು ಸಭೆ ನಡೆದಿದೆ.
ಮೇ 3, 2023 ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಬಹುಸಂಖ್ಯಾತ ಮೈತಿ ಸಮುದಾಯ ಪರಿಶಿಷ್ಟ ಪಂಗಡದ ಸ್ಥಾನಮಾನಕ್ಕಾಗಿ ಇರಿಸಿದ ಬೇಡಿಕೆಯನ್ನು ವಿರೋಧಿಸಿ, ಪರ್ವತ ಪ್ರದೇಶದ ಜಿಲ್ಲೆಗಳಲ್ಲಿ ಬುಡಕಟ್ಟು ಐಕಮತ್ಯ ಮೆರವಣಿಗೆ ನಡೆಯಿತು. ಅಲ್ಲಿಂದೀಚೆಗೆ, ಸುಮಾರು 220 ಕ್ಕೂ ಹೆಚ್ಚು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮಣಿಪುರದ ಜನಸಂಖ್ಯೆಯ ಶೇ.53 ರಷ್ಟುಇರುವ ಮೈತಿಗಳು ಇಂಫಾಲ್ ಕಣಿವೆಯಲ್ಲಿ ಹಾಗೂ ಶೇ 40ರಷ್ಟು ಇರುವ ನಾಗಾಗಳು-ಕುಕಿಗಳು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.