ಮೋದಿ ಉತ್ತಮ ಪ್ರಧಾನಿ: ಮಮತಾ ಬ್ಯಾನರ್ಜಿ ಪರೋಕ್ಷ ವ್ಯಂಗ್ಯ

ರಾಜೀವ್‌ ಗಾಂಧಿಯಿಂದ ಮನಮೋಹನ್‌ ಸಿಂಗ್‌ ಅವರ ವರೆಗೆ ಹಲವು ಪ್ರಧಾನಿಗಳೊಂದಿಗೆ ನಾನು ಕೆಲಸ ಮಾಡಿದ್ದೀನಿ. ಆದರೆ, ಇಂತಹ ಪ್ರಧಾನಿಯನ್ನು ನಾನು ಎಲ್ಲಿಯೂ ನೋಡಿಲ್ಲ ಎಂದು ಪರೋಕ್ಷ ವ್ಯಂಗ್ಯ;

Update: 2024-02-18 08:56 GMT
ಮಮತಾ ಬ್ಯಾನರ್ಜಿ

ಜಾತ್ಯತೀತತೆ ಕೆಟ್ಟದು ಅಥವಾ ಪ್ರಜಾಪ್ರಭುತ್ವ ಅಪಾಯಕಾರಿ ಎಂದು ಯಾರಾದರೂ ಹೇಳಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ದೇಶದಲ್ಲಿ ಫೆಡರಲಿಸಂ ಅನ್ನು "ಸಂಪೂರ್ಣವಾಗಿ ನೆಲಸಮ ಮಾಡಲಾಗಿದೆ" ಅಲ್ಲದೇ ಹಲವು ರಾಜ್ಯಗಳಿಗೆ ತಮ್ಮ ಜಿಎಸ್‌ಟಿ ಪಾಲು ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜಾತ್ಯತೀತತೆ ಕೆಟ್ಟದು, ಸಮಾನತೆಯ ಬಗ್ಗೆ ಯೋಚಿಸಲಾಗದು, ಪ್ರಜಾಪ್ರಭುತ್ವ ಅಪಾಯಕಾರಿ ಮತ್ತು ಫೆಡರಲಿಸಂ ರಚನೆ ದುರಂತ ಎಂದು ಯಾರಾದರೂ ಹೇಳಿದರೆ, ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂವಿಧಾನವನ್ನು ಬದಲಾಯಿಸಬೇಕು ಎಂದು ಯಾರಾದರೂ ಹೇಳಿದರೆ, ಅದು ನಿರ್ದಿಷ್ಟ ಸಿದ್ಧಾಂತ ಅಥವಾ ಕೆಲವರನ್ನು ಮೆಚ್ಚಿಸುವ ಪ್ರಯತ್ನ ಮಾತ್ರ ಎಂದು ಮಮತಾ ಬ್ಯಾನರ್ಜಿ ಹೇಳಿದರು.

ಭಾರತಕ್ಕೆ ಹೊಸ ಸಂವಿಧಾನ ಅಗತ್ಯವಿಲ್ಲ. ಆದರೆ, ಭಾರತವು ಇತ್ತೀಚಿನ ದಿನಗಳಲ್ಲಿ ಅಧ್ಯಕ್ಷೀಯ ಚುನಾವಣೆಯತ್ತ ಸಾಗುತ್ತಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. 

ಭಾರತ ಸಂವಿಧಾನದ ಆತ್ಮವು ಅದರ ಪೀಠಿಕೆಯಾಗಿದೆ. ಪ್ರಜಾಪ್ರಭುತ್ವ, ಫೆಡರಲಿಸಂ ಮತ್ತು ಜಾತ್ಯತೀತತೆಯ ಬಗ್ಗೆ ಕಾಳಜಿ ವಹಿಸಿ ದೇಶದ ಸಂವಿಧಾನವನ್ನು ಅತ್ಯಂತ ಶ್ರದ್ಧೆಯಿಂದ ರಚಿಸಲಾಗಿದೆ ಎಂದರು.

ಇನ್ನು ಜನರ ಮೂಲಭೂತ ಹಕ್ಕುಗಳನ್ನು ಹಾಗೂ ದೇಶದ ಸಾರ್ವಭೌಮತ್ವದ ನಡುವಿನ ಸಮತೋಲನವನ್ನು ಹಾನಿಗೊಳಿಸಬಾರದು. ಸಂವಿಧಾನವು ಜನರಿಂದ, ಜನರಿಗೋಸ್ಕರ ಹಾಗೂ ಜನರಿಗಾಗಿ ಇದೆ ಎಂದು ಪ್ರತಿಪಾದಿಸಿದರು.

"ನನಗೆ ಮಾತನಾಡುವ ಹಕ್ಕು ಇಲ್ಲ, ನಾನು ಗಟ್ಟಿಯಾಗಿ ಮಾತನಾಡಿದರೆ, ನಾಳೆ ಇಡಿ (ಜಾರಿ ನಿರ್ದೇಶನಾಲಯ) ನನ್ನ ಮನೆಗೆ ಬರುತ್ತದೆ" ಎಂದು ದೂರಿದರು.

ನಾನು ರಾಜೀವ್ ಗಾಂಧಿಯಿಂದ ಮನಮೋಹನ್ ಸಿಂಗ್ ಅವರ ವರೆಗೆ ಹಲವಾರು ಪ್ರಧಾನಿಗಳೊಂದಿಗೆ ಕೆಲಸ ಮಾಡಿದ್ದೇನೆ. ಆದರೆ,"ಅಂತಹ ಉತ್ತಮ ಪ್ರಧಾನಿಯನ್ನು" ನಾನು ನೋಡಿಲ್ಲ ಎಂದು

ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖ ಮಾಡದೆ ಪರೋಕ್ಷವಾಗಿ ವ್ಯಂಗ್ಯವಾಡಿದರು.

ಟಿಎಂಸಿ ರಾಜಕೀಯ ಸೌಜನ್ಯವನ್ನು ಕಾಯ್ದುಕೊಳ್ಳುತ್ತದೆ. ನಾವು ಎಲ್ಲ ರೀತಿಯ ರಾಜಕೀಯ ಪಕ್ಷಗಳು ಮತ್ತು ನಾಯಕರನ್ನು ಗೌರವಿಸುತ್ತದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರು ಬಂಗಾಳದಿಂದ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಿದ್ದನ್ನು ಅವರು ಸ್ಮರಿಸಿದರು. ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಆದರ್ಶಗಳು

ಮತ್ತು ದೂರದೃಷ್ಟಿಯಿಂದಾಗಿ ಭಾರತದಲ್ಲಿ ಪ್ರಜಾಪ್ರಭುತ್ವದ ಅಡಿಪಾಯ ಸಾಧ್ಯವಾಗಿದೆ ಎಂದರು.

ಸಂವಿಧಾನವು ಸಂಸ್ಕೃತಿ, ಭಾಷೆ, ಧರ್ಮ ಮತ್ತು ಸಮುದಾಯದ ವೈವಿಧ್ಯತೆಯ ನಡುವೆ ಏಕತೆಯನ್ನು ಕಾಪಾಡಲು ಶ್ರಮಿಸಿದೆ. ಅಲ್ಲದೇ ದೇಶದ ಅಗತ್ಯಕ್ಕಾಗಿ ಸಂವಿಧಾನವನ್ನೂ ತಿದ್ದುಪಡಿ ಮಾಡಲಾಗಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೋಡಿದರೆ ನನಗೆ ಭಯವಾಗುತ್ತದೆ. ಭಾರತದ ಪ್ರಜೆಯಾಗಿ ನಾನು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

"ಯಾರಾದರೂ ನಮಗೆ ಏನು ತಿನ್ನಬೇಕು, ಧರಿಸಬೇಕು ಅಥವಾ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ಹೇಳಿದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಅಗತ್ಯವೇನು" ಎಂದು ಅವರು ಪ್ರಶ್ನಿಸಿದರು.

"ನಾವು ಶಾಂತಿಯಿಂದ ಬದುಕಲು ಬಯಸುತ್ತೇವೆ. ಶಾಂತಿಯಿಂದ ಬದುಕುವ ಹಕ್ಕು ಎಲ್ಲರಿಗೂ ಇದೆ" ಎಂದರು. 

Tags:    

Similar News