ಏಪ್ರಿಲ್ 9- ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಲೋಕಸಭೆ ಚುನಾವಣೆಯಲ್ಲಿ ʻಮಹಾಯುತಿ' (ಮಹಾ ಮೈತ್ರಿ)ಗೆ ಬೆಂಬಲ ಘೋಷಿಸಿದ್ದಾರೆ.
ಮುಂಬೈನಲ್ಲಿ ಗುಡಿ ಪಾಡ್ವಾ ಅಂಗವಾಗಿ ನಡೆದ ಪಕ್ಷದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಎನ್‌ಡಿಎ ಮೈತ್ರಿಕೂಟಕ್ಕೆ ಬೇಷರತ್ ಬೆಂಬಲ ಘೋಷಿಸಿದರು. ʻಎಂಎನ್‌ಎಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎಗೆ ಬೇಷರತ್ ಬೆಂಬಲ ನೀಡುತ್ತಿದೆ. ಈಗ ಎಲ್ಲರೂ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿʼ ಎಂದು ಕಾರ್ಯಕರ್ತರಿಗೆ ಸೂಚಿಸಿದರು.
ʻ30 ವರ್ಷಗಳ ನಂತರ ವ್ಯಕ್ತಿಯೊಬ್ಬರು ಪೂರ್ಣ ಬಹುಮತದಿಂದ ಚುನಾಯಿತರಾದರು. ನಿಮಗೆ ನೆನಪಿದ್ದರೆ, ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಬೇಕು ಎಂದು ಬಿಜೆಪಿಯವರಿಗಿಂತ ಮೊದಲು ನಾನು ಹೇಳಿದ್ದೆ. ವಿಧಿ 370 ಕ್ಕಾಗಿ ಅವರನ್ನು ಶ್ಲಾಘಿಸಿದೆ.ಎನ್‌ಆರ್‌ಸಿ ಮೋರ್ಚಾದ ನೇತೃತ್ವ ವಹಿಸಿದೆ,ʼ ಎಂದು ಹೇಳಿದರು.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಕೂಡ ಮಹಾಯುತಿ ಮೈತ್ರಿಕೂಟದ ಭಾಗವಾಗಿವೆ. ಇದುವರೆಗೆ ಎಂಎನ್‌ಎಸ್‌ಗೆ ಸೀಟು ಹಂಚಿಕೆ ಆಗಿಲ್ಲ.
ಶಿಂಧೆ ಧನ್ಯವಾದ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬೇಷರತ್ ಬೆಂಬಲ ನೀಡಿದ ಠಾಕ್ರೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಹೆಸರನ್ನು ಉಲ್ಲೇಖಿಸದೆ, ʻಕೋವಿಡ್ ಸಮಯದಲ್ಲಿ ಮನೆಯಲ್ಲಿ ಕುಳಿತು 'ರೋಕಡ್' (ಹಣ) ಎಣಿಸಿದ್ದವರಿಗೆ ಮೋದಿ ಯನ್ನು ಟೀಕಿಸುವ ಹಕ್ಕಿಲ್ಲʼ ಎಂದು ಗೇಲಿ ಮಾಡಿದರು. ʻಮಹಾಯುತಿಯು ಎಂಎನ್‌ಎಸ್‌ಗೆ ಲೋಕಸಭೆ ಸ್ಥಾನ ನೀಡುವುದೇ?ʼ ಎಂಬ ಪ್ರಶ್ನೆಗೆ, ʻಎಂಎನ್‌ಎಸ್ ಯಾವುದೇ ಷರತ್ತು ಹಾಕಿಲ್ಲʼ ಎಂದು ಶಿಂಧೆ ಹೇಳಿದರು. ತಮ್ಮ ಆಡಳಿತ ಪಕ್ಷವನ್ನು 'ಚೀನೀ ಸೇನೆ' ಎಂದು ಕರೆದಿರುವ ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ʻಯಾರ ಶಿವಸೇನೆ ಅವರದು? ನಮ್ಮದು ಬಾಳಾ ಸಾಹೇಬರ ಸಿದ್ಧಾಂತದ ಪಕ್ಷ. ಬಾಳಾಸಾಹೇಬ್ ಅವರ ಸಿದ್ಧಾಂತ ಅನುಸರಿಸದ ಮತ್ತು ವಿ.ಡಿ. ಸಾವರ್ಕರ್ ಅವರಿಗೆ ಆದ ಅವಮಾನವನ್ನು ಒಪ್ಪಿಕೊಳ್ಳುವವರು ನಮ್ಮನ್ನು ಟೀಕಿಸುವ ಮೊದಲು ಯೋಚಿಸಬೇಕು. ನಾವು ಶಿವಸೇನೆ ಯನ್ನು ಉಳಿಸಲು ಈ ನಿಲುವು ತಳೆದಿದ್ದೇವೆʼ ಎಂದು ಹೇಳಿದರು.