ಮಹಾ ವಿಕಾಸ್ ಅಘಾಡಿ ಚಕ್ರ ಮತ್ತು ಬ್ರೇಕ್ ಇಲ್ಲದ ವಾಹನ: ಪ್ರಧಾನಿ ಮೋದಿಯಿಂದ ಪ್ರತಿಪಕ್ಷಗಳ ಲೇವಡಿ
ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ತಮ್ಮ ಮೊದಲ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮಾತ್ರ ಅಭಿವೃದ್ಧಿ ಮಾಡುತ್ತದೆ ಎಂದು ಹೇಳಿದರು.;
ಮಹಾರಾಷ್ಟ್ರದ ಪ್ರತಿಪಕ್ಷವಾಗಿರುವ ಮಹಾ ವಿಕಾಸ್ ಅಘಾಡಿ ಚಕ್ರ ಅಥವಾ ಬ್ರೇಕ್ ಇಲ್ಲದ ವಾಹನವಾಗಿದ್ದು, ಅಲ್ಲಿ ಡ್ರೈವರ್ ಸೀಟಿನಲ್ಲಿ ಕುಳಿತುಕೊಳ್ಳಲು ಹೋರಾಟ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲೇವಡಿ ಮಾಡಿದ್ದಾರೆ.
ನವೆಂಬರ್ 20 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ತಮ್ಮ ಮೊದಲ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮಾತ್ರ ಮಹಾರಾಷ್ಟ್ರದಲ್ಲಿ ತ್ವರಿತ ಅಭಿವೃದ್ಧಿ ಮಾಡುತ್ತದೆ ಎಂದು ಹೇಳಿದರು.
ಮಹಾರಾಷ್ಟ್ರದೊಂದಿಗಿನ ನನ್ನ ಸಂಬಂಧ ನಿಮಗೆಲ್ಲರಿಗೂ ತಿಳಿದಿದೆ ಎಂಬುದಾಗಿ ಇದೇ ವೇಳೆ ಮೋದಿ ಹೇಳಿದರು. ಉತ್ತರ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, "ನಾವು ಜನರನ್ನು ದೇವರ ಮತ್ತೊಂದು ರೂಪವೆಂದು ಪರಿಗಣಿಸುತ್ತೇವೆ. ಆದರೆ ಕೆಲವರು ಜನರನ್ನು ಲೂಟಿ ಮಾಡಲು ರಾಜಕೀಯದಲ್ಲಿದ್ದಾರೆ" ಎಂದು ಹೇಳಿದರು.
ಮಹಾರಾಷ್ಟ್ರದ ಜನರು ಪ್ರತಿಬಾರಿಯೂ ನನಗೆ ಆಶೀರ್ವಾದ ಮಾಡಿದ್ದಾರೆ. ಏನೇ ಕೇಳಿದರೂ ಪೂರ್ಣ ಮನಸ್ಸಿನಿಂದ ಆಶೀರ್ವಾದ ಮಾಡಿ ಉತ್ತಮ ಹೃದಯದಿಂದ ನೀಡಿದ್ದಾರೆ ಎಂದು ಮೋದಿ ಹೇಳಿದರು.
"ಕಳೆದ ಎರಡೂವರೆ ವರ್ಷಗಳಲ್ಲಿ ಮಹಾರಾಷ್ಟ್ರದ ಅಭಿವೃದ್ಧಿ ಶರ ವೇಗದಲ್ಲಿ ಸಾಗುತ್ತಿದೆ. ಅದನ್ನು ನಿಲ್ಲಿಸಲು ನಾನು ಬಿಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ" ಎಂದು ಮೋದಿ ಹೇಳಿದರು.
ಮಹಾರಾಷ್ಟ್ರಕ್ಕೆ ಅಗತ್ಯವಿರುವ ಉತ್ತಮ ಆಡಳಿತವನ್ನು ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಮಾತ್ರ ನೀಡಬಲ್ಲದು ಎಂದು ಪ್ರಧಾನಿ ಹೇಳಿದರು.
ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಏಕಕಾಲದಲ್ಲಿ ಅಧಿಕಾರದಲ್ಲಿತ್ತು. ಆದರೂ ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ಅಗತ್ಯವನ್ನು ಎಂದಿಗೂ ಭಾವಿಸಲಿಲ್ಲ. ನಾವು ಆ ಕೆಲಸ ಮಾಡಿದ್ದೇವೆ ಎಂದು ಮೋದಿ ಹೇಳಿದರು.
ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರ ಪ್ರಗತಿಯನ್ನು ನೋಡಲು ಸಾಧ್ಯವಾಗದ ಕಾರಣ ಒಂದು ಜಾತಿಯನ್ನು ಮತ್ತೊಂದು ಜಾತಿಯ ವಿರುದ್ಧ ಎತ್ತಿಕಟ್ಟುವ ಅಪಾಯಕಾರಿ ಆಟವನ್ನು ಕಾಂಗ್ರೆಸ್ ಆಡುತ್ತಿದೆ ಎಂದು ಮೋದಿ ಹೇಳಿದರು