ಲೋಕಸಭೆ ಚುನಾವಣೆ 2024: ಮಧ್ಯಾಹ್ನ 3ರವರೆಗೆ ಶೇ.49ರಷ್ಟು ಮತದಾನ; ಬಂಗಾಳದಲ್ಲಿ ಶೇ. 70, ಹಿಂದೆ ಬಿದ್ದ ಯುಪಿ

6ನೇ ಸುತ್ತಿನಲ್ಲಿ ಸ್ಪರ್ಧಿಸುತ್ತಿರುವ ಪ್ರಮುಖ ಅಭ್ಯರ್ಥಿಗಳಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಬಿಜೆಪಿಯ ಮನೇಕಾ ಗಾಂಧಿ, ಸಂಬಿತ್ ಪಾತ್ರ ಮತ್ತು ಮನೋಹರ್ ಲಾಲ್ ಖಟ್ಟರ್, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಕಾಂಗ್ರೆಸ್‌ನ ಕನ್ಹಯ್ಯ ಕುಮಾರ್ ಇದ್ದಾರೆ.;

Update: 2024-05-25 12:51 GMT

ಲೋಕಸಭೆ ಚುನಾವಣೆಯ ಆರನೇ ಹಂತದಲ್ಲಿ ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಲ್ಲಿ ಶನಿವಾರ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯವರೆಗೆ ಶೇ. 49.2 ರಷ್ಟು ಮತದಾನವಾಗಿದೆ.

ಪಶ್ಚಿಮ ಬಂಗಾಳದಲ್ಲಿ ಶೇ. 70.2, ಜಾರ್ಖಂಡ್ ಶೇ.54.34, ಒಡಿಶಾ ಶೇ.48.44, ಹರಿಯಾಣ ಶೇ.46.26, ಬಿಹಾರ ಶೇ.45.21, ದೆಹಲಿ ಶೇ. 44.58, ಜಮ್ಮು-ಕಾಶ್ಮೀರದಲ್ಲಿ ಶೇ. 44.41ಮತದಾನವಾಗಿದೆ. ಉತ್ತರ ಪ್ರದೇಶ ಶೇ.43.95  ಮತದಾನದೊಂದಿಗೆ ಹಿಂದುಳಿದಿದೆ.

ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರಾದ ಎಸ್. ಜೈಶಂಕರ್ ಮತ್ತು ಹರ್ದೀಪ್ ಸಿಂಗ್ ಪುರಿ, ದೆಹಲಿ ಸಚಿವೆ ಅತಿಶಿ ಮರ್ಲೆನಾ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತು ಪೂರ್ವ ದೆಹಲಿ ಸಂಸದ ಗೌತಮ್ ಗಂಭೀರ್ ಆರಂಭಿಕ ಮತದಾರರಲ್ಲಿ ಸೇರಿದ್ದಾರೆ.

6ನೇ ಸುತ್ತಿನ ಮಾಹಿತಿ: 11.13 ಕೋಟಿ ಮತದಾರರಿದ್ದು, 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು ಮತ್ತು 5120 ತೃತೀಯಲಿಂಗಿಗಳು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಚುನಾವಣೆ ಆಯೋಗವು 1.14 ಲಕ್ಷ ಮತಗಟ್ಟೆಗಳನ್ನು ಸ್ಥಾಪಿಸಿದ್ದು, 11.4 ಲಕ್ಷ ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಿದೆ.

ದೇಶದ ಹೆಚ್ಚಿನ ಭಾಗಗಳು ಶಾಖದ ಅಲೆಯಲ್ಲಿ ತತ್ತರಿಸುತ್ತಿರುವುದರಿಂದ, ಪ್ರತಿಕೂಲ ಪರಿಣಾಮವನ್ನು ನಿರ್ವಹಿಸಲು ಕ್ರಮ ತೆಗೆದುಕೊಳ್ಳುವಂತೆ ಚುನಾವಣೆ ಅಧಿಕಾರಿಗಳು ಮತ್ತು ರಾಜ್ಯಗಳಿಗೆ ಇಸಿ ನಿರ್ದೇಶನ ನೀಡಿದೆ.

ಪ್ರಮುಖ ಅಭ್ಯರ್ಥಿಗಳು : ಚುನಾವಣೆ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳೆಂದರೆ, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ರಾವ್ ಇಂದ್ರಜಿತ್ ಸಿಂಗ್ ಮತ್ತು ಕ್ರಿಶನ್ ಪಾಲ್ ಗುರ್ಜರ್, ಬಿಜೆಪಿಯ ಮನೇಕಾ ಗಾಂಧಿ, ಸಂಬಿತ್ ಪಾತ್ರ, ಮನೋಹರ್ ಲಾಲ್ ಖಟ್ಟರ್ ಮತ್ತು ಮನೋಜ್ ತಿವಾರಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ದೀಪೇಂದರ್ ಸಿಂಗ್ ಹೂಡಾ ಬಬ್ಬರ್ ಮತ್ತು ಕಾಂಗ್ರೆಸ್‌ನ ಕನ್ಹಯ್ಯ ಕುಮಾರ್.

ಪಶ್ಚಿಮ ಬಂಗಾಳದ ಐದು ಜಿಲ್ಲೆಗಳಲ್ಲಿ ವ್ಯಾಪಿಸಿರುವ ಬುಡಕಟ್ಟು ಆವಾಸಸ್ಥಾನ ಜಂಗಲ್ ಮಹಲ್ ಪ್ರದೇಶದಲ್ಲಿ ಮತದಾನ ನಡೆಯಲಿದೆ. ತಮ್ಲುಕ್, ಕಂಠಿ, ಘಟಾಲ್, ಜರ್ಗ್ರಾಮ್, ಮೇದಿನಿಪುರ, ಪುರುಲಿಯಾ, ಬಂಕುರಾ ಮತ್ತು ಬಿಷ್ಣುಪುರ್ ಸ್ಥಾನಗಳಿಂದ ಎಂಟು ಪ್ರತಿನಿಧಿಗಳನ್ನು ಲೋಕಸಭೆಗೆ ಕಳುಹಿಸುತ್ತದೆ. 2019 ರ ಚುನಾವಣೆಯಲ್ಲಿ ಎಂಟು ಸ್ಥಾನಗಳಲ್ಲಿ ಬಿಜೆಪಿ ಐದು ಮತ್ತು ಟಿಎಂಸಿ ಮೂರು ಸ್ಥಾನ ಗೆದ್ದುಕೊಂಡಿ ದ್ದವು. ಬಿಜೆಪಿಯ ಹಿರಿಯ ನಾಯಕ ಸುವೇಂದು ಅಧಿಕಾರಿ ಸಹೋದರ ಸೌಮೇಂದು ಅಧಿಕಾರಿಯನ್ನು ಕಂಠಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.

ದೆಹಲಿಯಲ್ಲಿ ಬಿಜೆಪಿ ಮತ್ತು ಇಂಡಿಯ ಒಕ್ಕೂಟದ ಪಾಲುದಾರರು ಎಲ್ಲ ಏಳು ಸ್ಥಾನಗಳಲ್ಲಿ ನೇರ ಮುಖಾಮುಖಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಎಎಪಿ-ಕಾಂಗ್ರೆಸ್, ಬಿಜೆಪಿ ವಿರುದ್ಧ ಜಂಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆಪ್ ನಾಲ್ಕು ಹಾಗೂ ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಉತ್ತರಪ್ರದೇಶದಲ್ಲಿ ಸುಲ್ತಾನ್‌ಪುರ, ಪ್ರತಾಪ್‌ಗಢ, ಫುಲ್‌ಪುರ್, ಅಲಹಾಬಾದ್, ಅಂಬೇಡ್ಕರ್ ನಗರ, ಶ್ರಾವಸ್ತಿ, ಡೊಮರಿಯಾಗಂಜ್, ಬಸ್ತಿ, ಸಂತ ಕಬೀರ್ ನಗರ, ಲಾಲ್‌ಗಂಜ್, ಅಜಂಗಢ್, ಜೌನ್‌ಪುರ್, ಮಚ್ಲಿಶಹರ್ ಮತ್ತು ಭದೋಹಿ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿವೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಿಂದ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಮಿಯಾನ್ ಅಲ್ತಾಫ್ ಸೇರಿದಂತೆ 20 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Tags:    

Similar News