ಯಾರೂ ತಮಿಳಿನಲ್ಲಿ ಸಹಿ ಹಾಕುವುದಿಲ್ಲ: ಭಾಷಾ ವಿವಾದ ಕುರಿತು ಸ್ಟಾಲಿನ್‌ ಟೀಕಿಸಿದ ಮೋದಿ

ಕೇಂದ್ರ ಸರ್ಕಾರವು ತಮಿಳು ಭಾಷೆ ಮತ್ತು ತಮಿಳು ಪರಂಪರೆಯನ್ನು ವಿಶ್ವದ ಮೂಲೆಮೂಲೆಗೂ ತಲುಪಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.;

Update: 2025-04-06 12:50 GMT

ತಮಿಳುನಾಡಿನ ರಾಮೇಶ್ವರಂನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾಷ ನೀತಿ ವಿಚಾರದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಪರೋಕ್ಷವಾಗಿ ಟೀಕಿಸಿದರು. ತಮಿಳುನಾಡಿನ ನಾಯಕರಿಂದ ನನಗೆ ಹಲವಾರು ಪತ್ರಗಳು ಬರುತ್ತವೆ. ಆದರೆ ಯಾರೊಬ್ಬರೂ ತಮಿಳಿನಲ್ಲಿ ಸಹಿ ಹಾಕುವುದಿಲ್ಲ ಎಂದು ಕುಟುಕಿದರು. "ತಮಿಳು ಭಾಷೆಯ ಬಗ್ಗೆ ಅವರಿಗೆ ನಿಜವಾಗಿ ಹೆಮ್ಮೆ ಇದ್ದರೆ, ಕನಿಷ್ಠ ತಮ್ಮ ಭಾಷೆ ತಮಿಳಿನಲ್ಲಿ ಸಹಿ ಮಾಡಲಿ" ಎಂದು ಅವರು ಸವಾಲು ಹಾಕಿದರು.

ರಾಮೇಶ್ವರಂನಲ್ಲಿ ಭಾರತದ ಮೊದಲ 'ವರ್ಟಿಕಲ್​ ಲಿಫ್ಟ್ ಬ್ರಿಜ್​' ಪಂಬನ್ ಸೇತುವೆ ಉದ್ಘಾಟಿಸಿದ ನಂತರ ಮಾತನಾಡಿದ ಮೋದಿ, "ಕೇಂದ್ರ ಸರ್ಕಾರವು ತಮಿಳು ಭಾಷೆ ಮತ್ತು ತಮಿಳು ಪರಂಪರೆಯನ್ನು ವಿಶ್ವದ ಮೂಲೆಮೂಲೆಗೂ ತಲುಪಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಆದರೆ ತಮಿಳುನಾಡಿನ ಕೆಲವು ನಾಯಕರಿಂದ ಬರುವ ಪತ್ರಗಳನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಅದರಲ್ಲಿ ತಮಿಳಿನಲ್ಲಿ ಸಹಿ ಇರುವುದಿಲ್ಲ. ತಮಿಳಿನ ಬಗ್ಗೆ ಹೆಮ್ಮೆ ಇದ್ದರೆ, ಕನಿಷ್ಠ ತಮಿಳಿನಲ್ಲಿ ಸಹಿ ಮಾಡಿ ಎಂದು ವಿನಂತಿಸುತ್ತೇನೆ ಎಂದು ಹೇಳಿದರು.

ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಭಾಷಾ ನೀತಿ ವಿಚಾರದಲ್ಲಿ ತೀವ್ರ ಸಮರ ನಡೆಯುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ತಮಿಳುನಾಡು ತೀವ್ರವಾಗಿ ವಿರೋಧಿಸಿದ್ದು, ಇದು ತಮಿಳು ಭಾಷೆ ಮತ್ತು ಸಂಸ್ಕೃತಿಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದೆ. ಕೇಂದ್ರದ ಬಿಜೆಪಿ ಸರ್ಕಾರವು ಹಿಂದಿಯನ್ನು ಹೇರುವ ಮೂಲಕ ತಮಿಳು ಭಾಷೆಯನ್ನು ಹತ್ತಿಕ್ಕುತ್ತಿದೆ ಟೀಕಿಸಿದೆ. ತಮಿಳುನಾಡು ದ್ವಿಭಾಷಾ ನೀತಿಯಾದ ತಮಿಳು ಮತ್ತು ಇಂಗ್ಲಿಷ್‌ಗೆ ಮಾತ್ರ ಬದ್ಧ ಎಂದು ಸ್ಟಾಲಿನ್ ಸರ್ಕಾರ ಒತ್ತಿ ಹೇಳಿದೆ.

ತಮಿಳಿನಲ್ಲಿ ವೈದ್ಯಕೀಯ ಕೋರ್ಸ್‌ ನೀಡಿ

ತಮಿಳು ಭಾಷೆಯಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಪ್ರಾರಂಭಿಸಲು ಮೋದಿ ತಮಿಳುನಾಡು ಸರ್ಕಾರಕ್ಕೆ ಒತ್ತಾಯಿಸಿದ ಮೋದಿ, " ತಮಿಳು ಭಾಷೆಯಲ್ಲಿ ವೈದ್ಯಕೀಯ ಕೋರ್ಸ್‌ಗಳನ್ನು ಆರಂಭ ಮಾಡುವುದರಿಂದ ಬಡ ಕುಟುಂಬಗಳ ಮಕ್ಕಳು ತಮ್ಮ ವೈದ್ಯರಾಗುವ ಕನಸು ಈಡೇರಿಸಿಕೊಳ್ಳಬಹುದು. ನಮ್ಮ ಯುವಕರು ವಿದೇಶಕ್ಕೆ ಹೋಗದೆ ದೇಶದಲ್ಲೇ ವೈದ್ಯರಾಗಬಹುದು,'' ಎಂದು ಹೇಳಿದರು.

"ಕಳೆದ 10 ವರ್ಷಗಳಲ್ಲಿ ತಮಿಳುನಾಡಿಗೆ 11 ಹೊಸ ವೈದ್ಯಕೀಯ ಕಾಲೇಜುಗಳು ದೊರೆತಿವೆ" ಎಂಬುದಾಗಿ ಅವರು ವಿವರಿಸಿದರು.

ತಮಿಳುನಾಡಿಗೆ ಅನುದಾನ ವಿವಾದ

ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ಅನುದಾನವನ್ನು ತಡೆಹಿಡಿದಿದೆ ಎಂಬ ತಮಿಳುನಾಡು ಸರ್ಕಾರದ ಆರೋಪಗಳನ್ನು ತಳ್ಳಿಹಾಕಿದ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಅಡಿಯಲ್ಲಿ ತಮಿಳುನಾಡಿಗೆ ಅನುದಾನ ಹಂಚಿಕೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಸಮರ್ಥಿಸಿಕೊಂಡರು

"ತಮಿಳುನಾಡಿಗೆ ಮೂಲಸೌಕರ್ಯ ಕಲ್ಪಿಸುವುದು ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಕಳೆದ ದಶಕದಲ್ಲಿ ರಾಜ್ಯದ ರೈಲು ಬಜೆಟ್ ಏಳು ಪಟ್ಟು ಹೆಚ್ಚಾಗಿದೆ. 2014ರ ಮೊದಲು ವರ್ಷಕ್ಕೆ ಕೇವಲ 900 ಕೋಟಿ ರೂಪಾಯಿ ಇದ್ದ ಬಜೆಟ್​ ಈಗ 6,000 ಕೋಟಿ ರೂಪಾಯಿಗಳನ್ನು ಮೀರಿದೆ. ಇದರ ಜೊತೆಗೆ, 77 ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಇದರಲ್ಲಿ ರಾಮೇಶ್ವರಂ ಕೂಡ ಸೇರಿದೆ" ಎಂದು ಅವರು ತಿಳಿಸಿದರು.

ಸ್ಟಾಲಿನ್‌ ಗೈರು

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪಂಬನ್ ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ. ಊಟಿಯ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು ಅಲ್ಲಿ ಮಾತನಾಡಿ, ಜನಸಂಖ್ಯಾ ಸ್ಫೋಟ ನಿಯಂತ್ರಿಸಿದ ತಮಿಳುನಾಡು ಮತ್ತು ಇತರ ರಾಜ್ಯಗಳು ಮುಂಬರುವ ಲೋಕಸಭಾ ಸೀಟುಗಳ ಮರುಹಂಚಿಕೆಯಲ್ಲಿ ನಷ್ಟ ಮಾಡಿಕೊಳ್ಳಲಿವೆ ಎಂದು ಪ್ರತಿಪಾದಿಸಿದರು. "ತಮಿಳುನಾಡು ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ರಾಜ್ಯಗಳ ಪಾರ್ಲಿಮೆಂಟ್ ಸೀಟುಗಳ ಪ್ರಮಾಣ ಶೇಕಡಾವಾರು ಆಧಾರದಲ್ಲಿ ಕಡಿಮೆಯಾಗದಂತೆ ಪ್ರಧಾನ ಮಂತ್ರಿಯವರು ನೋಡಿಕೊಳ್ಳಬೇಕು " ಎಂದು ಸ್ಟಾಲಿನ್ ಒತ್ತಾಯಿಸಿದರು.

Tags:    

Similar News