ಕುನೊ ರಾಷ್ಟ್ರೀಯ ಉದ್ಯಾನದಲ್ಲಿ ಐದು ಮರಿಗಳಿಗೆ ಜನ್ಮ ನೀಡಿದ ಚೀತಾ
ಐದು ಮರಿಗಳ ಜನನದೊಂದಿಗೆ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ ಹಾಗೂ ಮರಿಗಳ ಸಂಖ್ಯೆ 29 ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಒಟ್ಟು ಚೀತಾಗಳ ಸಂಖ್ಯೆ 31 ಆಗಿದೆ.;
ತನ್ನ ಮರಿಗಳೊಂದಿಗೆ ಕುಳಿತಿರುವ ಚೀತಾ (ಎಕ್ಸ್ ಖಾತೆಯಿಂದ)
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ನೀರ್ವಾ ಎಂಬ ಐದು ವರ್ಷದ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಮುಖ್ಯಮಂತ್ರಿ ಮೋಹನ್ ಯಾದವ್ ʼಐದು ವರ್ಷದ ನಿರ್ವಾ ಎಂಬ ಹೆಸರಿನ ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ. ಇದು ಚೀತಾ ಯೋಜನೆಯ ಯಶಸ್ಸು ಹಾಗೂ ಭಾರತದ ಜೀವವೈವಿಧ್ಯದ ಶ್ರೀಮಂತಿಕೆ ತೋರಿಸುತ್ತದೆ,'' ಎಂದು ಪೋಸ್ಟ್ ಮಾಡಿದ್ದಾರೆ.
ಇವುಗಳ ಜನನದೊಂದಿಗೆ ಕುನೊ ರಾಷ್ಟ್ರೀಯ ಉದ್ಯಾನದಲ್ಲಿನ ಚೀತಾ ಹಾಗೂ ಮರಿಗಳ ಸಂಖ್ಯೆ 29 ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿ ಒಟ್ಟು ಚೀತಾಗಳ ಸಂಖ್ಯೆ 31 ಆಗಿದೆ.
ಆಫ್ರಿಕಾ ಖಂಡದಿಂದ ಚೀತಾಗಳನ್ನು ಭಾರತಕ್ಕೆ ಕರೆತರುವ ಅಂತರ ಖಂಡ ಹಸ್ತಾಂತರದ ಯೋಜನೆಯ ಭಾಗವಾಗಿ 20 ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಕರೆತರಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಹಾಗೂ 2023 ರ ಫೆಬ್ರುವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ತರಿಸಲಾಗಿತ್ತು.
ಆಫ್ರಿಕಾದಿಂದ ಪ್ರತಿ ವರ್ಷ 12 ರಿಂದ 14 ಚೀತಾಗಳನ್ನು ಕರೆತರುವ ಯೋಜನೆಯ ಭಾಗವಾಗಿ ಕ್ರಿಯಾ ಯೋಜನೆಯನ್ನು ಮರಳಿ ಜಾರಿಗೆ ತರಲಾಗಿದ್ದು, ಇದರಲ್ಲಿ ನಮೀಬಿಯಾ ಸೇರಿದಂತೆ ಆಫ್ರಿಕಾ ಖಂಡದ ಇತರ ರಾಷ್ಟ್ರಗಳಿಂದ ಮುಂದಿನ ಐದು ವರ್ಷಗಳಿಗೆ ಯೋಜನೆ ರೂಪಿಸಲಾಗಿದ್ದು, ಕೀನ್ಯಾ ಸರ್ಕಾರ ಇನ್ನಷ್ಟೇ ಅನುಮತಿ ನೀಡಬೇಕಿದೆ.
ನಮೀಬಿಯಾದಿಂದ ಕರೆತರಲಾದ ಚೀತಾದಲ್ಲಿ ಪವನ್ ಎಂಬ ಚೀತಾ ಕಳೆದ ವರ್ಷ ವಿಷ ಪ್ರಾಶನದಿಂದ ಮೃತಪಟ್ಟಿದೆ ಎಂದು ಆರೋಪಿಸಲಾಗಿತ್ತು. ಆದರೆ ಪ್ರಾಣಿಯ ಜೊಲ್ಲು ಹಾಗೂ ದೇಹದ ಇತರ ಭಾಗಗಳಲ್ಲಿ ವಿಷದ ಪ್ರಮಾಣ ಪತ್ತೆಯಾಗಿಲ್ಲ. ಅವೆಲ್ಲವೂ ಉಹಾಪೋಹ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಸ್ಪಷ್ಟಪಡಿಸಿದ್ದರು.