ಒಡೆದು ಆಳುವ ಮೋದಿ ನೀತಿಗೆ ಮತದಾರರ ತಿರಸ್ವೀಕಾರ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಪಕ್ಷ ಈಗ ಅಧಿಕಾರದಲ್ಲಿರುವ ಕೆಲವೆಡೆ ಉತ್ತಮ ಸಾಧನೆ ಮಾಡದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಲು ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅನುಸರಿಸುತ್ತಿರುವ ಒಡೆದು ಆಳುವ ನೀತಿ, ದ್ವೇಷ ಮತ್ತು ಧ್ರುವೀಕರಣದ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಪಕ್ಷ ಈಗ ಅಧಿಕಾರದಲ್ಲಿರುವ ಕೆಲವೆಡೆ ಉತ್ತಮ ಸಾಧನೆ ಮಾಡದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದೂ ಹೇಳಿದರು.
ಬಿಜೆಪಿ ವಿರೋಧಿ ತೀರ್ಪು
ಜನರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಮಾರ್ಗಗಳ ವಿರುದ್ಧ ಮತ ಚಲಾಯಿಸಿದ್ದಾರೆ. ಇದು ಕಳೆದ 10 ವರ್ಷಗಳ ರಾಜಕೀಯದ ಬಗೆಗಿನ ನಿರ್ಣಾಯಕ ನಿರಾಕರಣೆಯಾಗಿದೆ. ವಿಭಜನೆ, ದ್ವೇಷ ಮತ್ತು ಧ್ರುವೀಕರಣದ ರಾಜಕೀಯವನ್ನು ಜನರು ತಿರಸ್ಕರಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಮತದಾರರು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಬಲ್ಯವಿರುವ ಲೋಕಸಭೆ ಸ್ಥಾನಗಳಲ್ಲಿ ಕಾಂಗ್ರೆಸ್ ಹೆಚ್ಚಳ ಕಂಡಿದೆ ಎಂದು ಎಂದು ಅವರು ತಿಳಿಸಿದರು.
ನಗರ ಪ್ರದೇಶಗಳು
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತನ್ನ ಶಕ್ತಿಯನ್ನು ಕೇಂದ್ರೀಕರಿಸುವ ಅಗತ್ಯವಿದೆ. ನಗರ ಮತದಾರರಲ್ಲಿ ಪಕ್ಷದ ಪ್ರಭಾವವನ್ನು ಬಲಪಡಿಸಲು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದ್ದರೂ ಲೋಕಸಭೆಯಲ್ಲಿ ಆ ಯಶಸ್ಸನ್ನು ಪುನರಾವರ್ತಿಸಲು ವಿಫಲವಾಗಿದೆ. ನಾವು ಶೀಘ್ರದಲ್ಲೇ ಈ ಎಲ್ಲಾ ವಿಷಯಗಳನ್ನು ಪ್ರತ್ಯೇಕವಾಗಿ ಚರ್ಚಿಸುತ್ತೇವೆ. ನಾವು ಕೂಡ ತಕ್ಷಣದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು. ಕಾಂಗ್ರೆಸ್ ಆಳ್ವಿಕೆ ಇರುವ ಕರ್ನಾಟಕದಲ್ಲಿ ಕಾಂಗ್ರೆಸ್ 28 ಲೋಕಸಭಾ ಸ್ಥಾನಗಳಲ್ಲಿ ಕೇವಲ ಒಂಬತ್ತು ಸ್ಥಾನಗಳನ್ನು ಗೆದ್ದಿದೆ ಮತ್ತು ಹಿಮಾಚಲ ಪ್ರದೇಶವನ್ನು ಬಿಜೆಪಿ ಎಲ್ಲಾ ಸಂಸದೀಯ ಸ್ಥಾನಗಳನ್ನು ಗೆದ್ದಿದೆ.
ಇಂಡಿಯಾ ಬಣದ ಪಾಲುದಾರರ ಕೊಡುಗೆಗಳನ್ನು ಶ್ಲಾಘಿಸಿದ ಖರ್ಗೆ
ವಿವಿಧ ರಾಜ್ಯಗಳಲ್ಲಿ ಪ್ರತಿ ಪಕ್ಷವು ತನ್ನ ನಿಯೋಜಿತ ಪಾತ್ರವನ್ನು ನಿರ್ವಹಿಸಿದ, ಪ್ರತಿ ಪಕ್ಷವು ಇನ್ನೊಂದಕ್ಕೆ ಕೊಡುಗೆ ನೀಡಿದ ಇಂಡಿಯಾ ಮೈತ್ರಿ ಪಾಲುದಾರರನ್ನು ನಾನು ಒಪ್ಪಿಕೊಳ್ಳದಿದ್ದರೆ ನಾನು ನನ್ನ ಕರ್ತವ್ಯದಲ್ಲಿ ವಿಫಲನಾಗುವೆ. ಇಂಡಿಯಾ ಮೈತ್ರಿ ಕೂಟ ಮುಂದುವರಿಯಬೇಕು ಎಂಬುದು ನಮ್ಮ ಸಂಕಲ್ಪ. ನಾವು ಸಂಸತ್ತಿನಲ್ಲಿ ಮತ್ತು ಹೊರಗೆ ಒಗ್ಗಟ್ಟಿನಿಂದ ಮತ್ತು ಸಾಮೂಹಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಿಪಿಪಿ ಸಭೆ
ಲೋಕಸಭೆ ಮತ್ತು ರಾಜ್ಯಸಭೆಗೆ ಹೊಸದಾಗಿ ಆಯ್ಕೆಯಾದ ಎಲ್ಲ ಸಂಸದರನ್ನು ಒಳಗೊಂಡ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಸಭೆ ಶನಿವಾರ ಸಂಜೆ ದೆಹಲಿಯಲ್ಲಿ ನಡೆಯಲಿದೆ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಸಿಪಿಪಿ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮರು ಆಯ್ಕೆಯಾಗುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ, 2019 ರ ಚುನಾವಣೆಯಲ್ಲಿ 52 ರಿಂದ 99 ಕ್ಕೆ ಸುಧಾರಿಸಿದೆ.