Wayanad Landslide| ಹಾನಿಗೀಡಾದ ಕುಟುಂಬಗಳಿಗೆ ತುರ್ತು ಆರ್ಥಿಕ ನೆರವು
ತಿರುವನಂತಪುರಂ: ವಯನಾಡು ಜಿಲ್ಲೆಯ ಮುಂಡಕ್ಕೈ ಮತ್ತು ಚೂರಲ್ಮಲಾ ಗ್ರಾಮಗಳಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದಲ್ಲಿ ಮನೆ ಕಳೆದುಕೊಂಡಿರುವವರಿಗೆ ಹೊಸ ಸ್ಥಳಕ್ಕೆ ಸ್ಥಳಾಂತರಿಸಲು ಆರ್ಥಿಕ ನೆರವು ನೀಡುವುದಾಗಿ ಕೇರಳ ಸರ್ಕಾರ ಶುಕ್ರವಾರ ಘೋಷಿಸಿದೆ. ಈ ಪ್ರದೇಶಗಳಲ್ಲಿರುವ, ದುರಂತದಿಂದ ಸಂತ್ರಸ್ತರಾದ ಎಲ್ಲರಿಗೂ ಈ ನೆರವು ಲಭ್ಯವಾಗಲಿದೆ.
ವಿಪತ್ತಿನಿಂದ ತಮ್ಮ ಆದಾಯದ ಮೂಲವನ್ನು ಕಳೆದುಕೊಂಡಿರುವ ಕುಟುಂಬಗಳ ವಯಸ್ಕರಿಗೆ ಸರ್ಕಾರ ದಿನಕ್ಕೆ 300 ರೂ., ನೀಡಲಿದ್ದು, ಇದು ಪ್ರತಿ ಕುಟುಂಬದ ಇಬ್ಬರು ಸದಸ್ಯರಿಗೆ ಸೀಮಿತವಾಗಿರುತ್ತದೆ. ಕುಟುಂಬದ ಸದಸ್ಯರು ಗಂಭೀರ ಅನಾರೋಗ್ಯಕ್ಕೆ ಈಡಾಗಿದ್ದರೆ ಅಥವಾ ಆಸ್ಪತ್ರೆಗೆ ದಾಖಲಾಗಿದ್ದರೆ, ಈ ಪ್ರಯೋಜನವನ್ನು ಮೂವರಿಗೆ ವಿಸ್ತರಿಸಲಾಗುತ್ತದೆ. ಗರಿಷ್ಠ 30 ದಿನ ಈ ನೆರವು ನೀಡಲಾಗುತ್ತದೆ. ಪರಿಹಾರ ಶಿಬಿರದಲ್ಲಿ ವಾಸಿಸುತ್ತಿರುವ ಪ್ರತಿ ಕುಟುಂಬಕ್ಕೆ 10,000 ರೂ. ತುರ್ತು ಆರ್ಥಿಕ ನೆರವು ನೀಡಲಾಗುತ್ತದೆ.
ದುರಂತದಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಅಥವಾ ಸಾರ್ವಜನಿಕ ಒಡೆತನದ ಆಸ್ತಿಯಲ್ಲಿ ವಸತಿ ಸೌಲಭ್ಯ ಒದಗಿಸುವ ಸಾಧ್ಯತೆಯನ್ನು ಸರ್ಕಾರ ಅನ್ವೇಷಿಸುತ್ತಿದೆ. ಈ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಿದ್ದು, ವರದಿ ಬಂದ ನಂತರ ಸರಕಾರವು ಬಾಡಿಗೆ ನಿಗದಿ ಮಾಡಿ ನೆರವು ನೀಡಲಿದೆ.
ವಯನಾಡಿನಲ್ಲಿ ಜುಲೈ 30 ರಂದು ಸಂಭವಿಸಿದ ಭಾರೀ ಭೂಕುಸಿತದಲ್ಲಿ 226 ಜನರು ಸಾವನ್ನಪ್ಪಿದ್ದಾರೆ ಮತ್ತು 130 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.