Wayanad landslides | ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ

ಕೇರಳ ಸರ್ಕಾರವು ಭೂಕುಸಿತ ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗೆ 2,000 ಕೋಟಿ ರೂ. ನೆರವು ಕೋರಿರುವ ಸಮಯದಲ್ಲಿಯೇ ಮೋದಿ ಅವರ ಭೇಟಿ ನಡೆದಿದೆ.

Update: 2024-08-10 10:20 GMT

ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕೇರಳದ ವಯನಾಡ್ ಜಿಲ್ಲೆಯ ಭೂಕುಸಿತ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು. ಆನಂತರ ಭೂಕುಸಿತ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದರು. 

ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಚೂರಲ್‌ಮಲಾ, ಮುಂಡಕ್ಕೈ ಮತ್ತು ಪುಂಚಿರಿಮಟ್ಟಂ ಕುಗ್ರಾಮಗಳ ವೈಮಾನಿಕ ಸಮೀಕ್ಷೆ ನಡೆಸಿದ ಮೋದಿ ಅವರು, ಬೆಳಗ್ಗೆ 11.15ರ ಸುಮಾರಿಗೆ ಕಣ್ಣೂರು ವಿಮಾನ ನಿಲ್ದಾಣದಿಂದ ವಯನಾಡ್‌ಗೆ ತೆರಳಿದರು. ಚೂರಲ್ಮಲಾ ಕಡೆಗೆ ಬೆಂಗಾವಲು ಪಡೆಯೊಂದಿಗೆ ತೆರಳಿ, ತಾತ್ಕಾಲಿಕವಾಗಿ ನಿರ್ಮಿಸಲಾದ ಬೈಲಿ ಸೇತುವೆಯಲ್ಲಿ ಸೇನೆ ಮತ್ತು ಇತರ ರಕ್ಷಣಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. 

ವಿಮಾನದಿಂದ ಇರುವಝಿಂಜಿಪುಳದ ಭೂಕುಸಿತದ ಮೂಲವನ್ನು ವೀಕ್ಷಿಸಿದರು. ಪ್ರಧಾನಮಂತ್ರಿ ಅವರೊಂದಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಕೇಂದ್ರ ಪ್ರವಾಸೋದ್ಯಮ ಮತ್ತು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಉಪಸ್ಥಿತರಿದ್ದರು. 

ವೈಮಾನಿಕ ಸಮೀಕ್ಷೆ ನಂತರ, ಕಲ್ಪೆಟ್ಟಾದ ಎಸ್‌ಕೆಎಂಜೆ ಹೈಯರ್ ಸೆಕೆಂಡರಿ ಶಾಲೆಗೆ ಬಂದಿಳಿದ ಅವರು ಅಲ್ಲಿಂದ ರಸ್ತೆ ಮೂಲಕ ಚೂರಲ್‌ಮಲಾಗೆ ತೆರಳಿದರು. ದುರಂತದ ನಂತರ ಸೇನೆ ನಿರ್ಮಿಸಿದ 190 ಅಡಿ ಉದ್ದದ ಬೈಲಿ ಸೇತುವೆ ಮೇಲೆ ನಡೆದರು, ಹಾನಿಯ ಸಮೀಕ್ಷೆ ನಡೆಸಿದರು.  

ಚೂರಲ್ಮಲಾ ತಲುಪಿದ ನಂತರ, ಮೋದಿ ಅವರು ರಕ್ಷಣಾ ಸಿಬ್ಬಂದಿ, ರಾಜ್ಯ ಮುಖ್ಯ ಕಾರ್ಯದರ್ಶಿ ವಿ.ವೇಣು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಬಂಡೆಗಳು ಮತ್ತು ಅವಶೇಷಗಳಿಂದ ಆವೃತವಾದ ಪ್ರದೇಶದ ಸಮೀಕ್ಷೆ ಮಾಡಿದರು. 

ಚೂರಲ್‌ಮಲಾಗೆ ತೆರಳುವ ಮಾರ್ಗದುದ್ದಕ್ಕೂ ರಸ್ತೆಬದಿಯಲ್ಲಿ ನೂರಾರು ಮಂದಿ ಜಮಾಯಿಸಿ, ಪ್ರಧಾನಿ ಅವರ ದರ್ಶನ ಪಡೆದರು.

ವಿಪತ್ತು ಪೀಡಿತ ಪ್ರದೇಶದಲ್ಲಿ ಪುನರ್ವಸತಿ ಮತ್ತು ಪರಿಹಾರ ಕಾರ್ಯಗಳಿಗಾಗಿ ಕೇರಳ ಸರ್ಕಾರ 2,000 ಕೋಟಿ ರೂ. ನೆರವು ಕೋರಿರುವ ಸಂದರ್ಭದಲ್ಲೇ ಮೋದಿ ಅವರ ಭೇಟಿ ನಡೆದಿದೆ. 

ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಸ್ಥಳಾಂತರ ಪ್ರಯತ್ನಗಳ ಬಗ್ಗೆ ಅವರಿಗೆ ವಿವರಿಸಿದರು. ಮೋದಿ ಅವರು ಪರಿಹಾರ ಶಿಬಿರ ಮತ್ತು ಆಸ್ಪತ್ರೆಗೆ ಭೇಟಿ ನೀಡಲಿದ್ದು, ಅಲ್ಲಿ ಭೂಕುಸಿತದಿಂದ ಸಂತ್ರಸ್ತರು ಮತ್ತು ಬದುಕುಳಿದವರನ್ನು ಭೇಟಿ ಮಾಡಿ ಸಂವಾದ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನಂತರ ಅವರು ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಘಟನೆ ಮತ್ತು ನಡೆಯುತ್ತಿರುವ ಪರಿಹಾರ ಪ್ರಯತ್ನಗಳ ಬಗ್ಗೆ ವಿವರ ಪಡೆಯಲಿದ್ದಾರೆ. 

ಏತನ್ಮಧ್ಯೆ, ವಯನಾಡಿನ ಮಾಜಿ ಸಂಸದ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಭೇಟಿ ನಂತರ ಪ್ರಧಾನಿ ವಯನಾಡ್ ಭೂಕುಸಿತವನ್ನು ʻರಾಷ್ಟ್ರೀಯ ವಿಪತ್ತುʼ ಎಂದು ಘೋಷಿಸುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು. 

ʻದುರಂತದ ಬಗ್ಗೆ ವೈಯಕ್ತಿಕ ಅವಲೋಕನಕ್ಕಾಗಿ ವಯನಾಡ್‌ಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು. ಇದೊಂದು ಒಳ್ಳೆಯ ನಿರ್ಧಾರ. ವಿನಾಶದ ಪ್ರಮಾಣವನ್ನು ನೋಡಿದ ನಂತರ ಅವರು ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುತ್ತಾರೆ ಎಂದು ನನಗೆ ವಿಶ್ವಾಸವಿದೆʼ ಎಂದು ರಾಹುಲ್ ಶುಕ್ರವಾರ ರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಾರದ ಆರಂಭದಲ್ಲಿ ಮೋದಿ ಅವರ ವಯನಾಡ್ ಭೇಟಿಯನ್ನು ಪತ್ರಿಕಾಗೋಷ್ಠಿ ಯಲ್ಲಿ ಪ್ರಕಟಿಸಿದ್ದರು. ಕೇಂದ್ರ ಸರ್ಕಾರ ಇದನ್ನು ರಾಷ್ಟ್ರೀಯ ವಿಪತ್ತು ಮತ್ತು ತೀವ್ರ ವಿಪತ್ತು ಎಂದು ಘೋಷಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

ಜುಲೈ 30 ರ ಭೂಕುಸಿತದಿಂದ ಕನಿಷ್ಠ 226 ಜನರು ಸಾವನ್ನಪ್ಪಿದ್ದಾರೆ. ಇದು ಕೇರಳದ ಮೇಲೆ ಪ್ರಭಾವ ಬೀರಿದ ಅತಿದೊಡ್ಡ ನೈಸರ್ಗಿಕ ವಿಕೋಪಗಳಲ್ಲಿ ಒಂದಾಗಿದೆ.

Tags:    

Similar News