ಶಿಸ್ತು ಉಲ್ಲಂಘನೆ | ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿದ ಕೇರಳ ಸರ್ಕಾರ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಕಾರ್ಯದರ್ಶಿ ಬಳಿಯಿಂದ ಪ್ರಕರಣದ ಕುರಿತು ವರದಿ ಪಡೆದು ಅದರ ಆಧಾರದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಿದ್ದಾರೆ. ಅಲ್ಲದೆ ಅಧಿಕಾರಿಗಳು ಶಿಸ್ತು ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.;
ಶಿಸ್ತು ಉಲ್ಲಂಘನೆ ಮಾಡಿರುವ ಇಬ್ಬರು ಐಎಎಸ್ ಅಧಿಕಾರಿಗಳಾದ ಕೆ ಗೋಪಾಲಕೃಷ್ಣನ್ ಮತ್ತು ಎನ್ ಪ್ರಶಾಂತ್ ಅವರನ್ನು ಕೇರಳ ಸರಕಾರ ಸೋಮವಾರ (ನ.11ರಂದು) ಅಮಾನತು ಮಾಡಿದೆ. ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಧರ್ಮಾಧಾರಿತ ವಾಟ್ಸ್‌ಆಪ್ ಗ್ರೂಪ್ ರಚಿಸಿದ್ದಕ್ಕಾಗಿ ಗೋಪಾಲಕೃಷ್ಣನ್ ಅವರನ್ನು ಅಮಾನತುಗೊಳಿಸಿದ್ದರೆ, ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಐಎಎಸ್ ಅಧಿಕಾರಿಯನ್ನು ಟೀಕಿಸಿದ್ದಕ್ಕಾಗಿ ಪ್ರಶಾಂತ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಕಾರ್ಯದರ್ಶಿ ಬಳಿಯಿಂದ ಪ್ರಕರಣದ ಕುರಿತು ವರದಿ ಪಡೆದು ಅದರ ಆಧಾರದ ಮೇಲೆ ಅಧಿಕಾರಿಗಳನ್ನು ಅಮಾನತು ಮಾಡಲು ಆದೇಶಿಸಿದ್ದಾರೆ.
ಗೋಲಕೃಷ್ಣನ್ ಅವರು ಕೈಗಾರಿಕೆ ಮತ್ತು ವಾಣಿಜ್ಯ ನಿರ್ದೇಶಕರಾಗಿದ್ದರು ಮತ್ತು ಪ್ರಶಾಂತ್ ಅವರು ಕೃಷಿ ಅಭಿವೃದ್ಧಿ ಮತ್ತು ರೈತರ ಕಲ್ಯಾಣ ಇಲಾಖೆಯ ವಿಶೇಷ ಕಾರ್ಯದರ್ಶಿ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎ. ಜಯತಿಲಕ್ ಅವರು ತಮ್ಮ ವಿರುದ್ಧ ಆಧಾರರಹಿತ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಪ್ರಶಾಂತ್ ಇತ್ತೀಚೆಗೆ ಫೇಸ್‌ಬುಕ್ ಮೂಲಕ ಆರೋಪಿಸಿದ್ದರು. ಈ ಮೂಲಕ ಅವರು ತಪ್ಪು ಮಾಡಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಜಯತಿಲಕ್ ಅವರು ʼವಿಶೇಷ ವರದಿಗಾರರಾಗಿದ್ದಾರೆʼ ಮತ್ತು ಮಾಧ್ಯಮಗಳ ಮೂಲಕ ಆಧಾರರಹಿತ ಆರೋಪಗಳನ್ನು ಹರಡುವ ಮೂಲಕ ತಮ್ಮನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಾಂತ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿದ್ದರು. ಜಯತಿಲಕ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಹಿರಿಯ ಐಎಎಸ್ ಅಧಿಕಾರಿ ಜಯತಿಲಕ್ ಅವರ ಬಗ್ಗೆ ಕೆಲವು ಪ್ರಮುಖ ಸಂಗತಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಜನರು ಅದನ್ನು ತಿಳಿದುಕೊಳ್ಳಬೇಕಾಗಿದೆ ಬರೆದುಕೊಂಡಿದ್ದರು.
ನಾನು ಸಾಮಾನ್ಯವಾಗಿ ಸರ್ಕಾರಿ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಈ ಹಂತದಲ್ಲಿ ಅನ್ಯ ಮಾರ್ಗವಿಲ್ಲ. ಮಾಹಿತಿ ಹಕ್ಕಿಗೆ ಅನುಗುಣವಾಗಿ ಸಾರ್ವಜನಿಕರು ತಿಳಿದುಕೊಳ್ಳಬಹುದಾದ ವಿಷಯಗಳನ್ನು ಮಾತ್ರ ಬಹಿರಂಗಪಡಿಸುವುದು ನನ್ನ ಉದ್ದೇಶ. ಎಂದು ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ಕಲ್ಯಾಣಕ್ಕಾಗಿ ಮೀಸಲಾಗಿರುವ 'ಉನ್ನತಿ'ಯ ಹಲವಾರು ನಿರ್ಣಾಯಕ ಕಡತಗಳು ಪ್ರಶಾಂತ್ ಸಿಇಒ ಆಗಿದ್ದ ಅವಧಿಯಲ್ಲಿ ನಿಗೂಢವಾಗಿ ಕಾಣೆಯಾಗಿವೆ ಎಂದು ಮಾಧ್ಯಮ ವರದಿಯ ನಂತರ ಈ ವಿಷಯ ಬೆಳಕಿಗೆ ಬಂದಿದೆ ಎಂದು ಜಯತಿಲಕನ್ ಹೇಳಿದ್ದರು. ಅದರ ವಿರುದ್ಧ ಪ್ರಶಾಂತ್ ಸಿಡಿದೆದ್ದು ಫೇಸ್‌ಬುಕ್ ಪೋಸ್ಟ್ ಮಾಡಿದ್ದರು.
ಈ ಹಿಂದೆ ಕೋಝಿಕೋಡ್ ಜಿಲ್ಲಾಧಿಕಾರಿಯಾಗಿ ಮತ್ತು ಇತರ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಪ್ರಶಾಂತ್ ಅವರು 'ಕಲೆಕ್ಟರ್ ಬ್ರೋ' ಎಂದು ಜನಪ್ರಿಯರಾಗಿದ್ದಾರೆ. ಈ ಹಿಂದೆಯೂ ಅವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಲು ಫೇಸ್‌ಬುಕ್ ಮೊರೆ ಹೋಗಿದ್ದರು.
ಧರ್ಮ ಆಧಾರಿತ ಅಧಿಕಾರಿಗಳ ಗ್ರೂಪ್
ಧರ್ಮಾಧಾರಿತ ವಾಟ್ಸ್ಆ್ಯಪ್ ಗ್ರೂಪ್‌ಗಳನ್ನು ರಚಿಸಲು ಗೋಪಾಲಕೃಷ್ಣನ್ ಅವರ ವಾಟ್ಸಾಪ್ ಸಂಖ್ಯೆ ಬಳಸಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ತನಿಖೆ ನಡೆಸಿದ್ದರು. ತಿರುವನಂತಪುರಂ ನಗರ ಪೊಲೀಸರು ತನಿಖೆ ನಡೆಸಿ ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ವರದಿ ಸಲ್ಲಿಸಿದ್ದರು. ಆರಂಭದಲ್ಲಿ ಐಎಎಸ್ ಅಧಿಕಾರಿ ಫೋನ್ ಹ್ಯಾಕ್ ಆಗಿದೆ ಎಂದಿದ್ದರು. ಆದರೆ, ಐಎಎಸ್ ಅಧಿಕಾರಿಯ ಫೋನ್ ಅನ್ನು ಹ್ಯಾಕ್ ಮಾಡಲಾಗಿಲ್ಲ ಎಂದು ತನಿಖಾ ವರದಿಯಲ್ಲಿದೆ.
ತಿರುವನಂತಪುರಂ ನಗರ ಪೊಲೀಸ್ ಆಯುಕ್ತ ಸ್ಪರ್ಜನ್ ಕುಮಾರ್ ಅವರು ಸಾಧನವನ್ನು 'ರಿ ಸೆಟ್ ಮಾಡಲಾಗಿದೆ ' ಎಂದು ಹೇಳಿದ್ದಾರೆ. ಈ ಮೂಲಕ ಫೋನ್ ಅನ್ನು ಉದ್ದೇಶಪೂರ್ವಕವಾಗಿ ರಿಸೆಟ್ ಮಾಡಿರುವುದು ಗೊತ್ತಾಗಿದೆ..
ವಿವಾದಾತ್ಮಕ ವಾಟ್ಸಾಪ್ ಗ್ರೂಪ್‌ನಲ್ಲಿ ವಿವಿಧ ಸಮುದಾಯಗಳ ಅಧಿಕಾರಿಗಳನ್ನು ಸೇರಿಸಲಾಗಿತ್ತು. ಗುಂಪನ್ನು ಹಿಂದೂ ಸಮುದಾಯದ ಗುಂಪು ಎಂದು ಹೆಸರಿಸಲಾಗಿತ್ತು. ಗೋಪಾಲಕೃಷ್ಣನ್ ಅವರು ಪ್ರಕರಣ ಬೆಳಕಿಗೆ ಬಂದ ವೇಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಅವರು ಗುಂಪಿಗೆ ತಾವು ಯಾವುದೇ ಅಧಿಕಾರಿಗಳನ್ನು ಸೇರಿಸಿಲ್ಲ ಎಂದು ಹೇಳಿಕೊಂಡಿದ್ದರು.
ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವರು
ಇದಕ್ಕೂ ಮುನ್ನ ಕೇರಳದ ಕಂದಾಯ ಸಚಿವ ಕೆ ರಾಜನ್ ಅವರು, ಸರ್ಕಾರಿ ಅಧಿಕಾರಿಗಳು ಸೇವೆಯಲ್ಲಿರುವಾಗ ಕೆಲವು ಶಿಸ್ತುಗಳನ್ನು ಅನುಸರಿಸಬೇಕು ಮತ್ತು ಯಾರಾದರೂ ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮಗಳನ್ನು ಎದುರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು .
ಸೇವಾ ನಿಯಮಗಳು ಮತ್ತು ಶಿಸ್ತುಗಳನ್ನು ಉಲ್ಲಂಘಿಸಿ ಅಧಿಕಾರಿಗಳು ಕೆಲಸ ಮಾಡಲು ಸರ್ಕಾರವು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದರು.
ಪ್ರಶಾಂತ್ ಅವರು ಇತ್ತೀಚೆಗೆ ತಮ್ಮ ಹಿರಿಯ ಸಹೋದ್ಯೋಗಿ ಜಯತಿಲಕ್ ವಿರುದ್ಧ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಸಚಿವರು ಈ ರೀತಿ ಉತ್ತರ ನೀಡಿದ್ದಾರೆ.
ಯಾವುದೇ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸದ ರಾಜನ್, ಸರ್ಕಾರವು ಈ ವಿಷಯವನ್ನು "ಅತ್ಯಂತ ಗಂಭೀರವಾಗಿ" ನೋಡುತ್ತಿದೆ ಮತ್ತು ಮುಖ್ಯ ಕಾರ್ಯದರ್ಶಿ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ ಎಂದು ಹೇಳಿದರು. "ಇದನ್ನು ಪಡೆದ ನಂತರ, ಮುಖ್ಯಮಂತ್ರಿಗಳು ಈ ಬಗ್ಗೆ ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದು ಅವರು ಹೇಳಿದ್ದಾರೆ.