Wayanad Landslide| ವಯನಾಡಿಗೆ ಕೇರಳ ಸರ್ಕಾರದಿಂದ ಪುನರ್ವಸತಿ ಪ್ಯಾಕೇಜ್

ವಯನಾಡ್‌ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 222 ಕ್ಕೆ ತಲುಪಿದೆ. 97 ಪುರುಷರು, 88 ಮಹಿಳೆಯರು ಮತ್ತು 37 ಮಕ್ಕಳು ಮೃತರಾಗಿದ್ದಾರೆ. 723 ಕುಟುಂಬಗಳ 2,514 ಜನರನ್ನು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ.;

Update: 2024-08-06 07:11 GMT

ವಯನಾಡ್ (ಕೇರಳ): ವಯನಾಡಿನ ವಿಪತ್ತು ಪೀಡಿತ ಜನರಿಗೆ ಸಮಗ್ರ ಪುನರ್ವಸತಿ ಪ್ಯಾಕೇಜ್ ನ್ನು ಜಾರಿಗೆ ತರುವುದಾಗಿ ಕೇರಳ ಸರ್ಕಾರ ಪ್ರಕಟಿಸಿದೆ. ಭೂಕುಸಿತ ಪೀಡಿತ ಕುಗ್ರಾಮಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿದ್ದು,ಅಪಾರ ನಷ್ಟದ ನಡುವೆಯೂ ದೊಡ್ಡ ಧೈರ್ಯದ ಕಥೆಗಳು ಹೊರಹೊಮ್ಮುತ್ತಿವೆ.

ಜಿಲ್ಲೆಯ ಚೂರಲ್ಮಲದಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್, ಪ್ರಪಂಚದಾದ್ಯಂತದ ಹಲವಾರು ಜನ ಪುನರ್ವಸತಿ ಪ್ರಯತ್ನಗಳಿಗೆ ನೆರವು ನೀಡಿದ್ದಾರೆ ಎಂದು ಹೇಳಿದರು.

ಪುನರ್ವಸತಿ ಪ್ರಕ್ರಿಯೆಗೆ ಅಗತ್ಯವಿರುವ ಭೂಮಿ, ಮನೆ ಮತ್ತು ಇತರ ಮೂಲಸೌಕರ್ಯ ಸೌಲಭ್ಯಗಳನ್ನು ಆದಷ್ಟು ಬೇಗ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ವಿಪತ್ತು ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ಸಮಗ್ರ ಪ್ಯಾಕೇಜ್ ಜಾರಿಗೊಳಿಸಲಿದೆ. ರಾಜ್ಯ ಸರ್ಕಾರವು ಪರಿಹಾರ ಶಿಬಿರಗಳಲ್ಲಿ ನೆಲೆಸಿರುವ ಜನರ ಮಾನಸಿಕ ಸ್ಥಿತಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಸಂತ್ರಸ್ತ ಪ್ರದೇಶಗಳಲ್ಲಿ ಶೋಧ ಕಾರ್ಯಗಳು ಮುಂದುವರಿದಿವೆ ಎಂದು ಸಚಿವರು ತಿಳಿಸಿದ್ದಾರೆ. 

ಏತನ್ಮಧ್ಯೆ, ಭೂಕುಸಿತದಲ್ಲಿ ಸತ್ತವರ ಸಂಖ್ಯೆ 222 ಕ್ಕೆ ತಲುಪಿದೆ. 97 ಪುರುಷರು, 88 ಮಹಿಳೆಯರು ಮತ್ತು 37 ಮಕ್ಕಳು ಮೃತರಾಗಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಹೇಳಿದೆ. 222 ಜನರ ಪೈಕಿ 172 ಮೃತದೇಹಗಳನ್ನು ಸಂಬಂಧಿಕರು ಗುರುತಿಸಿದ್ದಾರೆ. 723 ಕುಟುಂಬಗಳ 2,514 ಜನರನ್ನು ಪರಿಹಾರ ಶಿಬಿರಗಳಲ್ಲಿ ಇರಿಸಲಾಗಿದೆ. ಅವರಲ್ಲಿ 943 ಪುರುಷರು, 972 ಮಹಿಳೆಯರು ಮತ್ತು 599 ಮಕ್ಕಳು, ಆರು ಗರ್ಭಿಣಿಯರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕುಸಿತದ ಏಳನೇ ದಿನ ಬದುಕುಳಿದವರು ಮತ್ತು ಮೃತರಿಗೆ ಹುಡುಕಾಟ ಮುಂದುವರಿದಂತೆ, ಸಾಂಪ್ರದಾಯಿಕ ವಿಧಾನಗಳ ಮೂಲಕ ತಲುಪಲಾಗದ ಪ್ರದೇಶಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ಸಾಗಿಸಲು ಮಾನವರಹಿತ ಡ್ರೋನ್‌ ಬಳಸಿದ್ದಾರೆ. ಜೀವದ ಕುರುಹಿಗಾಗಿ ಹುಡುಕು ತ್ತಿರುವ ನೂರಾರು ಸಿಬ್ಬಂದಿಗೆ ಆಹಾರ-ನೀರು ಒದಗಿಸಲು, ಒಮ್ಮೆ 10 ಜನರಿಗೆ ಆಹಾರದ ಪ್ಯಾಕೆಟ್‌ ಸಾಗಣೆ ಸಾಮರ್ಥ್ಯವಿರುವ ಡ್ರೋನ್‌ಗಳ ನ್ನು ಬಳಸಿಕೊಂಡರು.

ʻರಕ್ಷಣಾ ಕಾರ್ಯಕರ್ತರಿಗೆ ಆಹಾರ ಮತ್ತು ನೀರು ವಿತರಣೆ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಡ್ರೋನ್ ಮೂಲಕ ಹಿಟಾಚಿ ಮತ್ತು ಜೆಸಿಬಿಗಳ ನ್ನು ನಿರ್ವಹಿಸುವ ಸಿಬ್ಬಂದಿಗೆ ಆಹಾರ-ನೀರು ನೇರವಾಗಿ ತಲುಪಿಸಲಾಯಿತು,ʼ ಎಂದು ಅಧಿಕಾರಿಗಳು ತಿಳಿಸಿದರು.

ಶವಸಂಸ್ಕಾರ: 31 ಗುರುತು ಪತ್ತೆಯಾಗದ ಶವಗಳು ಮತ್ತು 158 ದೇಹದ ಅಂಗಗಳನ್ನು ಟೀ ಎಸ್ಟೇಟ್‌ನಲ್ಲಿ ಸಿದ್ಧಪಡಿಸಿದ ಸಮಾಧಿಗಳಲ್ಲಿ ಸಂಸ್ಕಾರ ನಡೆಸಲಾಯಿತು. ರಾಜ್ಯ ಕಂದಾಯ ಸಚಿವ ಕೆ ರಾಜನ್ ಅವರು, ʻಪ್ರತಿ ದೇಹ ಮತ್ತು ಅಂಗಗಳ ಗುರುತಿನ ಸಂಖ್ಯೆ ಮತ್ತು ಡಿಎನ್‌ಎ ಮಾದರಿಗಳ ಆಧಾರದ ಮೇಲೆ ಸಮಾಧಿಗಳನ್ನು ಗುರುತಿಸಲಾಗುವುದು,ʼ ಎಂದು ಹೇಳಿದರು. 

ʻನಾಪತ್ತೆಯಾದವರ ಪತ್ತೆಗೆ ಶೋಧ ಕಾರ್ಯ ಮುಂದುವರಿಯಲಿದೆ. ದೇಶದ ವಿವಿಧ ಭಾಗಗಳಿಂದ ಶ್ವಾನಗಳ ಸೇವೆಯನ್ನು ಕೋರಲಾಗಿದೆ ಮತ್ತು ಇಂದು 15 ಶ್ವಾನಗಳು ಶೋಧ ಕಾರ್ಯಾಚರಣೆಗೆ ಸೇರುವ ನಿರೀಕ್ಷೆಯಿದೆ,ʼ ಎಂದು ರಾಜನ್ ಹೇಳಿದರು. 

ಕಾಡುವ ಕಥೆಗಳು: ಏತನ್ಮಧ್ಯೆ ತಮ್ಮ ಕುಟುಂಬದ ಸದಸ್ಯರು ಮತ್ತು ಆತ್ಮೀಯರನ್ನು ಕಳೆದುಕೊಂಡವರ ಹೃದಯವಿದ್ರಾವಕ ಕಥೆಗಳು ವಯನಾಡಿನ ಗ್ರಾಮಗಳನ್ನು ಕಾಡುತ್ತಲೇ ಇರುತ್ತವೆ. 

ಕುಟುಂಬದ ಸದಸ್ಯರಿಗೆ ಉತ್ತಮ ಜೀವನ ಒದಗಿಸುವ ಸಲುವಾಗಿ ಓಮನ್‌ ಗೆ ಮೂರು ತಿಂಗಳ ಹಿಂದೆಯಷ್ಟೇ ತೆರಳಿದ್ದ ನೌಫಲ್, ತಮ್ಮ ಕುಟುಂಬದವರಿಗೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ ಎಂದುಕೊಂಡಿರಲಿಲ್ಲ. ಅವರು ತಂದೆ, ತಾಯಿ, ಹೆಂಡತಿ, ಮಕ್ಕಳು, ಸಹೋದರ, ಅತ್ತಿಗೆ ಮತ್ತು ಅವರ ಮಕ್ಕಳು ಸೇರಿದಂತೆ ಕುಟುಂಬದ 11 ಸದಸ್ಯರನ್ನು ಕಳೆದುಕೊಂಡಿದ್ದಾರೆ. ಸೋಮವಾರ ಸ್ಥಳಕ್ಕೆ ಆಗಮಿಸಿದ ನೌಫಲ್, ಆಘಾತಕ್ಕೊಳಗಾಗಿದ್ದರು. ಒಮ್ಮೆ ತನ್ನ ಮನೆ ಇದ್ದ ಭಗ್ನಾವಶೇಷ ಮತ್ತು ಮರಳಿನ ರಾಶಿಯನ್ನು ದಿಟ್ಟಿಸಿ ನೋಡುತ್ತಿದ್ದ ಆ ದುರದೃಷ್ಟಕರ ದೃಶ್ಯ ಹೃದಯ ವಿದ್ರಾವಕವಾಗಿತ್ತು. 

ʻನೌಫಲ್ ಮೂರು ತಿಂಗಳ ಹಿಂದೆಯಷ್ಟೇ ಓಮನ್‌ಗೆ ತೆರಳಿದ್ದರು. ಇಂದು ಅವರು ಗ್ರಾಮಕ್ಕೆ ಹಿಂತಿರುಗಿದಾಗ, ಅಲ್ಲಿ ಏನೂ ಉಳಿದಿಲ್ಲ. ಕುಟುಂಬದ ಹನ್ನೊಂದು ಸದಸ್ಯರು ಭೂಕುಸಿತದಲ್ಲಿ ಕಳೆದುಹೋಗಿದ್ದಾರೆ,ʼ ಎಂದು ಅವರ ಸಂಬಂಧಿಕರೊಬ್ಬರು ಹೇಳಿದರು. 

ಹಲವು ಜನರ ರಕ್ಷಣೆ: ಬೆಟ್ಟದ ಮೇಲೆ ಸಿಲುಕಿರುವ ಹಲವು ಜನರನ್ನು ರಕ್ಷಿಸಿದ ಪ್ರಜೀಶ್ ಈಗ ನಾಪತ್ತೆಯಾಗಿರುವ ಹೃದಯಸ್ಪರ್ಶಿ ಕಥೆ ಬಹಿರಂಗಗೊಂಡಿದೆ. ಪ್ರಜೀಶ್ ತನ್ನ ಜೀಪಿನಲ್ಲಿ ಬೆಟ್ಟದ ಮೇಲೆ ಸಿಲುಕಿದ್ದ ಅನೇಕ ಅಸಹಾಯಕ ಜನರನ್ನು ಕರೆತಂದಿದ್ದರು. ಆದರೆ, ಮೂರನೇ ಬಾರಿಗೆ ಬೆಟ್ಟಕ್ಕೆ ತೆರಳಿದಾಗ ಹರಿಯುವ ನೀರು, ಮಣ್ಣು ಮತ್ತು ಪರ್ವತಗಳಿಂದ ಉರುಳಿದ ಬೃಹತ್ ಬಂಡೆಗಳಿಂದಾಗಿ ದಾರಿ ತಪ್ಪಿ ಕಾಣೆಯಾಗಿ ದ್ದಾರೆ. ಹಾನಿಗೊಳಗಾದ ಅವರ ಜೀಪ್ ಚೂರಲ್ಮಲದಲ್ಲಿ ಪತ್ತೆಯಾಗಿದೆ. 

Tags:    

Similar News