ಇಡಿ ಪ್ರಕರಣ: ಸುಪ್ರೀಂ ಮೊರೆ ಹೋದ ಕವಿತಾ

Update: 2024-03-18 10:46 GMT

ಸೋಮವಾರ, ಮಾ.18- ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ, ಬಿಆರ್‌ಎಸ್ ನಾಯಕಿ ಕೆ. ಕವಿತಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. 

ಮಾಜಿ ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರನ್ನು ಮಾರ್ಚ್ 15 ರಂದು ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸದಲ್ಲಿ ಬಂಧಿಸಲಾಗಿತ್ತು. ಸದ್ಯ ಅವರು ದೆಹಲಿಯಲ್ಲಿ ಇಡಿ ವಶದಲ್ಲಿದ್ದಾರೆ. ಬಂಧನದ ಒಂದು ದಿನದ ನಂತರ ಅವರನ್ನು ವಿಶೇಷ ಪಿಎಂಎಲ್‌ಎ ನ್ಯಾಯಾಲಯ ದಲ್ಲಿ ಹಾಜರುಪಡಿಸಲಾಯಿತು. ನ್ಯಾಯಾಲಯ ಅವರನ್ನು ಮಾ.23 ರವರೆಗೆ ಇಡಿ ಕಸ್ಟಡಿಗೆ ಕಳುಹಿಸಿತು. 

ಸಹೋದರ ಕೆ.ಟಿ. ರಾಮರಾವ್‌, ಪತಿ ಡಿ. ಅನಿಲ್ ಮತ್ತು ಕೆಲವು ಸಂಬಂಧಿಕರಿಗೆ ಅವರನ್ನು ಪ್ರತಿದಿನ ಸಂಜೆ 6-7 ರ ನಡುವೆ ಅರ್ಧ ಗಂಟೆ ಭೇಟಿಯಾಗಲು ಅವಕಾಶ ನೀಡಿದೆ. ಅದರಂತೆ, ಸಹೋದರ ಹಾಗೂ ಬಿಆರ್‌ಎಸ್‌ ನಾಯಕ ಕೆ.ಟಿ. ರಾಮರಾವ್‌ ಭಾನುವಾರ ಆಕೆಯನ್ನು ದೆಹಲಿಯಲ್ಲಿ ಭೇಟಿಯಾಗಿದ್ದರು.

ತನ್ನನ್ನುಕಾನೂನು ಬಾಹಿರವಾಗಿ ಬಂಧಿಸಲಾಗಿದೆ ಎಂದು ಕವಿತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ʻಇದು ಅಕ್ರಮ ಬಂಧನ. ಈ ಕಟ್ಟುಕಥೆ ಪ್ರಕರಣದ ವಿರುದ್ಧ ಹೋರಾಡುತ್ತೇನೆʼ ಎಂದು ಹೇಳಿದ್ದರು. 

ಕವಿತಾ ಅವರು 'ಸೌತ್ ಗ್ರೂಪ್' ನ ಪ್ರಮುಖ ಸದಸ್ಯರು. ಈ ಗುಂಪು ದಿಲ್ಲಿಯಲ್ಲಿ ಮದ್ಯದ ಪರವಾನಗಿ ಪಡೆಯಲು ಆಡಳಿತಾರೂಢ ಎಎಪಿಗೆ 100 ಕೋಟಿ ರೂ. ಲಂಚ ನೀಡಿದ ಆರೋಪವಿದೆ.

Tags:    

Similar News