ಕರೂರು ಕಾಲ್ತುಳಿತ| ಮೃತರ ಕುಟುಂಬಕ್ಕೆ ತಲಾ 20 ಲಕ್ಷ, ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರ ಘೋಷಿಸಿದ ನಟ ವಿಜಯ್‌

ಕರೂರಿನಲ್ಲಿ ನಡೆದ ಘಟನೆಯಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ಈ ಅತ್ಯಂತ ದುಃಖಕರ ಸ್ಥಿತಿಯಲ್ಲಿ ಆಗುವ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಕಣ್ಣುಗಳು ಮತ್ತು ಮನಸ್ಸನ್ನು ಅತೀವ ದುಃಖ ಆವರಿಸಿದೆ ಎಂದು ವಿಜಯ್‌ ಹೇಳಿದ್ದಾರೆ.

Update: 2025-09-28 06:44 GMT

ಕರೂರಿನಲ್ಲಿ ಶನಿವಾರ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಟಿವಿಕೆ ಸಂಸ್ಥಾಪಕ ಹಾಗೂ ನಟ ವಿಜಯ್‌ ತಲಾ 20 ಲಕ್ಷ ರೂ., ಗಾಯಾಳುಗಳಿಗೆ ತಲಾ 2ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ನಿನ್ನೆ ಕರೂರಿನಲ್ಲಿ ನಡೆದ ಘಟನೆಯಿಂದ ನನ್ನ ಹೃದಯ ಮತ್ತು ಮನಸ್ಸು ಭಾರವಾಗಿದೆ. ಈ ಅತ್ಯಂತ ದುಃಖಕರ ಸ್ಥಿತಿಯಲ್ಲಿ ನನ್ನ ಅಭಿಮಾನಿಗಳನ್ನು ಕಳೆದುಕೊಂಡಾಗ ಮನಸ್ಸಿಗೆ ಆಗುವ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್ಲ. ನನ್ನ ಕಣ್ಣುಗಳು ಮತ್ತು ಮನಸ್ಸನ್ನು ಅತೀವ ದುಃಖ ಆವರಿಸಿದೆ ಎಂದು ಉಲ್ಲೇಖಿಸಿದ್ದಾರೆ.

ನಾನು ಭೇಟಿಯಾದ ಸಂದರ್ಭದಲ್ಲಿ ನೋಡಿದ ನಿಮ್ಮ ಮುಖಭಾವ ನನ್ನ ಮನಸ್ಸಿಗೆ ಬರುತ್ತಿದೆ. ಅಪಾರ ಪ್ರೀತಿ ತೋರಿಸುವ ನೀವು ನನ್ನ ಸಂಬಂಧಿಕರಿಗಿಂತ ಹೆಚ್ಚು. ಈ ಬಗ್ಗೆ ಯೋಚಿಸಿದಾಗ ನನ್ನ ಹೃದಯವೇ ಒಡೆದು ಹೋಗುವಂತಾಗುತ್ತಿದೆ.

ನನ್ನ ಸಂಬಂಧಿಕರು...

ನನ್ನ ಸಂಬಂಧಿಕರನ್ನು ಕಳೆದುಕೊಂಡಿರುವ ನಿಮಗೆ, ನನ್ನ ಆಳವಾದ ಸಂತಾಪ ವ್ಯಕ್ತಪಡಿಸುತ್ತಾ ನಾನು ನಿಮ್ಮೊಂದಿಗೆ ದುಃಖ ಹಂಚಿಕೊಳ್ಳುತ್ತೇನೆ ಎಂದು ಸಂತ್ರಸ್ಥರ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.

ಇದು ನಾವು ಸರಿದೂಗಿಸಲಾಗದ ನಷ್ಟ. ಯಾರೇ ಸಾಂತ್ವನ ಹೇಳಿದರೂ, ಸಂಬಂಧಿಕರ ನಷ್ಟವನ್ನು ನಾವು ಸಹಿಸಲಾರೆವು. ಆದಾಗ್ಯೂ, ನಿಮ್ಮ ಕುಟುಂಬದ ಒಬ್ಬ ಸದಸ್ಯನಾಗಿ, ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಮತ್ತು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 2 ಲಕ್ಷ ರೂ. ನೀಡಲು ಉದ್ದೇಶಿಸಿದ್ದೇನೆ. ಜೀವಹಾನಿಯ ಮುಂದೆ ಇದು ದೊಡ್ಡ ಮೊತ್ತವಲ್ಲ. ಆದರೆ, ಈ ಸಮಯದಲ್ಲಿ ನಿಮ್ಮ ಕುಟುಂಬದ ಸದಸ್ಯನಾಗಿ, ನನ್ನ ಸಂಬಂಧಿಕರಾದ ನಿಮ್ಮೊಂದಿಗೆ ನಿಲ್ಲುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

ಅದೇ ರೀತಿ, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಸಂಬಂಧಿಕರು ಶೀಘ್ರದಲ್ಲೇ ಚೇತರಿಸಿಕೊಂಡು ಮನೆಗೆ ಮರಳಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಚಿಕಿತ್ಸೆ ಪಡೆಯುತ್ತಿರುವ ನಮ್ಮ ಎಲ್ಲಾ ಸಂಬಂಧಿಕರಿಗೆ ನಮ್ಮ ತಮಿಳುನಾಡು ವೆಟ್ರಿ ಕಳಗಂ ಖಂಡಿತವಾಗಿಯೂ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ದಾರೆ. 

Tags:    

Similar News