ಕರೂರ್‌ ದುರಂತ | ಟಿವಿಕೆಯ ನಾಲ್ವರು ಮುಖಂಡರ ವಿರುದ್ಧ ಎಫ್‌ಐಆರ್‌

ಕರೂರ್ ನಗರ ಪೊಲೀಸರು ಟಿವಿಕೆ ಮುಖಂಡ ಬುಸ್ಸಿ ಆನಂದ್ ಮತ್ತು ಸಿ.ಟಿ. ನಿರ್ಮಲ್ ಕುಮಾರ್ ಸೇರಿ ನಾಲ್ವರು ಪ್ರಮುಖ ಮುಖಂಡರ ವಿರುದ್ಧ ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ಹಾನಿ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

Update: 2025-09-28 08:14 GMT

ಕರೂರಿನಲ್ಲಿ ನಡೆದ ಪಕ್ಷದ ರ‍್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 39 ಜನರ ಸಾವಿಗೆ ಸಂಬಂಧಿಸಿದಂತೆ ನಟ, ರಾಜಕಾರಣಿ ವಿಜಯ್ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಆದಾಗ್ಯೂ ಕರೂರ್ ನಗರ ಪೊಲೀಸರು ಟಿವಿಕೆ ಮುಖಂಡ ಬುಸ್ಸಿ ಆನಂದ್ ಮತ್ತು ಸಿ.ಟಿ. ನಿರ್ಮಲ್ ಕುಮಾರ್ ಸೇರಿ ನಾಲ್ವರು ಪ್ರಮುಖ ಟಿವಿಕೆ ಮುಖಂಡರ ವಿರುದ್ಧ ಕೊಲೆ ಯತ್ನ ಮತ್ತು ಸಾರ್ವಜನಿಕ ಆಸ್ತಿ ಹಾನಿ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ನಟ ವಿಜಯ್ ಅವರು ರ‍್ಯಾಲಿಗೆ ಆಗಮಿಸಲು ವಿಳಂಬ ಮಾಡಿದ್ದರಿಂದಲೇ ಜನಸಂದಣಿ ಹೆಚ್ಚಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಪೊಲೀಸರು ದೂರಿದ್ದರೂ ವಿಜಯ್‌ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.

ನಿಯಮ ಉಲ್ಲಂಘಿಸಿದ್ದ ಟಿವಿಕೆ

ರ‍್ಯಾಲಿ ಸ್ಥಳದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಲ್ಲಿ ಟಿವಿಕೆ ವಿಫಲವಾಗಿದೆ. ಪೊಲೀಸ್ ಇಲಾಖೆ ಸೂಚನೆಗಳನ್ನು ಧಿಕ್ಕರಿಸಿದ ಹಾಗೂ ಪ್ರಾಣಹಾನಿಯ ಆರೋಪ ಹೊರಿಸಲಾಗಿದೆ.

ಸಾರ್ವಜನಿಕ ವಾಹನಗಳಿಗೆ ಹೆಚ್ಚು ಹಾನಿ ಮಾಡಲಾಗಿದೆ. ಪದೇ ಪದೇ ನೀಡಿದ ಎಚ್ಚರಿಕೆ ನೀಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದಾಗಿ ಕಾಲ್ತುಳಿತ ಸಂಭವಿಸಿ 40 ಜನರ ಸಾವಿಗೆ ಕಾರಣವಾಯಿತು. ಸರ್ಕಾರಿ ಆಸ್ತಿಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ತಮಿಳುನಾಡು ಸಾರ್ವಜನಿಕ ಜೀವ ಮತ್ತು ಆಸ್ತಿ ಹಾನಿ ನಿಷೇಧ (TNPPDL) ಕಾಯ್ದೆಯ ಸೆಕ್ಷನ್ 3 ರೊಂದಿಗೆ ಭಾರತೀಯ ನ್ಯಾಯ ಸಂಹಿತೆ (BNS) ನ ಸೆಕ್ಷನ್ 105, 110, 125(b) ಮತ್ತು 223 ರ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಅಪರಾಧವಲ್ಲದ ನರಹತ್ಯೆ, ದುಡುಕಿನ ಅಥವಾ ನಿರ್ಲಕ್ಷ್ಯದ ಕೃತ್ಯಗಳ ಮೂಲಕ ಮಾನವ ಜೀವಕ್ಕೆ ಅಪಾಯ ಉಂಟು ಮಾಡಿರುವ ಆರೋಪದಡಿಯೂ ಪ್ರಕರಣ ದಾಖಲಿಸಲಾಗಿದೆ.

ಯಾರ ಮೇಲೆ ಪ್ರಕರಣ ದಾಖಲು?

ಪ್ರಮುಖ ಆರೋಪಿಗಳಲ್ಲಿ ಟಿವಿಕೆಯ ಕರೂರ್ ಪಶ್ಚಿಮ ಘಟಕದ ಜಿಲ್ಲಾ ಕಾರ್ಯದರ್ಶಿ ಮಧಿಯಜಗನ್ ವಿರುದ್ಧ ಗುಂಪು ಸಂಘಟಿಸಿದ ಆರೋಪದಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಬುಸ್ಸಿ ಆನಂದ್‌ ಜೊತೆ ಕಾರ್ಯಕ್ರಮ ಸಂಘಟಿಸುವಲ್ಲಿ ನೆರವಾದ ಟಿವಿಕೆ ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ನಿರ್ಮಲ್ ಕುಮಾರ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ರ‍್ಯಾಲಿ ಸಂಘಟನಾ ಸಮಿತಿಯಲ್ಲಿ ಇದ್ದರೆಂಬ ಇಬ್ಬರು ಅಪರಿಚಿತರನ್ನೂ ಎಫ್‌ಐಆರ್‌ ನಲ್ಲಿ ಸೇರಿಸಲಾಗಿದೆ.

ಯಾವ ಪ್ರಕರಣ, ಆರೋಪವೇನು?

ಬಿಎನ್‌ಎಸ್ ಸೆಕ್ಷನ್ 105: ನರಹತ್ಯೆಗೆ ಸಮನಾಗದ ಕೊಲೆ ಆರೋಪ ಒಳಗೊಂಡಿದೆ. ಇದರಲ್ಲಿ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಬಿಎನ್‌ಎಸ್ ಸೆಕ್ಷನ್ 110: ನರಹತ್ಯೆ ಮಾಡುವ ಪ್ರಯತ್ನ ಒಳಗೊಂಡಿದೆ. ಇದರಲ್ಲಿ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ಸೇರಿದೆ.

ಬಿಎನ್‌ಎಸ್ ಸೆಕ್ಷನ್ 125(ಬಿ): ದುಡುಕಿನ ಅಥವಾ ನಿರ್ಲಕ್ಷ್ಯದ ನಡವಳಿಕೆಯ ಮೂಲಕ ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವ ಕೃತ್ಯಗಳನ್ನು ಸೂಚಿಸುತ್ತದೆ. ಇದರಲ್ಲಿ ಐದು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.

ಬಿಎನ್‌ಎಸ್ ಸೆಕ್ಷನ್ 223: ಸಾರ್ವಜನಿಕ ಸೇವಕನ ಕಾನೂನುಬದ್ಧ ಆದೇಶಗಳಿಗೆ ಉದ್ದೇಶಪೂರ್ವಕವಾಗಿ ಅವಿಧೇಯತೆ ಸೂಚಿಸಿದ ಆರೋಪಗಳು. ಒಂದು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ.

ಟಿಎನ್‌ಪಿಪಿಡಿಎಲ್ ಕಾಯ್ದೆ ಸೆಕ್ಷನ್ 3: ಕಾನೂನುಬಾಹಿರ ಸಭೆಗಳ ಸಮಯದಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಸೂಚಿಸುತ್ತದೆ. ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಕಠಿಣ ದಂಡಗಳಿಗೆ ಈ ಸೆಕ್ಷನ್‌ ಅವಕಾಶ ನೀಡುತ್ತದೆ.

ಭೀಕರ ಕಾಲ್ತುಳಿತ

ಕಾಲ್ತುಳಿತ ಘಟನೆಯಲ್ಲಿ 40 ಮಂದಿ ಜೀವ ಕಳೆದುಕೊಂಡಿದ್ದಾರೆ. ಮತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳಾಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆಯ ನಂತರ ಶವಗಳನ್ನು ಅವರವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.

ಕರೂರ್ ಕಾರ್ಯಕ್ರಮದಲ್ಲಿ ಬಿಸಿಲಿನ ತಾಪ ಮತ್ತು ಜನದಟ್ಟಣೆಯಿಂದ ಈ ದುರಂತ ಸಂಭವಿಸಿದೆ. ವಿಜಯ್ ಅವರು ವಿಳಂಬವಾಗಿ ಆಗಮಿಸಿದ್ದರಿಂದ ಜನದಟ್ಟಣೆ ಹೆಚ್ಚಾಯಿತು. ಇದರಿಂದಾಗಿ ಸ್ಥಳದಲ್ಲಿ ನೀರು ಒದಗಿಸಲು ಸಾಧ್ಯವಾಗಲಿಲ್ಲ. ಕೆಲವರು ಮೂರ್ಛೆ ಹೋದರು. ಅಂತವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಅಂಬುಲೆನ್ಸ್‌ಗಳು ಬಂದಾಗ ದಾರಿ ಬಿಡಲಿಲ್ಲ. ಆಗ ಪೊಲೀಸರು ಕಾರ್ಯಕರ್ತರನ್ನು ನೂಕಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಈ ಘಟನೆಯು ತಮಿಳುನಾಡಿನಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷಗಳು ಘಟನೆ ಕುರಿತು ಸಂಪೂರ್ಣ ತನಿಖೆಗೆ ಒತ್ತಾಯಿಸಿವೆ. ಡಿಎಂಕೆಯು ತನ್ನ ವಿರುದ್ಧದ ತಳ್ಳಿಹಾಕಿದ್ದು, ಇದು "ರಾಜಕೀಯ ಪ್ರೇರಿತ" ಎಂದು ಹೇಳಿದೆ.

ಹಲವರ ಬಂಧನ ಸಾಧ್ಯತೆ?

ಸಿಸಿಟಿವಿ ದೃಶ್ಯಾವಳಿ ಮತ್ತು ಸಾಕ್ಷಿಗಳ ಹೇಳಿಕೆ ವಿಶ್ಲೇಷಿಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಕರೂರ್ ಎಸ್ಪಿ ಆರ್. ಮುತ್ತುಕುಮಾರ್ ಮಾನಾಡಿ, ಮುಂಬರುವ ಉಪಚುನಾವಣೆಗೂ ಮುನ್ನ ಎಲ್ಲಾ ಪಕ್ಷಗಳು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ವಿಜಯ್‌ ವಿರುದ್ಧ ಕ್ರಮ ಜರುಗಿಸುವ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ತನಿಖೆ ಮುಂದುವರೆದಿದೆ ಎಂದಷ್ಟೇ ಹೇಳಿದರು.

ಮುಂದಿನ ವಾರ ನ್ಯಾಯಾಲಯವು ಈ ವಿಷಯವನ್ನು ಕೈಗೆತ್ತಿಕೊಳ್ಳುವ ನಿರೀಕ್ಷೆಯಿದೆ.

Tags:    

Similar News