ಕಾರ್ಗಿಲ್ ವಿಜಯ ದಿವಸ: ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಅವರಿಂದ ಗೌರವ ಸಲ್ಲಿಕೆ
ಲಡಾಖ್‌ನ ಕಾರ್ಗಿಲ್‌ನ ಹಿಮಾವೃತ ಪರ್ವತ ಪ್ರದೇಶದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಜುಲೈ 26, 1999 ರಂದು ಭಾರತೀಯ ಸೇನೆಯು ʻಆಪರೇಷನ್ ವಿಜಯ್ʼ ನಲ್ಲಿ ಯಶಸ್ಸು ಸಾಧಿಸಿತು.;
ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 26) 25 ವರ್ಷಗಳ ಹಿಂದೆ ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ದೇಶದ ಭೂಪ್ರದೇಶವನ್ನು ರಕ್ಷಿಸಲು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ವೀರಾವೇಶದಿಂದ ಹೋರಾಡಿದ ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಗೌರವವನ್ನು ಸಲ್ಲಿಸಿದರು.
ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತ ವಿಜಯ ಸಾಧಿಸಿದ ಸ್ಮರಣಾರ್ಥ ಈ ದಿನವನ್ನು 'ಕಾರ್ಗಿಲ್ ವಿಜಯ್ ದಿವಸ್' ಎಂದು ಆಚರಿಸಲಾಗುತ್ತದೆ.
ಪ್ರಧಾನಿ ಮೋದಿ ಅವರು ಕಾರ್ಗಿಲ್ ವಿಜಯ ದಿವಸದ 25ನೇ ವಾರ್ಷಿಕೋತ್ಸವದಂದು ರಾಷ್ಟ್ರದ ಸೇವೆಯಲ್ಲಿ ಅತ್ಯುನ್ನತ ತ್ಯಾಗ ಮಾಡಿದ ಸಶಸ್ತ್ರ ಪಡೆಗಳ ಅಧಿಕಾರಿಗಳು ಮತ್ತು ಸೈನಿಕರಿಗೆ ಡ್ರಾಸ್ ಯುದ್ಧ ಸ್ಮಾರಕಕ್ಕೆ ಪುಷ್ಪಮಾಲೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ಲಡಾಖ್‌ನ ಕಾರ್ಗಿಲ್‌ನ ಹಿಮಾವೃತ ಪರ್ವತ ಪ್ರದೇಶದಲ್ಲಿ ಸುಮಾರು ಮೂರು ತಿಂಗಳ ಸುದೀರ್ಘ ಯುದ್ಧದ ನಂತರ ಜುಲೈ 26, 1999 ರಂದು ಭಾರತೀಯ ಸೇನೆಯು ʻಆಪರೇಷನ್ ವಿಜಯ್ʼ ನಲ್ಲಿ ಯಶಸ್ಸು ಸಾಧಿಸಿತು.
ರಾಷ್ಟ್ರಪತಿ ಅವರಿಂದ ಗೌರವಾರ್ಪಣೆ: ʻಕಾರ್ಗಿಲ್ ವಿಜಯ್ ದಿವಸದ ಆಚರಣೆಯು ನಮ್ಮ ಸಶಸ್ತ್ರ ಪಡೆಗಳ ಧೈರ್ಯ ಮತ್ತು ಅಸಾಧಾರಣ ಶೌರ್ಯಕ್ಕೆ ಗೌರವ ಸಲ್ಲಿಸುವ ಒಂದು ಸಂದರ್ಭ. 1999 ರಲ್ಲಿ ಕಾರ್ಗಿಲ್ ಶಿಖರಗಳಲ್ಲಿ ಭಾರತಮಾತೆಯನ್ನು ರಕ್ಷಿಸಲು ಸರ್ವೋಚ್ಚ ತ್ಯಾಗ ಮಾಡಿದ ಪ್ರತಿಯೊಬ್ಬ ಸೈನಿಕನಿಗೂ ನಾನು ಗೌರವ ಸಲ್ಲಿಸುತ್ತೇನೆ ಮತ್ತು ನಮಸ್ಕರಿಸುತ್ತೇನೆ. ಅವರ ತ್ಯಾಗ ಮತ್ತು ಶೌರ್ಯದಿಂದ ಎಲ್ಲ ದೇಶವಾಸಿಗಳು ಸ್ಫೂರ್ತಿ ಪಡೆಯುತ್ತಾರೆ ಎಂದು ಖಾತ್ರಿಯಿದೆ,ʼ ಎಂದು ರಾಷ್ಟ್ರಪತಿ ಭವನದ ಎಕ್ಸ್ ಪೋಸ್ಟ್‌ನಲ್ಲಿ ರಾಷ್ಟ್ರಪತಿ ಮುರ್ಮು ಅವರು ಹೇಳಿದ್ದಾರೆ. ರಾಷ್ಟ್ರಪತಿ ಅವರು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿರುತ್ತಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಯುದ್ಧದಲ್ಲಿ ಬಲಿದಾನ ಮಾಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ʻಕಾರ್ಗಿಲ್ ವಿಜಯ ದಿವಸದ 25 ನೇ ವಾರ್ಷಿಕೋತ್ಸವದಂದು 1999 ರ ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ವೀರ ಸೈನಿಕರ ಆದಮ್ಯ ಛಲ ಮತ್ತು ಧೈರ್ಯವನ್ನು ನಾವು ನೆನಪಿಸಿಕೊಳ್ಳುತ್ತೇವೆ,ʼ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʻಸೈನಿಕರ ಅಚಲ ಬದ್ಧತೆ, ಶೌರ್ಯ ಮತ್ತು ದೇಶಪ್ರೇಮದಿಂದ ನಮ್ಮ ದೇಶ ಸುರಕ್ಷಿತವಾಗಿ ಉಳಿದಿದೆ. ಅವರ ಸೇವೆ ಮತ್ತು ತ್ಯಾಗ ಪ್ರತಿಯೊಬ್ಬ ಭಾರತೀಯರು ಮತ್ತು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ,ʼ ಎಂದು ಹೇಳಿದರು.
ಸೇನಾ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸೈನಿಕರ ಪರಮೋಚ್ಚ ತ್ಯಾಗವನ್ನು ಸ್ಮರಿಸಿದರು. ʻನಾವು ಕಾರ್ಗಿಲ್ ವೀರರಿಂದ ಸ್ಫೂರ್ತಿ ಪಡೆಯುತ್ತೇವೆ. ರಾಷ್ಟ್ರವನ್ನು ಧೈರ್ಯ, ಗೌರವ ಮತ್ತು ತ್ಯಾಗದಿಂದ ರಕ್ಷಿಸುವ ಮೂಲಕ ಅವರ ಪರಂಪರೆಯನ್ನು ಮುಂದುವರಿಸುತ್ತೇವೆ,ʼ ಎಂದು ಸಮಗ್ರ ರಕ್ಷಣಾ ಸಿಬ್ಬಂದಿಯ ಪ್ರಧಾನ ಕಚೇರಿ ಹೇಳಿದೆ.
ದೇಶದಾದ್ಯಂತ ಕಾರ್ಯಕ್ರಮ: ಡ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕ ಸೇರಿದಂತೆ ದೇಶಾದ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಗಿಲ್ ಸಂಘರ್ಷದಲ್ಲಿ 500 ಕ್ಕೂ ಹೆಚ್ಚು ಸೈನಿಕರು ಜೀವ ಕಳೆದುಕೊಂಡರು.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ವೀರ ಸೈನಿಕರಿಗೆ ಗೌರವ ಸಲ್ಲಿಸಿದರು. ʻಕಾರ್ಗಿಲ್ ವಿಜಯ ದಿವಸದಂದು ನಮ್ಮ ವೀರ ಸೈನಿಕರ ಶೌರ್ಯ ಮತ್ತು ಸಮರ್ಪಣೆಗೆ ವಂದನೆಗಳು. ಅವರ ಧೈರ್ಯ ಮತ್ತು ದೇಶಭಕ್ತಿಯ ಪರಂಪರೆ ಭಾರತೀಯರಿಗೆ ಮಾರ್ಗದರ್ಶಕ ಬೆಳಕಿನಂತೆ ಕಾರ್ಯನಿರ್ವಹಿಸುತ್ತದೆ,ʼ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಕೂಡ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ʻಆಪರೇಷನ್ ವಿಜಯ್' ನಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ವೀರ ಸಶಸ್ತ್ರ ಪಡೆ ಸಿಬ್ಬಂದಿಗೆ ನನ್ನ ನಮ್ರ ನಮನಗಳನ್ನು ಸಲ್ಲಿಸುತ್ತೇನೆ,ʼ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.