J&K polls| ಸ್ಪರ್ಧೆ ಇರುವುದು ಪ್ರಾದೇಶಿಕ ಪಕ್ಷಗಳ ನಡುವೆ
ಕಾಶ್ಮೀರದಲ್ಲಿ ಪ್ರಾದೇಶಿಕ ಪಕ್ಷಗಳು ತಮ್ಮ ಉಳಿವಿಗಾಗಿ ಹೋರಾಡುತ್ತಿವೆ. ರಾಷ್ಟ್ರೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ ಹಾಗೂ ಬಿಜೆಪಿಯನ್ನು ಎದುರಿಸುತ್ತಿರುವಾಗಲೂ, ಸ್ಪರ್ಧೆ ಅವುಗಳ ನಡುವೆಯೇ ಇರಲಿದೆ.
ಜಮ್ಮು ಮತ್ತು ಕಾಶ್ಮೀರ ಚುನಾವಣೆಗೆ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಚುನಾವಣೆಪೂರ್ವ ಮೈತ್ರಿ ಮಾಡಿಕೊಂಡಿವೆ. ಆದರೆ, ಪ್ರಾದೇಶಿಕ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಪೀಪಲ್ಸ್ ಕಾನ್ಫರೆನ್ಸ್ ಮತ್ತು ಅಪ್ನಿ ಪಕ್ಷದ ನಡುವೆ ಯಾವುದೇ ಮೈತ್ರಿ ಇಲ್ಲ.
ನ್ಯಾಷನಲ್ ಕಾನ್ಫರೆನ್ಸ್ ಸಾರ್ವಕಾಲಿಕ ಸ್ನೇಹಿತನಾದ ಸಿಪಿಐ (ಎಂ), 2020 ರ ಜಿಲ್ಲಾ ಮಟ್ಟದ ಚುನಾವಣೆಗಳು ಅಥವಾ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ್ನು ಉಳಿಸಿಕೊಂಡಿಲ್ಲ.
ಪ್ರಾದೇಶಿಕ ಪಕ್ಷಗಳು ಕಾರ್ಯಸೂಚಿಯಲ್ಲಿ ಒಂದಾಗಿವೆ. ಆದರೆ, ರಾಜಕೀಯವಾಗಿ ವಿಭಜನೆಗೊಂಡಿವೆ.
ಎನ್‌ಸಿ ವಿ/ಎಸ್ ಪಿಡಿಪಿ: ಜಮ್ಮು-ಕಾಶ್ಮೀರದ ಎರಡು ಪ್ರಮುಖ ಪಕ್ಷಗಳಾದ ಎನ್‌ಸಿ ಮತ್ತು ಪಿಡಿಪಿಯ ರಾಜಕೀಯ ನೆಲೆ ಇರುವುದು; ರಾಜ್ಯದ ಸಾಮಾಜಿಕ-ಸಾಂಸ್ಕೃತಿಕ ಅನನ್ಯತೆ ಮತ್ತು ಭಾರತ ಸಂವಿಧಾನ ನೀಡಿದ ವಿಶೇಷ ರಕ್ಷಣೆ (ಈಗ ಹಿಂಪಡೆಯಲಾಗಿದೆ)ಯಲ್ಲಿ. ಎರಡೂ ಪಕ್ಷಗಳು ಈ ನೆಲೆಯಲ್ಲೇ ಜನರಿಂದ ಬೆಂಬಲವನ್ನು ಕೋರುತ್ತವೆ. ನಡುವಿನ ಪೈಪೋಟಿಯು ಗ್ರಾಮ ಮಟ್ಟದ ಘಟಕದವರೆಗೆ ಇರುತ್ತದೆ. ಈ ಪೈಪೋಟಿಯೇ ಅವುಗಳ ರಾಜಕೀಯ ಅಸ್ತಿತ್ವದ ಬುನಾದಿ. ಆದರೆ, ಎನ್‌ಸಿ ಮತ್ತು ಪಿಡಿಪಿ ನಡುವೆ ತೀವ್ರ ರಾಜಕೀಯ ಭಿನ್ನಾಭಿಪ್ರಾಯಗಳಿವೆ.
ಎನ್‌ಸಿ ಕಾರ್ಯಕರ್ತರ ಕೇಡರ್ ಅಥವಾ ಸ್ವಯಂಸೇವಕ ಪಡೆಯನ್ನು ಹೊಂದಿದೆ. ಅವರ ವ್ಯಾಪ್ತಿ ಬಹಳ ದೂರದವರೆಗೆ ಹರಡಿದೆ ಮತ್ತು ಪಕ್ಷದ ಕಾರ್ಯಕರ್ತರು ಪ್ರತ್ಯೇಕತಾವಾದಿಗಳಿಂದ ತೀವ್ರ ಹಿಂಸೆ ಅನುಭವಿಸಿದ್ದಾರೆ.
ಧಾರ್ಮಿಕ ಸಂಸ್ಥೆಗಳು ಪಿಡಿಪಿ ಪರ ಒಲವು ಹೊಂದಿವೆ. ಆದರೆ, ನಿಷೇಧಿತ ಜಮಾತ್-ಎ-ಇಸ್ಲಾಮಿ (ಜೆಇಐ) ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ ನಂತರ ಪಿಡಿಪಿಗೆ ಧಾರ್ಮಿಕ ಸಂಘಟನೆಗಳ ಬೆಂಬಲ ಕುಂಠಿತಗೊಂಡಿದೆ. ಜಮಾತೆ ಸಂಘಟನೆಯು ʻಇಖಾಮತ್ ಇ ದೀನ್ʼ (ಧರ್ಮವನ್ನು ವ್ಯವಸ್ಥೆಯಾಗಿ ಸ್ಥಾಪಿಸುವುದು) ಮತ್ತು ʻನಿಜಾಮ್-ಎ-ಮುಸ್ತಫಾʼ (ಅಥವಾ ಷರಿಯಾ ನಿಯಮ)ವನ್ನು ಬಯಸುತ್ತದೆ. ಅದರ ಅನೇಕ ಮಾಜಿ ಸದಸ್ಯರು ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದು, ಪಿಡಿಪಿ ಮೇಲೆ ಪರಿಣಾಮ ಉಂಟಾಗಲಿದೆ.
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಆಗಸ್ಟ್ 2024ರ ಜೆಇಐ ಮೇಲಿನ ನಿಷೇಧ 'ಹಿಂಪಡೆಯುವಂತೆ' ಒತ್ತಾಯಿಸಿದ್ದರು. ಈಮುನ್ನ ಸಂಘಟನೆಯನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಅವರು ಪ್ರತಿಭಟಿಸಿದ್ದರು.
ಬಹುಕೋನ ಸ್ಪರ್ಧೆ: ಎನ್‌ಸಿ ಮತ್ತು ಪಿಡಿಪಿ ನಡುವಿನ ಚುನಾವಣೆ ಸ್ಪರ್ಧೆಯು ಕಳೆದ ಎರಡು ದಶಕಗಳಲ್ಲಿ ಹೊಸ ರಾಜಕೀಯ ಆಟಗಾರರ ಪ್ರವೇಶದಿಂದ ಬಹು ಕೋನ ಸ್ಪರ್ಧೆಯಾಗಿ ಪರಿಣಮಿಸಿದೆ.
2019 ರ ನಂತರ ರಾಜ್ಯದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಡ ಬಳಿಕ ಪ್ರತ್ಯೇಕತಾವಾದಿ ರಾಜಕೀಯದ ಪ್ರಭಾವ ಕಡಿಮೆಯಾಗಿದೆ. ಹಲವು ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಎನ್‌ಸಿ ಮತ್ತು ಪಿಡಿಪಿ ರಾಜ್ಯಕ್ಕೆ ಸ್ವಾಯತ್ತತೆ ಮತ್ತು ವಿಶೇಷ ಸ್ಥಾನಮಾನದ ಬೇಡಿಕೆ ಬಿಟ್ಟುಕೊಟ್ಟರೆ, ತಮ್ಮ ಪ್ರಾದೇಶಿಕ ನಿರ್ದಿಷ್ಟತೆ ಮತ್ತು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತವೆ. ಇವೆರಡೂ ಪಕ್ಷಗಳು ಒಂದಾಗಲು ಇದು ಒಳ್ಳೆಯ ಕಾರಣ ಎನಿಸಬಹುದು. ಆದರೆ, ತಳ ಮಟ್ಟದ ಸ್ಪರ್ಧೆ ಮತ್ತು ಸಾಮಾಜಿಕ ನೆಲೆಗಳು ಹೊಂದಾಣಿಕೆಯಾಗದ್ದರಿಂದ ಒಂದಾಗುವಿಕೆ ಕಷ್ಟಕರವಾಗಿದೆ.
ಪಿಎಜಿಡಿ ಹೊರಹೊಮ್ಮುವಿಕೆ ಮತ್ತು ಕುಸಿತ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಿಂಪಡೆದುಕೊಂಡ ಬಳಿಕ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆಯು ಈ ಎರಡು ಪಕ್ಷಗಳ ಒಮ್ಮತಕ್ಕೆ ಅಗತ್ಯ ಪರಿಸ್ಥಿತಿಯನ್ನು ಸೃಷ್ಟಿಸಿತು. ಇದು ರಾಜಧಾನಿ ಶ್ರೀನಗರದ ಗುಪ್ಕರ್ ರಸ್ತೆಯ ಹೆಸರಿರುವ ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ) ಗೆ ಕಾರಣವಾಯಿತು. ಆದರೆ, ರಾಜಕೀಯ ಕುರಿತು ಯಾವುದೇ ಒಮ್ಮತವಿಲ್ಲದ ಮೈತ್ರಿಕೂಟವನ್ನು ರಚಿಸಲಾಯಿತು. ಆಗಸ್ಟ್ 4, 2019 ರಂದು ಸಂವಿಧಾನದ ವಿಧಿ 370 ಮತ್ತು 35 ಎ ಅಡಿಯಲ್ಲಿ ವಿಶೇಷ ಸವಲತ್ತುಗಳನ್ನು ತೆಗೆದುಹಾಕುವುದನ್ನು ರಕ್ಷಿಸಲು ರಾಜಕೀಯ ಬದ್ಧತೆಯನ್ನು ಘೋಷಿಸಲಾಯಿತು.
ಆದರೆ, 2020 ರಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಚುನಾವಣೆಗಳಲ್ಲಿ ಮೈತ್ರಿ ಉಳಿದುಕೊಳ್ಳಲಿಲ್ಲ. ಚುನಾವಣೆಗಳಲ್ಲಿ ಕಾಶ್ಮೀರ ಕಣಿವೆಯ ಹಲವು ಸ್ಥಾನಗಳಲ್ಲಿ ಪಿಎಜಿಡಿ ಪಕ್ಷಗಳು/ಬೆಂಬಲಿಗರು ಸ್ಪರ್ಧಿಸಿದರು. ಅಲಯನ್ಸ್ ಪಾಲುದಾರ ಪೀಪಲ್ಸ್ ಕಾನ್ಫರೆನ್ಸ್ ನ ಸಜಾದ್ ಲೋನ್ 2021 ರಲ್ಲಿ ಹಾಗೂ ಜಮ್ಮು- ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್ (ಜೆಕೆಪಿಎಂ) 2022 ರಲ್ಲಿ ಮೈತ್ರಿಯನ್ನು ತೊರೆದವು. ಮೈತ್ರಿಯಲ್ಲಿ ನಾಲ್ಕು ಪಕ್ಷಗಳು ಮಾತ್ರ ಉಳಿದವು.
ಚುನಾವಣೆಯಲ್ಲಿ ಕಳಪೆ ಸಾಧನೆಯಿಂದ ಬಿರುಕು ಹೆಚ್ಚಿತು. ಜಮ್ಮುವಿನಲ್ಲಿ ಪಿಡಿಪಿ ಮತಗಳಿಕೆ ಹಾಗೂ ಕಾಶ್ಮೀರ ಕಣಿವೆಯಲ್ಲಿ ಇತರ ಪಕ್ಷಗಳು ಕಳಪೆ ಸಾಧನೆ ಮಾಡಿದವು.
2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಸಿ ಮತ್ತು ಪಿಡಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ವಿಧಾನಸಭೆ ಚುನಾವಣೆಯಲ್ಲೂ ಅದು ಮುಂದುವರಿದಿದೆ. ಹಾಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಪಿಎಜಿಡಿ ಗುಂಪು ಮುಂದಾಗಿಲ್ಲ.
ದೆಹಲಿ ಅಂಶ: ಜಮ್ಮು-ಕಾಶ್ಮೀರದ ಸ್ಥಳೀಯ ಪಕ್ಷಗಳು ದೇಶದ ಎಲ್ಲಾ ಪ್ರಾದೇಶಿಕ ಪಕ್ಷಗಳಂತೆ ಕೇಂದ್ರ ಸರ್ಕಾರದ ಪಕ್ಕದಲ್ಲಿರಲು ನೋಡುತ್ತವೆ. ಕಾಶ್ಮೀರ ಇಂತಹ ಹಲವು ನಿದರ್ಶನಗಳನ್ನು ಕಂಡಿದೆ. 1980 ರ ದಶಕದ ಮಧ್ಯಭಾಗದಲ್ಲಿ ಎನ್‌ಸಿ - ಕಾಂಗ್ರೆಸ್ ಮೈತ್ರಿಯಿಂದ ಫಾರೂಕ್ ಅಬ್ದುಲ್ಲಾ ಮತ್ತೆ ಅಧಿಕಾರ ಗಳಿಸಿದರು. ಆದರೆ, ಇದರಿಂದ ಪ್ರತಿಪಕ್ಷ ಇಲ್ಲದ ಪರಿಸ್ಥಿತಿ ನಿರ್ಮಾಣವಾಯಿತು.
ಪ್ರಸ್ತುತ ಎನ್ಸಿ-ಕಾಂಗ್ರೆಸ್ ಮೈತ್ರಿಯು ಜಮ್ಮು ಅಂಶದಿಂದ ಆಗಿದೆ.ಏಕೆಂದರೆ, ಜಮ್ಮುವಿನಲ್ಲಿ ಬಿಜೆಪಿಯು ಗಣನೀಯ ರಾಜಕೀಯ ಬೆಂಬಲ ಹೊಂದಿದೆ. ಎನ್‌ಸಿ ಅಥವಾ ಪಿಡಿಪಿ ಏಕಾಂಗಿಯಾಗಿ ಅಥವಾ ಜಂಟಿಯಾಗಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ.
ಸ್ಥಳೀಯ ಪಕ್ಷಗಳು ಕಾಶ್ಮೀರದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿವೆ. ಅವು ಬಿಜೆಪಿಯನ್ನು ಎದುರಿಸುತ್ತಿರುವಾಗಲೂ, ಸ್ಪರ್ಧೆ ಅವುಗಳ ನಡುವೆಯೇ ಇರಲಿದೆ. ಬಿಜೆಪಿಯನ್ನು ಹೊರಗಿಡಬೇಕೆಂದರೆ, ಚುನಾವಣೋತ್ತರ ಮೈತ್ರಿಗೆ ಸಾಕಷ್ಟು ಚೌಕಾಶಿ ಅನಿವಾರ್ಯವಾಗುತ್ತದೆ.
(ಜಾವಿದ್ ಅಹ್ಮದ್ ದಾರ್ ಅವರು ಶ್ರೀನಗರದ ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್.ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ 360info ಮೂಲಕ ಪ್ರಕಟಿಸಲಾಗಿದೆ)