'ಮತ ಕಳ್ಳತನ' ಆರೋಪದ ಬಗ್ಗೆ 7 ದಿನದೊಳಗೆ ಸಾಕ್ಷ್ಯ ನೀಡಿ ಇಲ್ಲವೇ ಕ್ಷಮೆ ಕೇಳಿ: ರಾಹುಲ್​ಗೆ ಚುನಾವಣಾ ಆಯೋಗ ಸೂಚನೆ

ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕಿಟ್ಟು, ಭಾರತದ ಮತದಾರರನ್ನೇ ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿವೆ ಎಂದು ಮುಖ್ಯ ಚುನಾವಣಾ ಆಯುಕ್ತರು ಆರೋಪ ಮಾಡಿದರು.;

Update: 2025-08-17 11:53 GMT

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಮತ ಕಳ್ಳತನ' (ವೋಟ್ ಚೋರಿ) ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ ಚುನಾವಣಾ ಆಯೋಗ, "ಏಳು ದಿನಗಳೊಳಗೆ ನಿಮ್ಮ ಆರೋಪವನ್ನು ಸಾಬೀತುಪಡಿಸಲು ಸಾಕ್ಷ್ಯಾಧಾರಗಳೊಂದಿಗೆ ಅಫಿಡವಿಟ್ ಸಲ್ಲಿಸಿ, ಇಲ್ಲದಿದ್ದರೆ ದೇಶದ ಕ್ಷಮೆ ಕೇಳಿ," ಎಂದು ಖಡಕ್ ಎಚ್ಚರಿಕೆ ನೀಡಿದೆ.

"ನಿಮ್ಮ ಮುಂದೆ ಬೇರೆ ಮೂರನೇ ಆಯ್ಕೆ ಇಲ್ಲ, ಒಂದು ವೇಳೆ ನೀವು ಅಫಿಡವಿಟ್ ಸಲ್ಲಿಸದಿದ್ದರೆ, ನಿಮ್ಮ ಎಲ್ಲಾ ಆರೋಪಗಳು ಸುಳ್ಳು ಎಂದು ಪರಿಗಣಿಸಲಾಗುವುದು," ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಭಾನುವಾರ ನಡೆದ ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಮತ ಕಳ್ಳತನ'ದಂತಹ ಆರೋಪಗಳು ಭಾರತದ ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಬಣ್ಣಿಸಿದರು. "ನಮ್ಮ ಪಾಲಿಗೆ ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ, ಎಲ್ಲರೂ ಸಮಾನರು. ಆಯೋಗವು ಯಾವುದೇ ಪಕ್ಷದ ನಡುವೆ ತಾರತಮ್ಯ ಮಾಡುವುದಿಲ್ಲ. ನಾವು ಸಾಕ್ಷ್ಯ ಕೇಳಿದಾಗ, ನಮಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ," ಎಂದು ಅವರು ಹೇಳಿದರು.

"ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕಿಟ್ಟು, ಭಾರತದ ಮತದಾರರನ್ನೇ ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿವೆ," ಎಂದು ಗಂಭೀರ ಆರೋಪ ಮಾಡಿದ ಮುಖ್ಯ ಚುನಾವಣಾ ಅಧಿಕಾರಿ, ಎಲ್ಲಾ ಮತದಾರರ ಹಕ್ಕುಗಳನ್ನು ರಕ್ಷಿಸಲು ಬಂಡೆಯಂತೆ ನಿಲ್ಲುವುದಾಗಿ ಸ್ಪಷ್ಟಪಡಿಸಿದೆ.

ಆಯೋಗದ ಖಡಕ್ ಮಾತುಗಳು

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರು ಹಿಂದೆಂದೂ ಕಂಡರಿಯದಷ್ಟು ಕಟು ಮಾತುಗಳಲ್ಲಿ ರಾಜಕೀಯ ಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. "ಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕಿಟ್ಟು ಭಾರತದ ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡಲಾಗುತ್ತಿರುವಾಗ, ಇಂದು ಚುನಾವಣಾ ಆಯೋಗವು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತದೆ. ಆಯೋಗವು ಯಾವುದೇ ತಾರತಮ್ಯವಿಲ್ಲದೆ, ಬಡವ-ಶ್ರೀಮಂತ, ಹಿರಿಯರು, ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ವರ್ಗಗಳ ಮತ್ತು ಎಲ್ಲಾ ಧರ್ಮಗಳ ಮತದಾರರೊಂದಿಗೆ ನಿರ್ಭಯವಾಗಿ ಬಂಡೆಯಂತೆ ನಿಂತಿತ್ತು, ನಿಂತಿದೆ ಮತ್ತು ಮುಂದೆಯೂ ನಿಲ್ಲಲಿದೆ," ಎಂದು ಅವರು ಹೇಳಿದ್ದಾರೆ.

"ಪ್ರತಿಯೊಂದು ರಾಜಕೀಯ ಪಕ್ಷವೂ ಚುನಾವಣಾ ಆಯೋಗದಲ್ಲಿ ನೋಂದಣಿಯಾಗುವ ಮೂಲಕವೇ ಅಸ್ತಿತ್ವಕ್ಕೆ ಬರುತ್ತದೆ. ಹೀಗಿರುವಾಗ, ಆಯೋಗವು ಅವುಗಳ ನಡುವೆ ಹೇಗೆ ತಾರತಮ್ಯ ಮಾಡಲು ಸಾಧ್ಯ? ನಮ್ಮ ಪಾಲಿಗೆ ಎಲ್ಲಾ ಪಕ್ಷಗಳೂ ಸಮಾನ. ಯಾರು ಯಾವುದೇ ಪಕ್ಷಕ್ಕೆ ಸೇರಿರಲಿ, ಆಯೋಗವು ತನ್ನ ಸಾಂವಿಧಾನಿಕ ಕರ್ತವ್ಯದಿಂದ ಹಿಂದೆ ಸರಿಯುವುದಿಲ್ಲ," ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದರು.

ತಪ್ಪು ಮಾಹಿತಿಯ ಬಗ್ಗೆ ಕಳವಳ

ದ್ವಿಪ್ರತಿ ಮತದಾನದಂತಹ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಆಯೋಗ, "ಕೆಲವು ಮತದಾರರು ಈ ಬಗ್ಗೆ ದೂರು ನೀಡಿದ್ದು ನಿಜ. ಆದರೆ, ನಾವು ಸಾಕ್ಷ್ಯ ಕೇಳಿದಾಗ ಯಾರೂ ಅದನ್ನು ಒದಗಿಸಲಿಲ್ಲ. ಇಂತಹ ಸುಳ್ಳು ಆರೋಪಗಳಿಗೆ ಚುನಾವಣಾ ಆಯೋಗವಾಗಲಿ, ಮತದಾರರಾಗಲಿ ಹೆದರುವುದಿಲ್ಲ," ಎಂದು ತಿಳಿಸಿತು.

"ತಳಮಟ್ಟದ ಪರಿಶೀಲಿಸಿದ ವರದಿಗಳು ಪಕ್ಷಗಳ ಉನ್ನತ ನಾಯಕರಿಗೆ ತಲುಪುತ್ತಿಲ್ಲ ಅಥವಾ ಅವುಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ. ಇದು ತಪ್ಪು ಮಾಹಿತಿಗೆ ಕಾರಣವಾಗುತ್ತಿದೆ. ಬಿಹಾರದ ಏಳು ಕೋಟಿಗೂ ಹೆಚ್ಚು ಮತದಾರರು ಚುನಾವಣಾ ಆಯೋಗದೊಂದಿಗೆ ನಿಂತಿದ್ದಾರೆ. ಆಯೋಗದ ಅಥವಾ ಮತದಾರರ ವಿಶ್ವಾಸಾರ್ಹತೆಯ ಮೇಲೆ ಯಾವುದೇ ಪ್ರಶ್ನಾರ್ಥಕ ಚಿಹ್ನೆ ಇಲ್ಲ," ಎಂದು ಹೇಳುವ ಮೂಲಕ, ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿದೆ ಎಂದು ಆಯೋಗ ಸಮರ್ಥಿಸಿಕೊಂಡಿತು.

ಆಯೋಗದ ಎಚ್ಚರಿಕೆಗೆ ರಾಹುಲ್ ತಿರುಗೇಟು

ಚುನಾವಣಾ ಆಯೋಗದ ಈ ಗಡುವಿಗೆ ಕೆಲವೇ ಗಂಟೆಗಳ ಮೊದಲು, ಬಿಹಾರದ ಸಸಾರಾಮ್ನಲ್ಲಿ 'ಮತದಾರ ಅಧಿಕಾರ ಯಾತ್ರೆ'ಗೆ ಚಾಲನೆ ನೀಡಿ ಮಾತನಾಡಿದ್ದ ರಾಹುಲ್ ಗಾಂಧಿ, ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ್ದರು. "ಮತ ಕಳ್ಳತನದ ಬಗ್ಗೆ ಆರೋಪ ಮಾಡಿದ ನನ್ನಿಂದ ಮಾತ್ರ ಅಫಿಡವಿಟ್ ಕೇಳಲಾಗುತ್ತಿದೆ. ಆದರೆ, ಇದೇ ರೀತಿಯ ಆರೋಪಗಳನ್ನು ಮಾಡುವ ಬಿಜೆಪಿ ನಾಯಕರಿಂದ ಯಾಕೆ ಅಫಿಡವಿಟ್ ಕೇಳುತ್ತಿಲ್ಲ? ಈ ತಾರತಮ್ಯ ಏಕೆ?" ಎಂದು ಅವರು ಆಯೋಗವನ್ನು ಪ್ರಶ್ನಿಸಿದ್ದಾರೆ. 

Tags:    

Similar News