J&K Election| ಸನ್ನದ್ಧ ಕಾಂಗ್ರೆಸ್-ಎನ್‌ಸಿ ಮೈತ್ರಿ ವಿರುದ್ಧ ಬಿಜೆಪಿ ಸೆಣಸಾಟ
ಜಮ್ಮು-ಕಾಶ್ಮೀರದ ಚುನಾವಣೆಯನ್ನು ಕೇಂದ್ರದ 370ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರದ ಜನಾಭಿಪ್ರಾಯ ಸಂಗ್ರಹವಾಗಿ ನೋಡಲಾಗುತ್ತದೆ. 90 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2014 ರವರೆಗೆ 87 ಸ್ಥಾನಗಳಿದ್ದವು.;
ರಾಜ್ಯವೊಂದನ್ನು ಕೇಂದ್ರಾಡಳಿತ ಪ್ರದೇಶವಾಗಿ ಮಾಡಿ, ಕಾರ್ಗಿಲ್ ಮತ್ತು ಲಡಾಖ್ ಅನ್ನು ಹೊರಗಿಡಲಾಗಿದೆ. 370 ನೇ ವಿಧಿಯಡಿ ಸಂವಿಧಾನಾತ್ಮಕವಾಗಿ ಖಾತರಿಪಡಿಸಿದ ರಕ್ಷಣೆಯನ್ನು ಕಸಿದುಕೊಂಡು, ಕಳೆದ ಆರು ವರ್ಷಗಳಿಂದ ಚುನಾಯಿತ ಸರ್ಕಾರ ಹೊಂದುವುದನ್ನು ತಡೆಯಲಾಗಿದೆ. ಇಂಥ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಸೆಪ್ಟೆಂಬರ್ 30 ರೊಳಗೆ ವಿಧಾನಸಭೆ ಚುನಾವಣೆಯನ್ನು ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಗಡುವು ಸಮೀಪಿಸುತ್ತಿರುವಂತೆಯೇ, ಚುನಾವಣಾ ಆಯೋಗವು ಶುಕ್ರವಾರ (ಆಗಸ್ಟ್ 16) ಮೂರು ಹಂತದ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 18, 25 ಮತ್ತು ಅಕ್ಟೋಬರ್ 1 ರಂದು ಚುನಾವಣೆ ನಡೆಯಲಿದ್ದು, ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶದೊಂದಿಗೆ ಅಕ್ಟೋಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.
2022 ರಲ್ಲಿ ಕೇಂದ್ರಾಡಳಿತ ಪ್ರದೇಶವು ವಿವಾದಾಸ್ಪದ ಪುನರ್ ವಿಂಗಡಣೆ ಆಗಿರುವುದರಿಂದ, 90 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2014 ರವರೆಗೆ 87 ಸ್ಥಾನಗಳನ್ನು ಹೊಂದಿತ್ತು; ಇದರಲ್ಲಿ ಲಡಾಖ್ ಮತ್ತು ಕಾರ್ಗಿಲ್ ಜಿಲ್ಲೆಗಳ 4 ಸ್ಥಾನಗಳು ಸೇರಿವೆ. ಈಗ ಇವು ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿದೆ.
ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ: ಕ್ಷೇತ್ರ ಪುನರ್ ವಿಂಗಡಣೆ ನಂತರ 2011 ರ ಜನಗಣತಿ ಪ್ರಕಾರ ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆ ಯ ಶೇ. 44 ರಷ್ಟಿರುವ ಹಿಂದೂ ಪ್ರಾಬಲ್ಯದ ಜಮ್ಮು ಪ್ರದೇಶದ ಸ್ಥಾನಗಳ ಸಂಖ್ಯೆ 37 ರಿಂದ 43 ಕ್ಕೆ ಏರಿದೆ ಅಂದರೆ, ಜಮ್ಮು-ಕಾಶ್ಮೀರದ ಅಸೆಂಬ್ಲಿ ಸ್ಥಾನಗಳಲ್ಲಿ ಶೇ.48 ಪಾಲು. ಇದಕ್ಕೆ ವ್ಯತಿರಿಕ್ತವಾಗಿ, ಶೇ.56 ರಷ್ಟು ಇರುವ ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರ ವಿಭಾಗವು 47 ಸ್ಥಾನಗಳನ್ನು ಹೊಂದಿದೆ. ಶಾಸನಸಭೆಯಲ್ಲಿ ಶೇ. 52 ಸ್ಥಾನ.
ಪರಿಶಿಷ್ಟ ಜಾತಿ- ಪಂಗಡಗಳಿಗೆ ಮೀಸಲು ಪರಿಚಯಿಸಿದ್ದು, ಎಸ್‌ಸಿ ಒಂಬತ್ತು ಮತ್ತು ಎಸ್‌ಟಿಗಳಿಗೆ ಏಳು ಸ್ಥಾನ ಮೀಸಲಿಡಲಾಗಿದೆ.
ಮುಂಬರುವ ಚುನಾವಣೆಯನ್ನು ವಿಧಿ 370 ಅನ್ನು ರದ್ದು ನಿರ್ಧಾರ ಮತ್ತು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನ ಕಸಿದುಕೊಂಡ ಕೇಂದ್ರದ ಆಗಸ್ಟ್ 5, 2019 ರ ನಿರ್ಧಾರಕ್ಕೆ ಜನಾಭಿಪ್ರಾಯ ಸಂಗ್ರಹ ಎಂದು ನೋಡಲಾಗುತ್ತದೆ.
ರಾಜ್ಯ ಸ್ಥಾನಮಾನ ನೀಡಲು ಆತುರವಿಲ್ಲ: ಚುನಾವಣೆ ಘೋಷಣೆಯು ಕಾಂಗ್ರೆಸ್, ಪ್ರಬಲ ಪ್ರಾದೇಶಿಕ ಸಂಘಟನೆಗಳಾದ ಫಾರೂಕ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಮೆಹಬೂಬಾ ಮುಫ್ತಿ ಅವರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ಬೇಡಿಕೆಗಳ ಹೊರತಾಗಿಯೂ, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಪುನಃಸ್ಥಾಪಿಸಲು ನರೇಂದ್ರ ಮೋದಿ ಸರ್ಕಾರ ಯಾವುದೇ ಆತುರ ತೋರಿಸುತ್ತಿಲ್ಲ ಎಂದು ಸೂಚಿಸುತ್ತದೆ.
ʻಕಳೆದ ಐದು ವರ್ಷಗಳಿಂದ ಕಾಂಗ್ರೆಸ್ ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಬೇಕು ಮತ್ತು ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸುತ್ತಿದೆ. ಕೇಂದ್ರ ಸರ್ಕಾರದ ಇತ್ತೀಚಿನ ನಡೆಗಳು ಅಲ್ಲಿನ ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರವನ್ನು ಹೆಚ್ಚಿಸಿದೆ. ಇದು ಚುನಾಯಿತ ಸರ್ಕಾರದ ಅಧಿಕಾರವನ್ನು ಅಪಹಾಸ್ಯ ಮಾಡಿದೆ,ʼ ಎಂದು ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಬೇಡಿಕೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಮತ್ತಷ್ಟು ವೇಗ ಪಡೆಯುವ ನಿರೀಕ್ಷೆಯಿದೆ. ಬಿಜೆಪಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಚುನಾವಣೆ ಫಲಿತಾಂಶದ ಮೇಲೆ, ವಿಶೇಷವಾಗಿ, ಕಾಶ್ಮೀರದಲ್ಲಿ ಪರಿಣಾಮ ಬೀರುತ್ತದೆ. ಆದರೆ, ಬಿಜೆಪಿ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಪಿಎಂ ಮೋದಿ ಮತ್ತು ಬಿಜೆಪಿ,ʻ 70 ವರ್ಷಗಳ ಭಯೋತ್ಪಾದನೆʼ ನಂತರ ಜಮ್ಮು-ಕಾಶ್ಮೀರಕ್ಕೆ ಶಾಂತಿ ಮತ್ತು ಸಹಜತೆಯನ್ನು ಮರುಸ್ಥಾಪಿಸುವ ಪ್ರತಿಪಾದನೆ ಮಾಡಿದ್ದಾರೆ. ರದ್ದುಗೊಳಿಸಿದ ಬಳಿಕ ಕಾಶ್ಮೀರದ ʻಬೆಳವಣಿಗೆಯ ಕಥನʼ ವನ್ನು ಮೋದಿ ಅವರು ಪದೇ ಪದೇ ಶ್ಲಾಘಿಸಿದ್ದಾರೆ; ಬೃಹತ್ ಹೂಡಿಕೆ ಹರಿದುಬರುತ್ತಿವೆ, ಪ್ರವಾಸೋದ್ಯಮ ಗಗನಕ್ಕೇರಿದೆ, ಕೈಗಾರಿಕೆ ಉತ್ಕರ್ಷಗೊಂಡಿದೆ ಮತ್ತು ನಾಗರಿಕರಿಗೆ ಉಜ್ವಲ ಭವಿಷ್ಯ ಕಾಯುತ್ತಿದೆ ಎಂದು ಹೇಳಿದ್ದಾರೆ.
ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಎನ್‌ಸಿ, ಪಿಡಿಪಿ ಮತ್ತು ಸಿಪಿಎಂ, ಪ್ರಧಾನಿ ಹೇಳಿಕೆ ಮಂತ್ರಿಯ ಸಮರ್ಥನೆಗಳು ʼಚಿಟ್ಟು ಹಿಡಿಸುತ್ತವೆʼ ಎಂದು ಕರೆದಿವೆ; ನಿರುದ್ಯೋಗ ಹೆಚ್ಚಳ, ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧ, ನಿಶ್ಚಲಗೊಂಡಿರುವ ಸ್ಥಳೀಯ ಆರ್ಥಿಕತೆ, ಜಮ್ಮು ಪ್ರದೇಶದಲ್ಲಿ ಹಿಂದೂಗಳು ಮತ್ತು ಕಾಶ್ಮೀರೇತರರನ್ನು ಗುರಿಯಾಗಿಸಿಕೊಂಡು ಹತ್ಯೆ ಮತ್ತು ಅಸೆಂಬ್ಲಿ ಚುನಾವಣೆಯನ್ನು ನಡೆಸುವಲ್ಲಿ ದೀರ್ಘ ವಿಳಂಬ ಕುರಿತು ಪ್ರಶ್ನೆ ಕೇಳುತ್ತಿವೆ.
ಬಿಜೆಪಿಗೆ ಹಿನ್ನಡೆ: ಪ್ರಧಾನಿ ಅವರ ಭಾರಿ ಹೇಳಿಕೆಗಳ ಹೊರತಾಗಿಯೂ, ಬಿಜೆಪಿ ಕಾಶ್ಮೀರ ಕಣಿವೆಯ ಮೂರು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿಲ್ಲ; ಗೆದ್ದರೂ, ಜಮ್ಮು ಪ್ರದೇಶದ ಎರಡು ಸ್ಥಾನಗಳಲ್ಲಿ ಮತಗಳ ಹಂಚಿಕೆ ತೀವ್ರ ಕುಸಿತ ಕಂಡಿತು.
ಎರಡು ಇಂಡಿಯಾ ಒಕ್ಕೂಟದ ಪಕ್ಷಗಳು ಮೈತ್ರಿ ವಿಧಾನಸಭಾ ಚುನಾವಣೆಯಲ್ಲೂ ಇರಲಿದೆ ಎಂದು ಕಾಂಗ್ರೆಸ್ ಮತ್ತು ಎನ್‌ಸಿಯ ಮೂಲಗಳು ದಿ ಫೆಡರಲ್‌ಗೆ ತಿಳಿಸಿವೆ. ಕಾಶ್ಮೀರ ವಿಭಾಗದ ಬಹುಪಾಲು ಸ್ಥಾನಗಳಿಗೆ ಎನ್‌ಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ, ಆದರೆ, ಹಿಂದೂ ಪ್ರಾಬಲ್ಯದ ಜಮ್ಮುವಿನ ಹೆಚ್ಚಿನ ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿಯಾಗಲಿವೆ. 1996 ಮತ್ತು 2018 ರ ನಡುವೆ ಕುಲ್ಗಾಮ್ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಹಿರಿಯ ಸಿಪಿಎಂ ನಾಯಕ ಮತ್ತು ಪೀಪಲ್ಸ್ ಅಲಯನ್ಸ್‌ನ ಸಂಚಾಲಕ ಎಂ.ವೈ. ತರಿಗಾಮಿ ಅವರಿಗೆ ಸ್ಥಾನ ನೀಡುವ ಸಾಧ್ಯತೆಯಿದೆ.
ಶುಕ್ರವಾರ ತಡರಾತ್ರಿ ಕಾಂಗ್ರೆಸ್ , ಶ್ರೀನಗರದ ಮಾಜಿ ಸಂಸದ ತಾರಿಕ್ ಹಮೀದ್ ಕರ್ರಾ ಅವರನ್ನು ಹೊಸ ಪಿಸಿಸಿ ಮುಖ್ಯಸ್ಥರನ್ನಾಗಿ ಮತ್ತು ಮಾಜಿ ಉಪ ಮುಖ್ಯಮಂತ್ರಿ, ದಲಿತ ನಾಯಕಿ ತಾರಾ ಚಂದ್ ಹಾಗೂ ಮಾಜಿ ಶಾಸಕ ರಮಣ್ ಭಲ್ಲಾ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತು.
ಮೆಹಬೂಬಾ ಅವರ ಪಿಡಿಪಿ ಜೊತೆ ಮೈತ್ರಿಯಿಲ್ಲ: ಆದರೆ, ಮೈತ್ರಿಯು ಮೆಹಬೂಬಾ ಅವರ ಪಿಡಿಪಿಯನ್ನು ಒಳಗೊಳ್ಳುವ ಸಾಧ್ಯತೆಯಿಲ್ಲ. 2014 ರ ವಿಧಾನಸಭೆ ಚುನಾವಣೆಯಲ್ಲಿ ಮೆಹಬೂಬಾ ಅವರ ತಂದೆ ದಿವಂಗತ ಮುಫ್ತಿ ಮೊಹಮ್ಮದ್ ಸಯೀದ್ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಜನವರಿ 2016 ರಲ್ಲಿ ಸಯೀದ್ ಅವರ ನಿಧನದ ನಂತರ, ಮೆಹಬೂಬಾ ಬಿಜೆಪಿ ನೆರವಿನೊಂದಿಗೆ ರಾಜ್ಯದ ಮೊದಲ ಮಹಿಳಾ ಸಿಎಂ ಆದರು. ಆದರೆ, ಕಥುವಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗೆ ಸಾರ್ವಜನಿಕ ಬೆಂಬಲ ವ್ಯಕ್ತಪಡಿಸಿದ ಇಬ್ಬರು ಬಿಜೆಪಿ ಸಚಿವರನ್ನು ಮೆಹಬೂಬಾ ವಜಾಗೊಳಿಸಿದಾಗ, ಮೈತ್ರಿ ಕುಸಿಯಿತು. ಜೂನ್ 2018 ರಲ್ಲಿ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ, ಕೇಂದ್ರ ರಾಜ್ಯಪಾಲರ ಆಡಳಿತವನ್ನು ಹೇರಿತು. ಇದು ಅಂತಿಮವಾಗಿ 370 ನೇ ವಿಧಿಯನ್ನು ರದ್ದುಗೊಳಿಸುವ ಅವಕಾಶವನ್ನು ಮೋದಿ ಸರ್ಕಾರಕ್ಕೆ ನೀಡಿತು.
ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದದಲ್ಲಿ ಪಿಡಿಪಿಗೆ ಸ್ಥಾನ ಹುಡುಕಲು ಮೆಹಬೂಬಾ ಅವರ ಪ್ರಯತ್ನ, ಈ ವರ್ಷದ ಆರಂಭದಲ್ಲಿ ವಿಫಲವಾಗಿವೆ. ಈ ಹಿಂದೆ ಮೆಹಬೂಬಾ ಪ್ರತಿನಿಧಿಸುತ್ತಿದ್ದ ಅನಂತನಾಗ್ ಸ್ಥಾನದ ಮೇಲೆ ಹಕ್ಕು ನೀಡಲು ಎನ್‌ಸಿ ನಿರಾಕರಿಸಿತು. ಅಂತಿಮವಾಗಿ ಅವರು ಅನಂತನಾಗ್-ರಾಜೌರಿ ಸ್ಥಾನಕ್ಕೆ ಸ್ಪರ್ಧಿಸಿ, ಎನ್‌ಸಿಯ ಮಿಯಾನ್ ಅಲ್ತಾಫ್ ವಿರುದ್ಧ 2.80 ಲಕ್ಷ ಮತಗಳಿಂದ ಸೋತರು. ಮೆಹಬೂಬಾ ಅವರ ಜನಪ್ರಿಯತೆ ಕ್ಷೀಣಿಸುತ್ತಿರುವುದನ್ನು ಅರಿತಿರುವ ಕಾಂಗ್ರೆಸ್, ಅವರನ್ನು ಜೊತೆಯಲ್ಲಿ ಕರೆದೊಯ್ಯುವ ಸಾಧ್ಯತೆಯಿಲ್ಲ.
ಒಮರ್ ಅಬ್ದುಲ್ಲಾ ಸಿಎಂ ಮುಖ?: ಚುನಾವಣೆಯಲ್ಲಿ ಮೈತ್ರಿಕೂಟವನ್ನು ಮುನ್ನಡೆಸುವ ಬಗ್ಗೆ ಕಾಂಗ್ರೆಸ್ ಮತ್ತು ಎನ್‌ಸಿ ನಡುವೆ ಚರ್ಚೆ ನಡೆದಿಲ್ಲವಾದರೂ, ಒಮರ್ ಅಬ್ದುಲ್ಲಾ ಅವರನ್ನು ಸಿಎಂ ಅಭ್ಯರ್ಥಿ ಎಂದು ಬಿಂಬಿಸಲು ಕಾಂಗ್ರೆಸ್ ಹಿಂಝರಿಯುವುಸಿಲ್ಲ ಎಂದು ಮೂಲಗಳು ತಿಳಿಸಿವೆ. ಅಬ್ದುಲ್ಲಾ ಅವರು ಬಾರಾಮುಲ್ಲಾದಿಂದ ಲೋಕಸಭೆ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ಅವರು ಕಣಿವೆಯಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ ಮತ್ತು ಮತದಾರರಲ್ಲಿ ನ್ಯಾಷನಲ್ ಕಾನ್ಫೆರೆನ್ಸ್ ಮೇಲೆ ಅಭಿಮಾನ ಉಳಿದಿದೆ ಎಂದು ಕಾಂಗ್ರೆಸ್ ನಾಯಕತ್ವ ನಂಬುತ್ತದೆ.
370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಣಿವೆಯ ಹಲವು ನಾಯಕರನ್ನು ಒಳಗೊಳ್ಳಲು ಬಿಜೆಪಿ ಪ್ರಯತ್ನಿಸಿದೆ. ಆದರೆ, ಡಿಪಿಎಪಿ ಮುಖ್ಯಸ್ಥ ಗುಲಾಂ ನಬಿ ಆಜಾದ್, ಪೀಪಲ್ಸ್ ಕಾನ್ಫರೆನ್ಸ್‌ನ ಸಜಾದ್ ಲೋನ್ ಮತ್ತು ಅಪ್ನಿ ಪಕ್ಷದ ಸಂಸ್ಥಾಪಕ ಅಲ್ತಾಫ್ ಬುಖಾರಿ ಮತ್ತಿತರನ್ನು ಬಿಜೆಪಿಯ ಪ್ರಾಕ್ಸಿಗಳೆಂದು ಪರಿಗಣಿಸಲಾಗಿದೆ. ಬಿಜೆಪಿಯು ಇವರೊಟ್ಟಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೇ ಅಥವಾ ಲೋಕಸಭೆ ಚುನಾವಣೆಯಲ್ಲಿ ಮಾಡಿದಂತೆ ಚುನಾವಣೋತ್ತರ ಒಪ್ಪಂದದ ಭರವಸೆ ನೀಡಿ, ಅವರ ಅಭ್ಯರ್ಥಿಗಳನ್ನು ಬೆಂಬಲಿಸುತ್ತದೆಯೇ ಎಂಬುದನ್ನು ನೋಡಬೇಕಿದೆ.