Operation Sindoor | ಪಾಕಿಸ್ತಾನ ಶೆಲ್ ದಾಳಿ ; ಜಮ್ಮುವಿನಲ್ಲಿ ಸರ್ಕಾರಿ ಅಧಿಕಾರಿ, ಮಗು ಸೇರಿ ಐವರ ಸಾವು
ಮಾರ್ಟರ್ ಶೆಲ್ ಮತ್ತು ಡ್ರೋನ್ ದಾಳಿಯಲ್ಲಿ ಜಮ್ಮುಕಾಶ್ಮೀರದ ಸರ್ಕಾರಿ ಅಧಿಕಾರಿ, ಎರಡು ವರ್ಷದ ಬಾಲಕಿ ಸೇರಿ ಒಟ್ಟು ಐವರು ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.;
ಪಾಕಿಸ್ತಾನ ನಡೆಸಿದ ದಾಳಿಗೆ ಮನೆ ಛಿದ್ರಗೊಂಡಿದೆ.
ಜಮ್ಮುವಿನಲ್ಲಿ ಶನಿವಾರ ಮುಂಜಾನೆ ಪಾಕಿಸ್ತಾನ ನಡೆಸಿದ ಮಾರ್ಟರ್ ಶೆಲ್ ಹಾಗೂ ಡ್ರೋಣ್ ದಾಳಿಯಲ್ಲಿ ಜಮ್ಮುಕಾಶ್ಮೀರದ ಸರ್ಕಾರಿ ಅಧಿಕಾರಿ, ಎರಡು ವರ್ಷದ ಬಾಲಕಿ ಸೇರಿ ಒಟ್ಟು ಐವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೆಲ್ ದಾಳಿಯಲ್ಲಿ ರಾಜೌರಿಯ ಹೆಚ್ಚುವರಿ ಜಿಲ್ಲಾ ಅಭಿವೃದ್ಧಿ ಆಯುಕ್ತ ರಾಜಕುಮಾರ್ ಥಾಪಾ ಮತ್ತು ಇಬ್ಬರು ಸಿಬ್ಬಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಆದರೆ, ರಾಜಕುಮಾರ್ ಥಾಪಾ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿಸಿದ್ದಾರೆ.
ಥಾಪಾ ಅವರ ಸಾವಿಗೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, "ರಾಜೌರಿಯಿಂದ ಆಘಾತಕಾರಿ ಸುದ್ದಿ. ನಾವು ಜಮ್ಮುಕಾಶ್ಮೀರ ಆಡಳಿತಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸಿದ ಅಧಿಕಾರಿಯನ್ನು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪಮುಖ್ಯಮಂತ್ರಿಯೊಂದಿಗೆ ಇದ್ದು, ಉದ್ವಿಗ್ನತೆ ಕುರಿತು ಮಾಹಿತಿ ನೀಡಿದ್ದರು. ನನ್ನ ಅಧ್ಯಕ್ಷತೆ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲೂ ಭಾಗವಹಿಸಿದ್ದರು" ಎಂದು ಸ್ಮರಿಸಿದ್ದಾರೆ.
ಇನ್ನು ರಾಜೌರಿ ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ನಡೆದ ಮತ್ತೊಂದು ಶೆಲ್ ದಾಳಿಯಲ್ಲಿ ಎರಡು ವರ್ಷದ ಆಯಿಷಾ ನೂರ್ ಹಾಗೂ ಮೊಹಮ್ಮದ್ ಶೋಹಿಬ್ (35) ಎಂಬ ಇಬ್ಬರು ಮೃತಪಟ್ಟಿದ್ದಾರೆ. ಮೂರು ಜನ ಗಾಯಗೊಂಡಿದ್ದಾರೆ.
ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನ ಕಾಂಘ್ರಾ-ಗಲ್ಹುಟ್ಟಾ ಗ್ರಾಮದಲ್ಲಿ ರಶೀದಾ ಬಿ ಎಂಬ ಮಹಿಳೆಯ ಮನೆಗೆ ಮಾರ್ಟರ್ ಶೆಲ್ ಬಡಿದು ಮೃತಪಟ್ಟಿದ್ದಾರೆ. ಮತ್ತೊಂದು ಘಟನೆಯಲ್ಲಿ ಜಮ್ಮು ಜಿಲ್ಲೆಯ ಆರ್‌ಎಸ್ ಪುರ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿಯಲ್ಲಿ ಗುಂಡಿನ ದಾಳಿಯಲ್ಲಿ ಬಿದಿಪುರ ಜಟ್ಟಾ ಗ್ರಾಮದ ನಿವಾಸಿ ಅಶೋಕ್ ಕುಮಾರ್ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.