ಅಂತಾರಾಷ್ಟ್ರೀಯ ಯೋಗ ದಿನ | ಯೋಗ ಜಾಗತಿಕ ಒಳಿತಿನ ಪ್ರಬಲ ಪ್ರತಿನಿಧಿ- ಮೋದಿ
ನಮ್ಮ ಯೋಗಕ್ಷೇಮವು ಸುತ್ತಲಿನ ಜಗತ್ತಿನ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ ಎಂದು ಪ್ರಧಾನಿ ಹೇಳಿದರು.
ಜೂನ್ 21- ಹತ್ತನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ತಮ್ಮ ಜೀವನದ ಭಾಗವಾಗಿಸಿಕೊಳ್ಳುವಂತೆ ಶುಕ್ರವಾರ ಒತ್ತಾಯಿಸಿದರು.
ಶ್ರೀನಗರದ ಶೇರ್-ಐ-ಕಾಶ್ಮೀರ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್‌ಕೆಐಸಿಸಿ) ನಲ್ಲಿ ನಡೆದ 10 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ನೆರೆದವರನ್ನುಉದ್ದೇಶಿಸಿ ಮಾತನಾಡಿದ ಪ್ರಧಾನಿ, ʻಜನರು ತಮ್ಮ ಸುತ್ತಲಿನ ಪ್ರಪಂಚದ ಕಲ್ಯಾಣದೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಯೋಗ ಸಹಾಯ ಮಾಡಿದೆ,ʼ ಎಂದು ಹೇಳಿದರು.
ʻಜಗತ್ತು ಯೋಗವನ್ನು ಜಾಗತಿಕ ಒಳಿತಿನ ಪ್ರಬಲ ಏಜೆಂಟ್ ಎಂದು ನೋಡುತ್ತಿದೆ. ಯೋಗವು ಭೂತ ಕಾಲದ ಹೊರೆಗಳಿಲ್ಲದೆ ಪ್ರಸ್ತುತ ಕ್ಷಣದಲ್ಲಿ ಬದುಕಲು ನಮಗೆ ಸಹಾಯ ಮಾಡುತ್ತದೆ,ʼ ಎಂದು ಪ್ರಧಾನಿ ಹೇಳಿದರು.
ʻನಮ್ಮ ಅಂತರಂಗದಲ್ಲಿ ಶಾಂತಿ ಇದ್ದಾಗ, ಪ್ರಪಂಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಯೋಗ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯ ಹೊಸ ಮಾರ್ಗಗಳನ್ನು ರೂಪಿಸುತ್ತಿದೆ,ʼ ಎಂದು ಪ್ರಧಾನಿ ಹೇಳಿದರು.
ದಾಲ್ ಸರೋವರದ ದಡದಲ್ಲಿರುವ ಎಸ್‌ಕೆಐಸಿಸಿಯ ಹುಲ್ಲುಹಾಸಿನ ಮೇಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಮಳೆಯಿಂದಾಗಿ ಒಳಾಂಗಣಕ್ಕೆ ಸ್ಥಳಾಂತರಿಸಬೇಕಾಯಿತು.
ʻ10 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದು, ಪ್ರತಿಯೊಬ್ಬರೂ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಯೋಗ ಶಕ್ತಿ, ಉತ್ತಮ ಆರೋಗ್ಯ ಮತ್ತು ಕ್ಷೇಮವನ್ನು ಪೋಷಿಸುತ್ತದೆ. ಈ ವರ್ಷ ಶ್ರೀನಗರದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ,ʼ ಎಂದು ಹೇಳಿದರು.
ʻನಮ್ಮ ಯೋಗಕ್ಷೇಮವು ಸುತ್ತಲಿನ ಜಗತ್ತಿನ ಕಲ್ಯಾಣದೊಂದಿಗೆ ಸಂಬಂಧ ಹೊಂದಿದೆ ಎಂಬುದನ್ನು ಅರಿತುಕೊಳ್ಳಲು ಯೋಗ ಸಹಾಯ ಮಾಡುತ್ತದೆ,ʼ ಎಂದು ಹೇಳಿದರು.