ಭಾರತ - ಪಾಕ್ ಗಡಿಯಲ್ಲಿ ಕವಾಯತು ಆರಂಭ, ಮೇ 21ರಿಂದ ಸಾರ್ವಜನಿಕರಿಗೆ ಮುಕ್ತ
ಅಮೃತಸರದ ಅಟ್ಟಾರಿ-ವಾಘಾ ಗಡಿ, ಫಿರೋಜ್‌ಪುರದ ಹುಸೇನಿವಾಲಾ ಹಾಗೂ ಫಾಜಿಲ್ಕಾ ಜಿಲ್ಲೆಯ ಸದ್ಕಿ ಜಂಟಿ ಚೆಕ್‌ಪೋಸ್ಟ್‌ಗಳಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಧ್ವಜ ಇಳಿಸುವ ಕಾರ್ಯಕ್ರಮ ಇದಾಗಿದ್ದು, ಭಾರತೀಯ ಸೇನೆಯ ಶಿಸ್ತು ಹಾಗೂ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ.;
ವಾಘಾ-ಅಟ್ಟಾರಿ ಗಡಿಯಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ನಡೆಸುವ ಕವಾಯತು. (ಎಕ್ಸ್ ಖಾತೆಯಿಂದ)
ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ ಗಡಿಯಲ್ಲಿ ಸ್ಥಗಿತಗೊಂಡಿದ್ದ ಸೈನಿಕರ ಕವಾಯತು (ರಿಟ್ರೀಟ್) ಮಂಗಳವಾರ (ಮೇ 20) ರಂದು ಆರಂಭವಾಗಲಿದ್ದು, ಬುಧವಾರದಿಂದ (ಮೇ 21) ಸಾರ್ವಜನಿಕರಿಗೆ ಪ್ರವೇಶ ನೀಡಲಾಗುವುದು ಎಂದು ಗಡಿ ಭದ್ರತಾ ಪಡೆ ತಿಳಿಸಿದೆ.
ಮಂಗಳವಾರದಿಂದಲೇ ಕವಾಯತು ಆರಂಭವಾಗಲಿದ್ದು, ಕೇವಲ ಮಾಧ್ಯಮದವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬುಧವಾರದಿಂದ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು, ಪ್ರತಿದಿನ ಸಂಜೆ 6 ಗಂಟೆಗೆ ಕವಾಯತು ಪ್ರಾರಂಭವಾಗಲಿದೆ ಎಂದು ಜಲಂಧರ್‌ನ ಪ್ರಧಾನ ಕಚೇರಿ ತಿಳಿಸಿದೆ.
ಅಮೃತಸರದ ಅಟ್ಟಾರಿ-ವಾಘಾ ಗಡಿ, ಫಿರೋಜ್‌ಪುರದ ಹುಸೇನಿವಾಲಾ ಹಾಗೂ ಫಾಜಿಲ್ಕಾ ಜಿಲ್ಲೆಯ ಸದ್ಕಿ ಜಂಟಿ ಚೆಕ್‌ಪೋಸ್ಟ್‌ಗಳಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಧ್ವಜ ಇಳಿಸುವ ಕಾರ್ಯಕ್ರಮ ಇದಾಗಿದ್ದು, ಭಾರತೀಯ ಸೇನೆಯ ಶಿಸ್ತು ಹಾಗೂ ಸಂಸ್ಕೃತಿಯನ್ನು ಬಿಂಬಿಸುತ್ತದೆ. 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯ ನಂತರ ಸುರಕ್ಷತಾ ದೃಷ್ಟಿಯಿಂದ ಮೇ 9 ರಂದು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು.
ಕವಾಯತಿನ ಸಂದರ್ಭದಲ್ಲಿ ಬಿಎಸ್‌ಎಫ್ ಸೈನಿಕರು ಪಾಕಿಸ್ತಾನದ ರೇಂಜರ್‌ಗಳೊಂದಿಗೆ ಹಸ್ತಲಾಘವ ಮಾಡುವುದಿಲ್ಲ ಹಾಗೂ ಧ್ವಜ ಇಳಿಸುವ ಸಂದರ್ಭದಲ್ಲಿ ಗೇಟ್ ತೆರೆಯುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಎರಡೂ ರಾಷ್ಟ್ರಗಳ ಗಡಿಯಲ್ಲಿ ಭದ್ರತಾ ಪಡೆಗಳು ನಡೆಸುವ ಧ್ವಜ ಇಳಿಸುವ ಕಾರ್ಯಕ್ರಮ ಹಾಗೂ ಕವಾಯತು ವೀಕ್ಷಿಸಲು ಪ್ರತಿನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಕವಾಯತು ಪುನರಾರಂಭಿಸುವ ಹಿನ್ನೆಲೆ ಪ್ರವಾಸಿಗರನ್ನು ನಿರ್ವಹಿಸಲು ಅಗತ್ಯವಿರುವ ಎಲ್ಲ ಭದ್ರತಾ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.