Constitution Day | 75ನೇ ಸಂವಿಧಾನದ ದಿನಾಚರಣೆ: ಹಲವು ವಿಶೇಷಗಳಿಗೆ ಸಾಕ್ಷಿಯಾಗಲಿದೆ ಈ ದಿನ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.;
ಭಾರತದ ಸಂವಿಧಾನ ಅಂಗೀಕಾರಗೊಂಡು ಇಂದಿಗೆ (ನವೆಂಬರ್ 26) 75 ವರ್ಷಗಳಾದವು. ಈ ಹಿನ್ನೆಲೆಯಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳನ್ನು ಭಾರತ ಸರ್ಕಾರ ಆಯೋಜಿಸಿದೆ. ಈ ವಿಶೇಷ ದಿನದ ಹಿನ್ನೆಲೆಯಲ್ಲಿ ಸಂಸತ್ ಚಳಿಗಾಲದ ಅಧಿವೇಶನ ಕಲಾಪಗಳು ನಡೆಯುವುದಿಲ್ಲ. ಸಂವಿಧಾನ ದಿನದ ಅಂಗವಾಗಿ ಹಳೆ ಸಂಸತ್ ಭವನದ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ವಹಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕೂಡ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಸಂವಿಧಾನದ ಭಾಷಾಂತರ ಪ್ರತಿ ಬಿಡುಗಡೆ
ಮುರ್ಮು ಅವರು ಸಂಸ್ಕೃತ ಮತ್ತು ಮೈಥಿಲಿ ಭಾಷೆಗಳಲ್ಲಿ ಅನುವಾದಿತ ಸಂವಿಧಾನ ಆವೃತ್ತಿಗಳನ್ನು ಇದೇ ವೇಳೆ ಬಿಡುಗಡೆ ಮಾಡಲಿದ್ದಾರೆ. ಇದೇ ವೇಳೆ ರಾಷ್ಟ್ರಪತಿ ನೇತೃತ್ವದಲ್ಲಿ ಸಂವಿಧಾನದ ಪೀಠಿಕೆ ಔಪಚಾರಿಕವಾಗಿ ಪಠಿಸಲಾಗುತ್ತದೆ. ಈ ಸಂದರ್ಭದಲ್ಲಿ, ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿ ಸಹ ಬಿಡುಗಡೆ ಮಾಡಲಿದೆ.
ಪಕ್ಷದ ನಾಯಕರಿಗೆ ಮಾತಿಗೆ ಅವಕಾಶ ಇಲ್ಲ
ಸ್ಪೀಕರ್, ಉಪರಾಷ್ಟ್ರಪತಿ ಮತ್ತು ರಾಷ್ಟ್ರಪತಿಗಳು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
"ಎರಡನೆಯದಾಗಿ, ನಾವು ಲೋಕಸಭೆ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಿಗೆ ವೇದಿಕೆಯಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದೇವೆ." ಎಂದು ರಿಜಿಜು ಹೇಳಿದರು.
ಸಂವಿಧಾನ ದಿನದ ಸಮಾರಂಭದಲ್ಲಿ ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುವಂತೆ ವಿವಿಧ ಬಿಜೆಪಿ ಬಣ ಪಕ್ಷಗಳ ನಾಯಕರು ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಹೊಸ ವೆಬ್ ಸೈಟ್ ಆರಂಭ
ಸಂವಾದಾತ್ಮಕ ಚಟುವಟಿಕೆಗಳು ಮತ್ತು ಸಂಪನ್ಮೂಲಗಳ ಮೂಲಕ ಸಂವಿಧಾನದ ಪರಂಪರೆಯೊಂದಿಗೆ ತೊಡಗಿಸಿಕೊಳ್ಳಲು ನಾಗರಿಕರಿಗೆ ಅನುವು ಮಾಡಿಕೊಡಲು ಹೊಸ ವೆಬ್ಸೈಟ್ - https: //constitution75.com ಅನ್ನು ರಚಿಸಲಾಗಿದೆ ಎಂದು ಸರ್ಕಾರ ಸೋಮವಾರ ಪ್ರಕಟಿಸಿದೆ. ಸಂವಿಧಾನದ ಪೀಠಿಕೆಯ ಸಾಮೂಹಿಕ ಓದುವಿಕೆ ದೇಶಾದ್ಯಂತದ ಶಾಲೆಗಳು, ನಗರಗಳು ಮತ್ತು ಹಳ್ಳಿಗಳಲ್ಲಿ ನಡೆಯಲಿದೆ ಎಂದು ಅದು ಹೇಳಿದೆ.
ವೆಬ್‌ಸೈಟ್ ಲ್ಯಾಂಡಿಂಗ್ ಪುಟದಲ್ಲಿ 'ಹಮಾರಾ ಸಂವಿಧಾನ್, ಹಮಾರಾ ಸ್ವಾಭಿಮಾನ್' ಎಂಬ ಪದಗಳಿವೆ.
ವೆಬೆಸೈಟ್ ಎಐ ಹೊಂದಿರುವ ಸಂವಾದಾತ್ಮಕ ಫೀಚರ್ 'ನಿಮ್ಮ ಸಂವಿಧಾನವನ್ನು ತಿಳಿಯಿರಿ' ಸಹ ಹೊಂದಿದೆ. ಅಲ್ಲಿ ಒಬ್ಬರು ಸಂವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಮತ್ತು ಭಾರತದ ಸಂವಿಧಾನಕ್ಕೆ ಸಂಬಂಧಿಸಿದ ವಿವರ ಉತ್ತರಗಳನ್ನು ಪಡೆಯಬಹುದು ಎಂದು ಸಚಿವಾಲಯ ತಿಳಿಸಿದೆ.
ಸಂವಿಧಾನವನ್ನು ನವೆಂಬರ್ 26, 1949 ರಂದು ಅಂಗೀಕರಿಸಲಾಯಿತು. ಆದರೆ ಭಾರತವು ಗಣರಾಜ್ಯವಾದಾಗ ಅಂದರೆ ಜನವರಿ 26, 1950 ರಂದು ಜಾರಿಗೆ ಬಂದಿತು.