ಮಹಾರಾಷ್ಟ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿಶಾಲ್ ಪಾಟೀಲ್ ಅವರು ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಇದರಿಂದ ಲೋಕಸಭೆಯಲ್ಲಿ ಕಾಂಗ್ರೆಸ್ ಬಲ 100 ತಲುಪಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಸಂತದಾದಾ ಪಾಟೀಲ್ ಅವರ ಮೊಮ್ಮಗ ವಿಶಾಲ್ ಪಾಟೀಲ್ ಅವರು ಸಾಂಗ್ಲಿ ಕ್ಷೇತ್ರದಿಂದ ಬಿಜೆಪಿಯ ಸಂಜಯ್ ಕಾಕಾ ಪಾಟೀಲ್ ಅವರನ್ನು ಸೋಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವಿಶಾಲ್ ಪಾಟೀಲ್ ಅವರು ಪಕ್ಷಕ್ಕೆ ನೀಡಿದ ಬೆಂಬಲವನ್ನು ಸ್ವಾಗತಿಸಿದ್ದಾರೆ.
ಸಾಂಗ್ಲಿಕ್ಷೇತ್ರದಿಂದ ಆಯ್ಕೆ: ಮಹಾರಾಷ್ಟ್ರ ವಿಕಾಸ್ ಅಘಾಡಿ ಪಾಲುದಾರರ ನಡುವೆ ಸೀಟು ಹಂಚಿಕೆ ವ್ಯವಸ್ಥೆಯಲ್ಲಿ ಸಾಂಗ್ಲಿ ಸ್ಥಾನವನ್ನು ಶಿವಸೇನೆಗೆ ನೀಡಿದ್ದರಿಂದ, ವಿಶಾಲ್ ಪಾಟೀಲ್ ಸ್ವತಂತ್ರವಾಗಿ ಸ್ಪರ್ಧಿಸಿದರು. ವಿಶಾಲ್ ಪಾಟೀಲ್ ಮತ್ತು ವಿಶ್ವಜಿತ್ ಕದಮ್ ನವದೆಹಲಿಯಲ್ಲಿ ಕಾಂಗ್ರಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು. ಬೆಂಬಲದ ಪತ್ರ ನೀಡಿದರು.
ಇನ್ನೊಬ್ಬರು ಬೆಂಬಲ ಸಾಧ್ಯತೆ: ಬಿಹಾರದ ಪೂರ್ನಿಯಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿರುವ ಪಪ್ಪು ಯಾದವ್ ಕೂಡ ಕಾಂಗ್ರೆಸ್‌ಗೆ ಬೆಂಬಲ ನೀಡುವ ನಿರೀಕ್ಷೆಯಿದೆ. ಬಿಹಾರದಲ್ಲಿ ಇಂಡಿಯ ಒಕ್ಕೂಟದ ಒಪ್ಪಂದದನ್ವಯ ಪೂರ್ನಿಯಾ ಸ್ಥಾನ ಆರ್‌ಜೆಡಿಗೆ ಹೋಯಿತು. ಇದರಿಂದ ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು.