ICC Champions Trophy| ಭಾರತ v/s ಪಾಕಿಸ್ತಾನ ಪಂದ್ಯ ಮಾರ್ಚ್ 1ರಂದು?

ಚಾಂಪಿಯನ್ಸ್‌ ಟ್ರೋಫಿ ಪಂದ್ಯಗಳನ್ನು ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಆಯೋಜಿಸಲಾಗಿದೆ. ಮಾರ್ಚ್ 10 ಮೀಸಲು ದಿನವಾಗಿರಲಿದೆ. ಪಂದ್ಯಗಳ ಪಟ್ಟಿಗೆ ಬಿಸಿಸಿಐ ಅನುಮೋದನೆ ನೀಡಬೇಕಿದೆ.

Update: 2024-07-04 08:26 GMT

ಹೊಸದಿಲ್ಲಿ, ಜುಲೈ 3- ಪಾಕಿಸ್ತಾನ ಮತ್ತು ಭಾರತ ನಡುವಿನ ಚಾಂಪಿಯನ್ಸ್‌ ಟ್ರೋಫಿ ಪಂದ್ಯವು  ಲಾಹೋರ್‌ನಲ್ಲಿ 2025ರ ಮಾರ್ಚ್ 1 ರಂದು ನಡೆಯಲಿದೆ. ಆದರೆ, ಈ ತಾತ್ಕಾಲಿಕ ವೇಳಾಪಟ್ಟಿಗೆ ಬಿಸಿಸಿಐ ಒಪ್ಪಿಗೆ ನೀಡಬೇಕಿದೆ ಎಂದು ಐಸಿಸಿ ಮಂಡಳಿಯ ಹಿರಿಯ ಸದಸ್ಯರು ಬುಧವಾರ ತಿಳಿಸಿದ್ದಾರೆ.

ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ಪಂದ್ಯಾವಳಿ ಯೋಜಿಸಲಾಗಿದ್ದು, ಮಾರ್ಚ್ 10 ಮೀಸಲು ದಿನವಾಗಿರಲಿದೆ. 

ಬಾರ್ಬಡೋಸ್‌ನಲ್ಲಿ ಟಿ20 ವಿಶ್ವಕಪ್ ಫೈನಲ್ ವೀಕ್ಷಿಸಲು ಆಹ್ವಾನಿತರಾಗಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು 15 ಪಂದ್ಯಗಳ ವೇಳಾಪಟ್ಟಿಯನ್ನು ಸಲ್ಲಿಸಿದ್ದಾರೆ. ಭದ್ರತೆ ಮತ್ತು ವ್ಯವಸ್ಥಾಪನೆ ಕಾರಣಗಳಿಗಾಗಿ ಭಾರತದ ಎಲ್ಲ ಪಂದ್ಯಗಳನ್ನು ಲಾಹೋರಿನಲ್ಲಿ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ. 

ʻಪಿಸಿಬಿ 15 ಪಂದ್ಯಗಳ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳ ಪಟ್ಟಿಯನ್ನು ಸಲ್ಲಿಸಿದೆ. ಲಾಹೋರ್‌ನಲ್ಲಿ ಏಳು, ಕರಾಚಿಯಲ್ಲಿ ಮೂರು ಮತ್ತು ರಾವಲ್ಪಿಂಡಿಯಲ್ಲಿ ಐದು ಪಂದ್ಯ ನಡೆಯಲಿದೆ,ʼ ಎಂದು ಐಸಿಸಿ ಮಂಡಳಿಯ ಸದಸ್ಯರೊಬ್ಬರು ತಿಳಿಸಿದರು. 

ʻಮೊದಲ ಪಂದ್ಯ ಕರಾಚಿಯಲ್ಲಿ, ಎರಡು ಸೆಮಿಫೈನಲ್‌ ಗಳು ಕರಾಚಿ ಹಾಗೂ ರಾವಲ್ಪಿಂಡಿಯಲ್ಲಿ ಮತ್ತು ಫೈನಲ್ ಲಾಹೋರಿನಲ್ಲಿ ನಡೆಯಲಿದೆ. ಭಾರತದೊಡಗಿನ ಪಂದ್ಯಗಳು ಲಾಹೋರಿನಲ್ಲಿ ನಡೆಯಲಿದೆ,ʼ ಎಂದು ತಿಳಿದುಬಂದಿದೆ.

ಎ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ಹಾಗೂ ಬಿ ಗುಂಪಿನಲ್ಲಿ ಆಸ್ಟ್ರೇಲಿಯ, ದಕ್ಷಿಣ ಆಫ್ರಿಕ, ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಇದೆ.

ಐಸಿಸಿ ಈವೆಂಟ್‌ಗಳ ಮುಖ್ಯಸ್ಥ ಕ್ರಿಸ್ ಟೆಟ್ಲಿ ಅವರು ಇಸ್ಲಾಮಾಬಾದ್‌ನಲ್ಲಿ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಇತ್ತೀಚೆಗೆ ಭೇಟಿಯಾದರು.

ಪಾಕಿಸ್ತಾನ 2023 ರಲ್ಲಿ ಆಯೋಜಿಸಿದ್ದ ಏಷ್ಯಾ ಕಪ್, ದೇಶ ನಡೆಸಿಕೊಟ್ಟ ಕೊನೆಯ ಟೂರ್ನಿ. ಭಾರತ ತನ್ನ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತು. ನಡೆಸಲಾಯಿತು. ಭಾರತ ಸರ್ಕಾರವು ಆಟಗಾರರಿಗೆ ಪಾಕಿಸ್ತಾನದಲ್ಲಿ ಆಟವಾಡಲು ಅನುಮತಿ ನಿರಾಕರಿಸಿತ್ತು.

ʻಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲ ದೇಶಗಳ ಕ್ರಿಕೆಟ್ ಮಂಡಳಿಗಳ ಮುಖ್ಯಸ್ಥರು (ಬಿಸಿಸಿಐ ಹೊರತುಪಡಿಸಿ) ಸಂಪೂರ್ಣ ಬೆಂಬಲದ ಭರವಸೆ ನೀಡಿದ್ದಾರೆ,ʼ ಎಂದು ಮೂಲಗಳು ಹೇಳಿವೆ. 

ಬಿಸಿಸಿಐ ಈ ಸಂಬಂಧ ಯಾವಾಗ ನಿರ್ಣಯಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Tags:    

Similar News