Wayanad Landslide: ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಹುಲ್ ಒತ್ತಾಯ
ವಯನಾಡಿನಲ್ಲಿ ವಿಪತ್ತು ನಿರೋಧಕ ಮೂಲಸೌಕರ್ಯಗಳನ್ನು ನಿರ್ಮಿಸಲು ಸಮಗ್ರ ಪುನರ್ವಸತಿ ಪ್ಯಾಕೇಜ್ ಒದಗಿಸಬೇಕು ಮತ್ತು ಸಂತ್ರಸ್ತರಿಗೆ ಅಧಿಕ ಪರಿಹಾರ ನೀಡಬೇಕು ಎಂದು ರಾಹುಲ್ ಗಾಂಧಿ ಅವರು ಕೇಂದ್ರವನ್ನು ಒತ್ತಾಯಿಸಿದರು.;
ವಯನಾಡ್ ದುರಂತವನ್ನು ರಾಷ್ಟ್ರೀಯ ದುರಂತ ಎಂದು ಘೋಷಿಸುವಂತೆ ಲೋಕಸಭೆ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಕೇಂದ್ರವನ್ನು ಒತ್ತಾಯಿಸಿದರು.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಮಾತನಾಡಿದ ರಾಹುಲ್, ಕೇರಳವು ನೂರಾರು ಮಾನವ ಜೀವಗಳ ನಷ್ಟ ಮತ್ತು ವ್ಯಾಪಕ ವಿನಾಶವನ್ನು ಎದುರಿಸಿದೆ. ಭೂಕುಸಿತ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ʻದುರಂತವನ್ನು ನಾನು ಕಣ್ಣಾರೆ ನೋಡಿದ್ದೇನೆ; ದುರಂತ ಸಂಭವಿಸಿದ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಕೆಲವು ಸಂದರ್ಭಗಳಲ್ಲಿ ಇಡೀ ಕುಟುಂಬ ಕಣ್ಮರೆಯಾಗಿ, ವಯಸ್ಕರು ಅಥವಾ ಮಕ್ಕಳು ಉಳಿದು ಕೊಂಡಿದ್ದಾರೆ. 200 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ ಮತ್ತು ಅಪಾರ ಮಂದಿ ಕಾಣೆಯಾಗಿದ್ದಾರೆ. ಅಂತಿಮವಾಗಿ ಮೃತರ ಸಂಖ್ಯೆ 400 ಮೀರಬಹುದು,ʼ ಎಂದು ರಾಹುಲ್ ಹೇಳಿದರು.
ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳು, ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾದ ಕೇಂದ್ರ ಪಡೆಗಳು ಮತ್ತು ಸೇನೆ ಯ ಕಾರ್ಯವನ್ನು ಶ್ಲಾಘಿಸಿದರು. ದುರಂತದ ಸಂದರ್ಭದಲ್ಲಿ ನೆರವಾದವರಿಗೆ ಕೃತಜ್ಞತೆ ಸಲ್ಲಿಸಿದರು. ಸಮುದಾಯಗಳ ಒಗ್ಗಟ್ಟನ್ನು ಎತ್ತಿ ತೋರಿಸಿದರು.
ʻಸಿದ್ಧಾಂತಗಳನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳು ಜನರಿಗೆ ಸಹಾಯ ಮಾಡಲು ಒಗ್ಗೂಡುವುದನ್ನು ನೋಡುವುದು ಸಂತೋಷಕರ ಅನುಭವ,ʼ ಎಂದು ಹೇಳಿದರು.
ಭೂಕುಸಿತದಿಂದ ರಸ್ತೆಗಳು ಕುಸಿದು, ಬಿಕ್ಕಟ್ಟು ಉಲ್ಬಣಗೊಂಡಿತು. ಇದೊಂದು ಭಾರಿ ದುರಂತ. ಸಮಗ್ರ ಪುನರ್ವಸತಿ ಪ್ಯಾಕೇಜ್ ಒದಗಿಸಬೇಕು; ವಿಪತ್ತು ನಿರೋಧಕ ಮೂಲಸೌಕರ್ಯಗಳನ್ನು ನಿರ್ಮಿಸಲು ನೆರವು ಮತ್ತು ಸಂತ್ರಸ್ತರಿಗೆ ಅಧಿಕ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.