‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಖ್ಯಾತಿಯ ಹುಬ್ಬಳ್ಳಿಯ ವಿ.ಸಿ. ಸಜ್ಜನರ್ ಹೈದರಾಬಾದ್ ಪೊಲೀಸ್ ಕಮಿಷನರ್
ವಿ.ಸಿ. ಸಜ್ಜನರ್ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು 2019ರಲ್ಲಿ. ಹೈದರಾಬಾದ್ ಹೊರವಲಯದಲ್ಲಿ ಪಶುವೈದ್ಯೆ 'ದಿಶಾ' (ಹೆಸರು ಬದಲಾಯಿಸಲಾಗಿದೆ) ಹತ್ಯೆ ಪ್ರಕರಣದ ಆರೋಪಿಗಳನ್ನು ಎನ್‌ಕೌಂಟರ್ ಮಾಡಿದಾಗ.
ತಮ್ಮ ಖಡಕ್ ಕಾರ್ಯವೈಖರಿ ಮತ್ತು ದಿಟ್ಟ ನಿರ್ಧಾರಗಳಿಂದ 'ಎನ್‌ಕೌಂಟರ್ ಸ್ಪೆಷಲಿಸ್ಟ್' ಹಾಗೂ 'ಸೂಪರ್ ಕಾಪ್' ಎಂದೇ ತೆಲಂಗಾಣದಲ್ಲಿ ಖ್ಯಾತರಾಗಿರುವ, ಕನ್ನಡಿಗ, ಹಿರಿಯ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್ ಅವರು ಹೈದರಾಬಾದ್ ನಗರದ ನೂತನ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ನೇತೃತ್ವದ ಸರ್ಕಾರವು 23 ಐಪಿಎಸ್ ಮತ್ತು 6 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮಹತ್ವದ ಆದೇಶ ಹೊರಡಿಸಿದ್ದು, ಈ ಮೂಲಕ ಆಡಳಿತ ಯಂತ್ರಕ್ಕೆ ದೊಡ್ಡ ಮಟ್ಟದ ಸರ್ಜರಿ ಮಾಡಿದೆ.
ಹುಬ್ಬಳ್ಳಿಯವರಾದ 1996ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ವಿ.ಸಿ. ಸಜ್ಜನರ್, ಈ ಹಿಂದೆ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (TSRTC) ವ್ಯವಸ್ಥಾಪಕ ನಿರ್ದೇಶಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈಗ, ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಹೈದರಾಬಾದ್‌ನ ಕಾನೂನು ಮತ್ತು ಸುವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಹೈದರಾಬಾದ್ ಕಮಿಷನರ್ ಆಗಿದ್ದ ಸಿ.ವಿ. ಆನಂದ್ ಅವರನ್ನು ಗೃಹ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಸದ್ದು ಮಾಡಿದ್ದ ‘ದಿಶಾ’ ಎನ್‌ಕೌಂಟರ್
ವಿ.ಸಿ. ಸಜ್ಜನರ್ ಅವರ ಹೆಸರು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿದ್ದು 2019ರಲ್ಲಿ. ಹೈದರಾಬಾದ್ ಹೊರವಲಯದಲ್ಲಿ ಪಶುವೈದ್ಯೆ 'ದಿಶಾ' (ಹೆಸರು ಬದಲಾಯಿಸಲಾಗಿದೆ) ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಆಗ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿದ್ದ ಸಜ್ಜನರ್ ಅವರ ನೇತೃತ್ವದಲ್ಲಿ, ನಾಲ್ವರು ಆರೋಪಿಗಳನ್ನು ಘಟನಾ ಸ್ಥಳದಲ್ಲಿಯೇ ಎನ್‌ಕೌಂಟರ್ ಮಾಡಲಾಗಿತ್ತು. ಈ ಘಟನೆಯು ಅವರಿಗೆ 'ಎನ್‌ಕೌಂಟರ್ ಸ್ಪೆಷಲಿಸ್ಟ್' ಎಂಬ ಬಿರುದನ್ನು ತಂದುಕೊಟ್ಟಿತ್ತು. ಇದಕ್ಕೂ ಮುನ್ನ, 2008ರಲ್ಲಿ ವಾರಂಗಲ್‌ನಲ್ಲಿ ನಡೆದಿದ್ದ ಆ್ಯಸಿಡ್ ದಾಳಿ ಪ್ರಕರಣದ ಆರೋಪಿಗಳನ್ನೂ ಎನ್‌ಕೌಂಟರ್ ಮಾಡಲಾಗಿತ್ತು. ಆಗ ಸಜ್ಜನರ್ ವಾರಂಗಲ್ ಎಸ್ಪಿಯಾಗಿದ್ದರು.
ಹುಬ್ಬಳ್ಳಿಯಿಂದ ಹೈದರಾಬಾದ್‌ವರೆಗೆ
1968ರ ಅಕ್ಟೋಬರ್ 24ರಂದು ಹುಬ್ಬಳ್ಳಿಯಲ್ಲಿ ಜನಿಸಿದ ವಿಶ್ವನಾಥ್ ಚನ್ನಪ್ಪ ಸಜ್ಜನರ್, ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಧಾರವಾಡದ ಜೆ.ಜಿ. ವಾಣಿಜ್ಯ ಕಾಲೇಜಿನಲ್ಲಿ ಬಿಕಾಂ ಮತ್ತು ಕೌಸಲಿ ಇನ್‌ಸ್ಟಿಟ್ಯೂಟ್‌ನಲ್ಲಿ ಎಂಬಿಎ ಪದವಿ ಪಡೆದರು. 1996ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಪಿಎಸ್‌ಗೆ ಸೇರಿದರು. ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಕ್ರೈಂ ನಿಯಂತ್ರಣ ಮತ್ತು ಜನಸ್ನೇಹಿ ಪೊಲೀಸಿಂಗ್‌ಗೆ ಹೆಚ್ಚು ಒತ್ತು ನೀಡುವ ಸಜ್ಜನರ್, ಈ ಹಿಂದೆ ಗುಪ್ತಚರ ಇಲಾಖೆಯ ಐಜಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಈ ನೇಮಕವು ಹೈದರಾಬಾದ್ ಪೊಲೀಸ್ ಇಲಾಖೆಗೆ ಹೊಸ ದಿಕ್ಕು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.