ದೇಶಿಯ ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ: ಎಚ್.ಡಿ.ಕುಮಾರಸ್ವಾಮಿ
ವಿಶೇಷವಾಗಿ 11,400 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನೀಡಿದ ನಂತರ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ವೈಜಾಗ್ ಸ್ಟೀಲ್) ಕಾರ್ಯಕ್ಷಮತೆಯ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.;
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮೇಕ್ ಇನ್ ಇಂಡಿಯಾ ಹಾಗೂ ಆತ್ಮನಿರ್ಭರ ಭಾರತ ಯೋಜನೆಗಳ ಅಡಿಯಲ್ಲಿ ದೇಶಿಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಗತ್ಯ ಪ್ರಮಾಣದಲ್ಲಿ ತಯಾರಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರಸ್ತೆ ಸಾರಿಗೆ ಕ್ಷೇತ್ರದಲ್ಲಿ ವಾಯು ಮಾಲಿನ್ಯವನ್ನು ಗಣನೀಯ ಪ್ರಮಾಣದಲ್ಲಿ ಕುಗ್ಗಿಸಬೇಕಾಗಿದ್ದು ಆ ನಿಟ್ಟಿನಲ್ಲಿ ಪ್ರಧಾನಿಗಳು ನಿಗದಿ ಮಾಡಿರುವ ಗುರಿಗಳನ್ನು ತಲುಪಬೇಕು ಎಂದು ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ನವದೆಹಲಿಯಲ್ಲಿ ಮಂಗಳವಾರ ತಮ್ಮ ಉಸ್ತುವಾರಿಯ ಎರಡೂ ಸಚಿವಾಲಯಗಳ ಉನ್ನತ ಅಧಿಕಾರಿಗಳ ಜತೆ ಪ್ರತ್ಯೇಕ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಎಲೆಕ್ಟ್ರಿಕ್ ವಾಹನಗಳ ಬಳಕೆ ಕುರಿತಾದ ಪಿಎಂ ಇ-ಡ್ರೈವ್ ಹಾಗೂ ಉತ್ಪಾದನಾ ಸಂಪರ್ಕ ಸೌಲಭ್ಯ (ಪಿಎಲ್‌ಐ) ಕಾರ್ಯಕ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಕೆಲ ನಿರ್ದಿಷ್ಟ ಸೂಚನೆಗಳನ್ನು ನೀಡಿದರು.
ಈಗಾಗಲೇ ಭಾರತೀಯ ಉಕ್ಕು ಪ್ರಾಧಿಕಾರದ (ಎಸ್‌ಎಐಎಲ್) ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಉಕ್ಕು ಉತ್ಪಾದಕ ಕಂಪನಿಗಳ ಪ್ರಗತಿ, ಉತ್ಪಾದಕತೆಯ ಕ್ಷಮತೆ ಹಾಗೂ ವಿಶೇಷವಾಗಿ 11,400 ಕೋಟಿ ರೂಪಾಯಿ ಪರಿಹಾರ ಪ್ಯಾಕೇಜ್ ನೀಡಿದ ನಂತರ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ (ವೈಜಾಗ್ ಸ್ಟೀಲ್) ಕಾರ್ಯಕ್ಷಮತೆಯ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.
ಉಕ್ಕು ಕ್ಷೇತ್ರದಲ್ಲಿ ಮಾಲಿನ್ಯವನ್ನು ಶೂನ್ಯಮಟ್ಟಕ್ಕೆ ಇಳಿಸಲೇಬೇಕೆಂಬ ಪ್ರಧಾನಿಗಳ ಸಂಕಲ್ಪವನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಬೇಕು. ಗ್ರೀನ್ ಸ್ಟೀಲ್ ತಯಾರಿಕೆಗೆ ಹೆಚ್ಚಿನ ಮಾರ್ಗೋಪಾಯಗಳನ್ನು ಕಂಡುಕೊಂಡು ಬಲಪಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲೋಹ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಸೊಸೈಟಿ (ಎಸ್‌ಆರ್‌ಟಿಎಂಐ) ಯನ್ನು ಕೇಂದ್ರವಾಗಿರಿಸಿಕೊಂಡು ಕಾರ್ಯಪ್ರವೃತ್ತವಾಗಿದ್ದೇವೆ. ಸಿಎಸ್‌ಐಆರ್‌ಒ ಮತ್ತು ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ ಸೇರಿದಂತೆ ಆಸ್ಟ್ರೇಲಿಯಾದ ಸಂಸ್ಥೆಗಳೊಂದಿಗೆ ಸಹಯೋಗದ ಚರ್ಚೆಗಳನ್ನು ನಡೆಸುತ್ತಿದ್ದು, ಹೈಡ್ರೋಜನ್ ಆಧಾರಿತ ಗ್ರೀನ್ ಸ್ಟೀಲ್ ಉತ್ಪಾದನೆ ಮತ್ತು ಇಂಗಾಲರಹಿತೀಕರಣದ ಕಡೆಗೆ ಹೆಜ್ಜೆಗಳನ್ನಿಡಲಾಗುತ್ತಿದೆ, ಪ್ರಧಾನಿ ಮೋದಿಯವರು ನಿರ್ದಿಷ್ಟಪಡಿಸಿರುವ ಗುರಿ ತಲುಪಲು ಹೆಚ್ಚಿನ ಪ್ರಮಾಣದಲ್ಲಿ ಎಲೆಕ್ಟ್ರಿಕ್ ವಾಹಗಳ ಬಳಕೆಯನ್ನು ಉತ್ತೇಜಿಸುವುದು, ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ ಹಾಗೂ ಇನ್ನಿತರೆ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡುವ ಕುರಿತು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.