'ಮೆಲೋಡಿ ತಂಡದಿಂದ ಹಲೋ': ಮೋದಿಯವರೊಂದಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿಡಿಯೋ
ಉಭಯ ನಾಯಕರು ಜೂನ್ 14 ರಂದು ದಿನದ ಕೊನೆಯಲ್ಲಿ ಭೇಟಿಯಾದರು. ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿದ ಇಟಲಿಯ ಪ್ರಧಾನಿಗೆ ಧನ್ಯವಾದ ಅರ್ಪಿಸಿದರು.;
ʻಹಾಯ್ ಫ್ರೆಂಡ್ಸ್, #ಮೆಲೋಡಿಯಿಂದʼ- ಇದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಒಡನಾಟವನ್ನು ತೋರಿಸುವ ಸಣ್ಣ ಸೆಲ್ಫಿ ವೀಡಿಯೊಗೆ ನೀಡಿದ ಶೀರ್ಷಿಕೆ.
ದಕ್ಷಿಣ ಇಟಲಿಯ ಅಪುಲಿಯಾಕ್ಕೆ ಪ್ರಧಾನಿ ಮೋದಿಯವರ ದಿನದ ಭೇಟಿಯ ಅಂತ್ಯದ ವೇಳೆಗೆ ಉಭಯ ನಾಯಕರು ಶುಕ್ರವಾರ (ಜೂನ್ 14) ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಜಿ 7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಯ ಪ್ರಧಾನಿ ನೀಡಿದ ಆಹ್ವಾನಕ್ಕಾಗಿ ಧನ್ಯವಾದ ಅರ್ಪಿಸಿದರು. ಐತಿಹಾಸಿಕ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮೊದಲ ವಿದೇಶ ಪ್ರವಾಸವಾಗಿದೆ. ಐದು ಸೆಕೆಂಡುಗಳ ವಿಡಿಯೋವನ್ನು ಮೆಲೋನಿ ಶನಿವಾರ (ಜೂನ್ 15) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ʻಮೆಲೋಡಿ ತಂಡದಿಂದ ನಮಸ್ಕಾರ,ʼ 47 ವರ್ಷದ ಇಟಲಿಯ ನಾಯಕಿ, ದೇಶದ ಮೊದಲ ಮಹಿಳಾ ಪ್ರಧಾನಿ ಎಂದು ವಿಡಿಯೋದಲ್ಲಿ ಹೇಳಿದ್ದು, ಅವರ ಹಿಂದೆ 73 ವರ್ಷದ ಮೋದಿ ಅವರು ನಗುತ್ತಿರುವುದನ್ನು ಕಾಣಬಹುದು.
ಪ್ರಧಾನಿ ಮೋದಿ ಅವರು ವಿಡಿಯೋ ಮರುಶೇರ್ ಮಾಡಿದ್ದಾರೆ ಮತ್ತು ʻಭಾರತ-ಇಟಲಿ ನಡುವೆ ಸ್ನೇಹ ದೀರ್ಘ ಕಾಲ ಇರಲಿ!ʼ ಎಂದು ಬರೆದಿದ್ದಾರೆ.
ಶನಿವಾರ (ಜೂನ್ 15)ರಂದು ಜಿ7 ಶೃಂಗಸಭೆಯಲ್ಲಿ ಇಬ್ಬರು ನಾಯಕರ ಸೆಲ್ಫಿ ವೈರಲ್ ಆಗಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ದುಬೈನಲ್ಲಿ ನಡೆದ 28ನೇ ಸಮ್ಮೇಳನ(ಸಿಒಪಿ 28)ದಲ್ಲಿ ಇಬ್ಬರು ನಾಯಕರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು.
ಚಿತ್ರವನ್ನು ಹಂಚಿಕೊಂಡ ಮೆಲೋನಿ, ʻCOP28, #Melodi ಯಲ್ಲಿ ಉತ್ತಮ ಸ್ನೇಹಿತರುʼ ಎಂದು ಶೀರ್ಷಿಕೆ ನೀಡಿದ್ದಾರೆ.
ಬಾರಿಯಲ್ಲಿ ಶುಕ್ರವಾರ (ಜೂನ್ 14) ನಡೆದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ, ಉಭಯ ನಾಯಕರು ದ್ವಿಪಕ್ಷೀಯ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಿದರು ಮತ್ತು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಸೇರಿದಂತೆ ಜಾಗತಿಕ ವೇದಿಕೆಗಳು ಮತ್ತು ಬಹುಪಕ್ಷೀಯ ಉಪಕ್ರಮಗಳಲ್ಲಿ ಸಹಕಾರವನ್ನು ಬಲಪಡಿಸಲು ಒಪ್ಪಿಕೊಂಡರು.
ʻಪ್ರಧಾನಿ @GiorgiaMeloni ಅವರೊಂದಿಗೆ ಫಲಪ್ರದ ಚರ್ಚೆ ನಡೆಸಿದ್ದೇನೆ,ʼ ಎಂದು ಪ್ರಧಾನಿ ಮೋದಿ ಎಕ್ಸ್ ನಲ್ಲಿ ಬರೆದಿದ್ದಾರೆ.
ʻವಾಣಿಜ್ಯ, ಇಂಧನ, ರಕ್ಷಣೆ, ಟೆಲಿಕಾಂ ಮತ್ತು ಹೆಚ್ಚಿನ ಕ್ಷೇತ್ರಗಳಲ್ಲಿ ಭಾರತ-ಇಟಲಿಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಮಾರ್ಗಗಳನ್ನು ಚರ್ಚಿಸಿದ್ದೇವೆ. ಜೈವಿಕ ಇಂಧನ, ಆಹಾರ ಸಂಸ್ಕರಣೆ ಮತ್ತು ಮುಖ್ಯ ಖನಿಜಗಳಂತಹ ಭವಿಷ್ಯದ ಕ್ಷೇತ್ರಗಳಲ್ಲಿ ನಮ್ಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುತ್ತವೆ,ʼ ಎಂದು ಅವರು ಸಭೆ ನಂತರ ಹೇಳಿದರು.