ಬಿಸಿ ಗಾಳಿಗೆ ಉತ್ತರ ಭಾರತ ತತ್ತರ| ಒಟ್ಟು 54 ಮಂದಿ ಬಲಿ. ಬಿಹಾರ ಮತ್ತು ಜಾರ್ಖಂಡದಲ್ಲಿ 18 ಸಾವು

Update: 2024-06-01 08:51 GMT

ಉತ್ತರಪ್ರದೇಶ/ ಪಾಟ್ನಾ/ರಾಂಚಿ/ಭುವನೇಶ್ವರ: ಉತ್ತರಪ್ರದೇಶ, ಬಿಹಾರ, ಒಡಿಷಾ ಮತ್ತು ಜಾರ್ಖಂಡ್‌ ಸೇರಿದಂತೆ ಉತ್ತರದ ರಾಜ್ಯಗಳು ಬಿಸಿ ಗಾಳಿಯಿಂದ ತತ್ತರಿಸಿದೆ. ಬಿಹಾರ ಮತ್ತು ಜಾರ್ಖಂಡದಲ್ಲಿ ಕಳೆದ 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿದಂತೆ ಕನಿಷ್ಠ 18 ಜನ ಬಲಿ ಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬಿಹಾರದಲ್ಲಿ 14, ನೆರೆಯ ಜಾರ್ಖಂಡದಲ್ಲಿ ನಾಲ್ಕು ಹಾಗೂ ಒಡಿಷಾದಲ್ಲಿ ಐವರು ಮೃತಪಟ್ಟಿದ್ದಾರೆ. ಬಿಹಾರದಲ್ಲಿ ಬಿಸಿಲ ಝಳದಿಂದ 10 ಹಾಗೂ ಮಿರ್ಜಾಪುರದಲ್ಲಿ ಅನಾರೋಗ್ಯ ದಿಂದ 15 ಮಂದಿ ಚುನಾವಣೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ಮತ್ತು ರಾಜಾಸ್ಥಾನದಲ್ಲೂ ಸಾವುಗಳು ಸಂಭವಿಸಿವೆ. ಗುರುವಾರದಿಂದ ಈವರೆಗೆ 54 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿ ದೆ. ಒಡಿಶಾ ಸರ್ಕಾರ ಕಳೆದ ಕೆಲವು ದಿನಗಳಿಂದ ಬಿಸಿಲಿನ ಆಘಾತದಿಂದ ಐದು ಸಾವುಗಳನ್ನು ದೃಢಪಡಿಸಿದೆ. 18 ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ. 

ಬಿಹಾರ: ಬಿಹಾರದ ವಿಪತ್ತು ನಿರ್ವಹಣೆ ಇಲಾಖೆ ಪ್ರಕಾರ, ಚುನಾವಣೆ ಕರ್ತವ್ಯದಲ್ಲಿದ್ದ ಐವರು ಅಧಿಕಾರಿಗಳು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಭೋಜ್‌ಪುರದಿಂದ ಹೆಚ್ಚಿನ ಸಾವುನೋವುಗಳು ವರದಿಯಾಗಿವೆ. ರೋಹ್ತಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು ಮತ್ತು ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದ ವಿವಿಧೆಡೆ ಇತರ ನಾಲ್ಕು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪ್ರಕಟಣೆ ತಿಳಿಸಿದೆ. 

ರಾಜ್ಯ ಸುಡುವ ತಾಪಮಾನದಿಂದ ತತ್ತರಿಸುತ್ತಿದೆ. ತಾಪಮಾನ ಹಲವಾರು ಸ್ಥಳಗಳಲ್ಲಿ 44 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಇದೆ. ಬಕ್ಸಾರ್‌ನಲ್ಲಿ ಗುರುವಾರ ಗರಿಷ್ಠ ತಾಪಮಾನ 47.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬಿಸಿಗಾಳಿಯಿಂದ ಶಾಲೆಗಳು, ಕೋಚಿಂಗ್ ಸಂಸ್ಥೆಗಳು ಮತ್ತು ಅಂಗನವಾಡಿ ಕೇಂದ್ರಗಳನ್ನು ಜೂನ್ 8 ರವರೆಗೆ ಮುಚ್ಚಲಾಗುತ್ತದೆ. 

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿ ಗಳಿಗೆ ನಿರ್ದೇಶನ ನೀಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಪ್ರಕಟಣೆ ಪ್ರಕಾರ, ರಾಜ್ಯದಾದ್ಯಂತ ಜನಸಾಮಾನ್ಯರ ಸುರಕ್ಷತೆಗೆ ಪ್ರತಿ ಹಂತದಲ್ಲೂ ವ್ಯವಸ್ಥೆಗಳನ್ನು ಮಾಡಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ʻಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳು/ವೈದ್ಯಕೀಯ ಕಾಲೇಜುಗಳಲ್ಲಿ ಬಿಸಿ ಗಾಳಿ ಪೀಡಿತರಿಗೆ ತಕ್ಷಣ ಚಿಕಿತ್ಸೆ ನೀಡಬೇಕು,ʼ ಎಂದು ತಿಳಿಸಿದ್ದಾರೆ. 

ಜಾರ್ಖಂಡ: ರಾಜ್ಯದಲ್ಲಿ ಬಿಸಿಲಿನಿಂದ ನಾಲ್ವರು ಸಾವನ್ನಪ್ಪಿದ್ದು, 1,326 ಮಂದಿ ಶಾಖ ಸಂಬಂಧಿ ಸಮಸ್ಯೆಗಳಿಂದ ಆಸ್ಪತ್ರೆಗಳಿಗೆ ದಾಖಲಾಗಿ ದ್ದಾರೆ. ಜಿಲ್ಲಾ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೌಲಭ್ಯಗಳಲ್ಲಿ ಹವಾನಿಯಂತ್ರಿತ ಕೊಠಡಿಗಳು ಮತ್ತು ಹಾಸಿಗೆಗಳನ್ನು ಸನ್ನದ್ಧವಾಗಿಡಲು ಸೂಚನೆ ನೀಡಲಾಗಿದೆ. 

ಜಾರ್ಖಂಡದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ಡಾ. ಅಲೋಕ್ ತ್ರಿವೇದಿ, ʻಪಲಮುದಲ್ಲಿ ಮೂವರು ಮತ್ತು ಜಮ್ಶಡ್‌ಪುರದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಸಾವುಗಳು ಆಸ್ಪತ್ರೆಗಳಲ್ಲಿ ಸಂಭವಿಸಿಲ್ಲ. 1,326 ಜನರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ,ʼ ಎಂದು ಹೇಳಿದ್ದಾರೆ. ಜಾರ್ಖಂಡದ ಹೆಚ್ಚಿನ ಜಿಲ್ಲೆಗಳು 40 ಡಿಗ್ರಿ ಸೆ. ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ. ಡಾಲ್ಟನ್‌ ಗಂಜ್ ಮತ್ತು ಗರ್ಹ್ವಾ ಮುಂತಾದ ಕಡೆ ತಾಪಮಾನ 47 ಡಿಗ್ರಿ ಸೆಲ್ಸಿಯಸ್ ಮೀರಿದೆ.

ಒಡಿಷಾ: ಒಡಿಶಾ ಸರ್ಕಾರ ಕಳೆದ ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ಐದು ಸಾವುಗಳನ್ನು ದೃಢಪಡಿಸಿದೆ. 18 ಶಂಕಿತ ಪ್ರಕರಣಗಳ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಡಿಶಾದ ವಿಶೇಷ ಪರಿಹಾರ ಆಯುಕ್ತ ಸತ್ಯಬ್ರತ ಸಾಹು, ಬಾಲಸೋರ್, ಧೆಂಕನಾಲ್, ಮಯೂರ್‌ಭಂಜ್, ಸೋನೆಪುರ್ ಮತ್ತು ಬೋಲಂಗೀರ್‌ನಲ್ಲಿ ತಲಾ ಒಂದು ಸಾವು ದೃಢಪಟ್ಟಿದೆ. 18 ಶಂಕಿತ ಸಾವುಗಳ ವರದಿ ಬಂದಿದೆ. ನಿಖರವಾದ ಕಾರಣ ಖಚಿತಪಡಿಸಲು ಮರಣೋತ್ತರ ಪರೀಕ್ಷೆ ಅಗತ್ಯವಿದೆ ಎಂದು ಹೇಳಿದರು.

ಸುಂದರ್‌ಗಢದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಲಕರ್ಣಿ, ʻರೂರ್ಕೆಲಾದ ಖಾಸಗಿ ಆಸ್ಪತ್ರೆಯಲ್ಲಿ 10 ಬಿಸಿಲು ಝಳದ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. 23 ಮಂದಿ ರೂರ್ಕೆಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜರ್ಸುಗುಡಾದಲ್ಲಿ ಆರು ಅಸಹಜ ಸಾವುಗಳು ಶಾಖದ ಹೊಡೆತದಿಂದ ಸಂಭವಿಸಿವೆಯೇ ಎಂದು ಮುಖ್ಯ ಜಿಲ್ಲಾ ವೈದ್ಯಾಧಿಕಾರಿ ಜಯಕೃಷ್ಣ ನಾಯಕ್ ತನಿಖೆ ನಡೆಸುತ್ತಿದ್ದಾರೆ,ʼ ಎಂದು ಹೇಳಿದರು.

ಜೂನ್‌ 3ರವರೆಗೆ ಬಿಸಿ ಗಾಳಿ ಪರಿಸ್ಥಿತಿ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಸಂಬಲ್‌ಪುರ್, ಸುಂದರ್‌ಘರ್, ಬೋಲಂಗಿರ್, ಕಲಹಂದಿ ಮತ್ತು ಬೌಧ್ ಜಿಲ್ಲೆಗಳ ನಿವಾಸಿಗಳು ಮಧ್ಯಾಹ್ನ ಮನೆಯೊಳಗೆ ಇರುವಂತೆ ಸೂಚಿಸಿದೆ. ಕರಾವಳಿ ಪ್ರದೇಶಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣದ ನಿರೀಕ್ಷೆಯಿದೆ ಎಂದು ಹೇಳಿದೆ.

Tags:    

Similar News