Heat Wave in Delhi | ಬಿಸಿ ಗಾಳಿ ತೀವ್ರ: ದೆಹಲಿಯಲ್ಲಿ 48 ತಾಸಿನಲ್ಲಿ 50 ಸಾವು!

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಬಿಸಿ ಗಾಳಿ ತೀವ್ರವಾಗಿದ್ದು, ಜೂನ್ 11- 19 ರ ಅವಧಿಯಲ್ಲಿ 192 ನಿರಾಶ್ರಿತರು ಬಲಿಯಾಗಿದ್ದಾರೆ ಎಂದು ನಿರಾಶ್ರಿತರಿಗಾಗಿ ಕೆಲಸ ಮಾಡುವ ಎನ್‌ಜಿಒ, ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಹೇಳಿದೆ. ಜೂನ್ 12 ರಿಂದ ದೆಹಲಿ ತಾಪಮಾನ 40 ಡಿಗ್ರಿ‌ ಸೆ.ಗಿಂತ ಹೆಚ್ಚಿದೆ.

Update: 2024-06-20 08:34 GMT

ಉತ್ತರ ಮತ್ತು ಪೂರ್ವ ಭಾರತದ ಹಲವು ಪ್ರದೇಶಗಳು ಬಿಸಿ ಗಾಳಿಯ ಹಿಡಿತದಲ್ಲಿ ಸಿಲುಕಿವೆ. ಶಾಖದ ಹೊಡೆತದಿಂದ ಸಾವು ನೋವುಗಳು ಹೆಚ್ಚಿದ್ದು, ರೋಗಿಗಳನ್ನು ಉಪಚರಿಸಲು ವಿಶೇಷ ಘಟಕಗಳನ್ನು ಸ್ಥಾಪಿಸಬೇಕೆಂದು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ. 

ಕಳೆದ 48 ಗಂಟೆಗಳಲ್ಲಿ ದೆಹಲಿಯ ಸುತ್ತಮುತ್ತ ಹಿಂದುಳಿದ ಸಾಮಾಜಿಕ-ಆರ್ಥಿಕ ಹಿನ್ನೆಲೆಗೆ ಸೇರಿದ 50 ಜನರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ಶಾಖದ ಅಲೆಯಿಂದ ಸಾವುನೋವು ಮತ್ತು ಆಘಾತ ಪ್ರಕರಣಗಳು ಹೆಚ್ಚಿವೆ. 

ರಾಷ್ಟ್ರ ರಾಜಧಾನಿಯಲ್ಲಿ ಗರಿಷ್ಠ ತಾಪಮಾನ 43.6 ಡಿಗ್ರಿ ಸೆ. ದಾಖಲಾಗಿದೆ. ಇದು ಸಾಮಾನ್ಯಕ್ಕಿಂತ ಹೆಚ್ಚು. ರಾತ್ರಿ ತಾಪಮಾನ 35.2 ಡಿಗ್ರಿ ಸೆ. ಇದೆ. ಇದು 1969 ರ ಬಳಿಕ ಜೂನ್‌ ಮಾಸದಲ್ಲಿ ದಾಖಲಾದ ಅತಿ ಹೆಚ್ಚು ಉಷ್ಣಾಂಶ ಎಂದು ಹವಾಮಾನ ಕಚೇರಿ ಬುಧವಾರ ತಿಳಿಸಿದೆ. ಮೇ 12 ರಿಂದ ದೆಹಲಿಯಲ್ಲಿ ತಾಪಮಾನವು 40 ಡಿಗ್ರಿಗಿಂತ ಹೆಚ್ಚಿದೆ. ಕಳೆದ 36 ದಿನಗಳಲ್ಲಿ 16 ದಿನ ಪಾದರಸ 45 ಡಿಗ್ರಿಗಿಂತ ಅಧಿಕ ತಾಪಮಾನ ದಾಖಲಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಘಟಕ: ಕೇಂದ್ರ ಸರ್ಕಾರದ ಎಲ್ಲ ಆಸ್ಪತ್ರೆಗಳಲ್ಲಿ ಉಷ್ಣ ಅಲೆಗಳ ವಿಶೇಷ ಘಟಕಗಳನ್ನು ಸ್ಥಾಪಿಸಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಬುಧವಾರ ಸೂಚಿಸಿದ್ದಾರೆ. 

ಕೇಂದ್ರ ಆರೋಗ್ಯ ಸಚಿವಾಲಯವು ಪ್ರತಿಕೂಲ ಪರಿಸ್ಥಿತಿಯನ್ನು ನಿರ್ವಹಿಸಲು ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧಗೊಳಿಸಬೇಕೆಂದು ರಾಜ್ಯ ಗಳಿಗೆ ನಿರ್ದೇಶನ ನೀಡಿದೆ. ಹವಾಮಾನ ಬದಲಾವಣೆ ಮತ್ತು ಮಾನವ ಆರೋಗ್ಯದ ರಾಷ್ಟ್ರೀಯ ಕಾರ್ಯಕ್ರಮ (ಎನ್‌ ಪಿಸಿಸಿಎಚ್‌ಎಚ್‌)ದ ಅಡಿಯಲ್ಲಿ ರಾಜ್ಯ ನೋಡಲ್ ಅಧಿಕಾರಿಗಳನ್ನು ಮಾರ್ಚ್ 1, 2024 ರಿಂದ ಉಷ್ಣ ಅಲೆ ಆಘಾತ ಪ್ರಕರಣಗಳು ಮತ್ತು ಸಾವುಗಳ ಅಂಕಿಅಂಶ ವನ್ನು ಪ್ರತಿದಿನ ಸಲ್ಲಿಸಲು ಕೇಳಿದೆ. 

ದೆಹಲಿಯ ಕೇಂದ್ರದ ನಿರ್ವಹಣೆಯಲ್ಲಿರುವ ಆರ್‌ಎಂಎಲ್ ಆಸ್ಪತ್ರೆಯಲ್ಲಿ ಮೊಟ್ಟಮೊದಲ ಉಷ್ಣ ಅಲೆ ಘಟಕವನ್ನು ಸ್ಥಾಪಿಸಲಾಗಿದೆ. ಘಟಕ ಕಳೆದ ಎರಡು ದಿನಗಳಲ್ಲಿ 22 ರೋಗಿಗಳನ್ನುಉಪಚರಿಸಿದೆ. ಐದು ಸಾವು ಸಂಭವಿಸಿದ್ದು,12-13 ರೋಗಿಗಳು ವೆಂಟಿಲೇಟರ್ ನೆರವು ಪಡೆದಿದ್ದಾರೆ. 

ʻಸಂತ್ರಸ್ತರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಜನರು ಆಸ್ಪತ್ರೆಗೆ ಬಂದಾಗ, ಅವರ ದೇಹದ ಉಷ್ಣತೆಯನ್ನು ದಾಖಲಿಸ ಲಾಗುತ್ತದೆ. ಉಷ್ಣತೆ 105 ಡಿಗ್ರಿ ಫ್ಯಾ.ಗಿಂತ ಹೆಚ್ಚು ಇದ್ದರೆ, ಅವರನ್ನು ಶಾಖದ ಅಲೆಗಳಿಂದ ಆಘಾತಗೊಂಡವರು ಎಂದು ಘೋಷಿಸಲಾಗು ತ್ತದೆ,ʼ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ʻಇವರನ್ನು ಶಾಖ ಅಲೆಗೆ ಸಿಲುಕಿದವರು ಎಂದು ಘೋಷಿಸಲಾಗುತ್ತದೆ. ದೆಹಲಿ ಸರ್ಕಾರದ ಸಮಿತಿಯು ಆನಂತರ ಸಾವುಗಳನ್ನು ದೃಢೀಕರಿಸು ತ್ತದೆ,ʼ ಎಂದು ಅಧಿಕಾರಿ ಹೇಳಿದರು.

ಶಾಖ ಅಲೆ ಘಟಕ ಏನು ಮಾಡುತ್ತದೆ?: ಶಾಖ ಅಲೆ ಘಟಕದ ಮೊದಲ ಕೆಲಸ- ದೇಹವನ್ನು ತಕ್ಷಣ ತಂಪಾಗಿಸುವಿಕೆ. ʻಘಟಕವು ತಂಪಾಗಿಸುವ ತಂತ್ರಜ್ಞಾನವನ್ನು ಹೊಂದಿದೆ. ರೋಗಿಗಳನ್ನು ಮಂಜುಗಡ್ಡೆ ಮತ್ತು ನೀರಿನಿಂದ ತುಂಬಿದ ಸ್ನಾನದ ತೊಟ್ಟಿಯಲ್ಲಿ ಇರಿಸ ಲಾಗುತ್ತದೆ. ಅವರ ದೇಹದ ಉಷ್ಣತೆ 102 ಡಿಗ್ರಿ ಫ್ಯಾರನ್‌ಹೀಟ್‌ಗಿಂತ ಕಡಿಮೆಯಾದಾಗ, ಮೇಲ್ವಿಚಾರಣೆ ಮಾಡಲಾಗುತ್ತದೆ,ʼ ಎಂದು ಹೇಳಿದರು.

ʻಅವರ ದೇಹ ಸ್ಥಿತಿ ಸ್ಥಿರವಾಗಿದ್ದರೆ, ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಇಲ್ಲವಾದರೆ, ವೆಂಟಿಲೇಟರ್‌ನಲ್ಲಿ ಇರಿಸಲಾಗುತ್ತದೆ. ದಾಖಲಾದವರಲ್ಲಿ ಹೆಚ್ಚಿನವರು ಕಾರ್ಮಿಕರು,ʼ ಎಂದು ಹೇಳಿದರು.

ಕನಿಷ್ಠ 50 ಶಾಖ ಸಂಬಂಧಿತ ಸಾವು: ಎಲ್ಲಾ 50 ಜನರು ಶಾಖ ಸಂಬಂಧಿತ ಕಾರಣದಿಂದ ಸಾವನ್ನಪ್ಪಿದ್ದಾರೆಯೇ ಎಂದು ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ದೃಢಪಡಿಸಿಲ್ಲ.

ಇಂಡಿಯಾ ಗೇಟ್ ಬಳಿಯ ಮಕ್ಕಳ ಉದ್ಯಾನವನದಲ್ಲಿ 55 ವರ್ಷದ ವ್ಯಕ್ತಿಯ ಶವ ಬುಧವಾರ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ಕಾರಣ ತಿಳಿಯಲಿದೆ.

ಜೂನ್ 11 ರಿಂದ 19 ರವರೆಗೆ ಬಿಸಿ ಗಾಳಿಗೆ ದೆಹಲಿಯಲ್ಲಿ 192 ನಿರಾಶ್ರಿತರ ಸಾವುಗಳು ದಾಖಲಾಗಿವೆ ಎಂದು ನಿರಾಶ್ರಿತರಿಗಾಗಿ ಕೆಲಸ ಮಾಡುವ ಎನ್‌ಜಿಒ, ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್‌ಮೆಂಟ್ ಹೇಳಿದೆ. 

ಅಸಹಜ ಸಾವುಗಳು: ಭದ್ರತಾ ಸಿಬ್ಬಂದಿ, ಭಿಕ್ಷುಕರು ಅಥವಾ ದುರ್ಬಲರ ಅಸಹಜ ಸಾವಿನ ಬಗ್ಗೆ ಫೋನ್‌ ಕರೆಗಳು ಬರುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮರಣೋತ್ತರ ಪರೀಕ್ಷೆ ನಂತರ ಸಾವಿನ ಹಿಂದಿನ ನಿಜವಾದ ಕಾರಣ ತಿಳಿಯಬಹುದು. ಆದರೆ, ದೆಹಲಿಯ ವಿವಿಧ ಭಾಗಗಳಿಂದ ಸಾವಿನ ಕುರಿತು ಕರೆಗಳು ಬರುತ್ತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ʻಇದುವರೆಗೆ ದೆಹಲಿಯಲ್ಲಿ ಸುಮಾರು 50 ಜನರು ಸಾವನ್ನಪ್ಪಿದ್ದಾರೆ. ನಾವು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದೇವೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಿವಿಧ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ವರದಿಗಳನ್ನು ನಿರೀಕ್ಷಿಸಲಾಗಿದೆ,ʼ ಎಂದು ಅವರು ಹೇಳಿದರು. 

ಹೆಚ್ಚು ರೋಗಿಗಳು ದಾಖಲು: ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ 60 ರೋಗಿಗಳು ಶಂಕಿತ ಶಾಖ ಆಘಾತಕ್ಕೆ ಒಳಗಾಗಿದ್ದಾರೆ. ಇವರಲ್ಲಿ 42 ಮಂದಿ ದಾಖಲಾಗಿ ದ್ದಾರೆ. ಆಸ್ಪತ್ರೆಯಲ್ಲಿ 60 ವರ್ಷದ ಮಹಿಳೆ ಮತ್ತು 50 ವರ್ಷದ ಪುರುಷ ಸೇರಿದಂತೆ ಆರು ಸಾವುಗಳು ವರದಿಯಾಗಿವೆ. ಎಲ್‌ಎನ್‌ಜೆಪಿ ಆಸ್ಪತ್ರೆ ಯಲ್ಲಿ ಮಂಗಳವಾರ ಎರಡು ಮತ್ತು ಬುಧವಾರ ಎರಡು ಸಾವುಗಳು ಸಂಭವಿಸಿವೆ. 16 ಮಂದಿ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

39 ವರ್ಷ ವಯಸ್ಸಿನ ಒಬ್ಬರು ಜೂನ್ 15 ರಂದು ಚಿಕಿತ್ಸೆಯ ಸಮಯದಲ್ಲಿ ನಿಧನರಾದರು. ಅವರು ಮೋಟಾರು ಮೆಕ್ಯಾನಿಕ್ ಆಗಿದ್ದು, ಜನಕಪುರಿಯಲ್ಲಿ ತಮ್ಮ ಅಂಗಡಿಯಲ್ಲಿ ಕೆಲಸ ಮಾಡುವಾಗ ಕುಸಿದುಬಿದ್ದರು. ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು.

ಶಾಖವು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?: ನಿರ್ಜಲೀಕರಣದಿಂದ ರೋಗಿಗಳು ಕೆಲವೊಮ್ಮೆ ಕುಸಿದು ಬೀಳುತ್ತಾರೆ. ಹೆಚ್ಚಿನ ಜ್ವರದಿಂದ ಬಳಲುತ್ತಿರುತ್ತಾರೆ. ಇದರಿಂದ ದೇಹದ ಉಷ್ಣತೆ 106 ರಿಂದ 107 ಡಿಗ್ರಿ ಫ್ಯಾರನ್‌ಹೀಟ್‌ಗೆ ತಲುಪುತ್ತದೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಪ್ರತಿದಿನ 30 ರಿಂದ 35 ಉಷ್ಣ ಅಲೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ಮುಖ್ಯಸ್ಥ ಡಾ. ಅತುಲ್ ಕಾಕರ್ ಹೇಳಿದರು.

ʻಶಾಖದಿಂದ ಸುರಕ್ಷತೆ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿಯ ಅಗತ್ಯವಿದೆ. ನೀರು ಸೇವನೆ, ಗರಿಷ್ಠ ಬಿಸಿಲು ಇರುವ ಸಮಯದಲ್ಲಿ ನೆರಳಿನಲ್ಲಿ ಆಶ್ರಯ ಪಡೆಯುವುದು ಮತ್ತು ಶಾಖ ಸಂಬಂಧಿತ ತೊಂದರೆಯ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದು ಇದರಲ್ಲಿ ಸೇರಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ಬಿಸಿಲಿನ ಹೆಚ್ಚಳದ ಪರಿಣಾಮವನ್ನು ನಿರ್ವಹಿಸಲು ಮತ್ತು ತಗ್ಗಿಸಲು ತ್ವರಿತ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು‌ ಖಚಿತಪಡಿಸಿಕೊಳ್ಳ ಲಾಗುತ್ತದೆ,ʼ ಎಂದು ಅವರು ಹೇಳಿದರು.

ಚರ್ಮ ಕ್ಷಯ ಹೆಚ್ಚಳ: ಶಾಖದ ಅಲೆಯಿಂದ ಚರ್ಮ, ಕೀಲುಗಳು ಮತ್ತು ಮೂತ್ರಪಿಂಡಗಳು ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರುವ ಕ್ಷಯ ಹೆಚ್ಚುತ್ತದೆ. 

ದೀರ್ಘಕಾಲದ ಶಾಖದ ಅಲೆಯಿಂದ ಆರರಿಂದ 10 ಚರ್ಮ ಕ್ಷಯ ಪ್ರಕರಣಗಳು ಪತ್ತೆಯಾಗಿವೆ.ಎಸ್‌ ಎಲ್‌ ಇ (ಸಿಸ್ಟಮಿಕ್ ಲೂಪಸ್ ಎರಿಥೆಮಾಟೋಸಸ್) ಅಥವಾ ಲೂಪಸ್ ನಲ್ಲಿ ರೋಗ ನಿರೋಧಕ ವ್ಯವಸ್ಥೆಯೇ ದೇಹದ ಮೇಲೆ ದಾಳಿ ನಡೆಸುತ್ತದೆ(ಆಟೋ ಇಮ್ಯೂನ್‌ ಕಾಯಿಲೆ). ಇದು ಬಹು ಅಂಗಗಳ ವೈಫಲ್ಯ ಮತ್ತು ಹಾನಿಗೆ ಕಾರಣವಾಗುತ್ತದೆ. ಮಹಿಳೆಯರ ಮೇಲೆ ಅದರಲ್ಲೂ, 15 ರಿಂದ 45 ರ ನಡುವಿನ ಮಕ್ಕಳನ್ನು ಹೆರುವ ವಯಸ್ಸಿನವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸರ್ ಗಂಗಾರಾಮ್ ಆಸ್ಪತ್ರೆಯ ಸಂಧಿವಾತ ಮತ್ತು ಕ್ಲಿನಿಕಲ್ ಇಮ್ಯುನಾಲಜಿ ವಿಭಾಗದ ಹಿರಿಯ ಸಲಹೆಗಾರ ಡಾ. ಲಲಿತ್ ದುಗ್ಗಲ್ ಹೇಳಿದ್ದಾರೆ. 

ಸುಡುವ ತಾಪಮಾನ: ಉತ್ತರ ಪ್ರದೇಶ, ದಕ್ಷಿಣ ಉತ್ತರಾಖಂಡ, ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ, ಪಂಜಾಬ್, ಒಡಿಶಾ, ಜಾರ್ಖಂಡ್, ಬಿಹಾರ ಮತ್ತು ಜಮ್ಮು ವಿಭಾಗದ ಕೆಲವು ಭಾಗಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಬುಧವಾರ ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದ ಹಲವು ಭಾಗಗಳಲ್ಲಿ 43 ರಿಂದ 45 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ಇತ್ತು ಎಂದು ಐಎಂಡಿ ತಿಳಿಸಿದೆ.

ಕಾನ್ಪುರದಲ್ಲಿ ಹೆಡ್ ಕಾನ್‌ಸ್ಟೆಬಲ್ ಒಬ್ಬರು ಶಾಖದ ಅಲೆ ಹೊಡೆತದಿಂದ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ನೀರು, ವಿದ್ಯುತ್ ಕೊರತೆ: ಬಿಸಿಲಿನ ತಾಪದಿಂದ ಜನರು ನೀರಿಗಾಗಿ ಪರದಾಡುವಂತಾಗಿದೆ. ಜಲಾಶಯಗಳು ಮತ್ತು ನದಿಗಳಲ್ಲಿ ನೀರಿನ ಸಂಗ್ರಹ ದಾಖಲೆ ಮಟ್ಟಕ್ಕೆ ಕುಸಿದಿದೆ. ನೀರಿನ ಕೊರತೆಯಿಂದ ಕೃಷಿ ಮೇಲೆ ಪರಿಣಾಮ ಆಗುತ್ತಿದೆ. ಬಿಸಿ ಗಾಳಿಯಿಂದ ನೀರಿನ ಬಿಕ್ಕಟ್ಟು ಉಲ್ಬಣಗೊಂಡಿದ್ದು, ದೆಹಲಿ ಜಲ ಸಚಿವೆ ಅತಿಶಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯಸ್ಥಿಕೆಯನ್ನು ಕೋರಿದ್ದಾರೆ. ಸಮಸ್ಯೆ ಬಗೆಹರಿಸದಿದ್ದರೆ ಜೂನ್ 21ರಿಂದ ಅನಿರ್ದಿಷ್ಟಾವಧಿ ನಿರಶನ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ. 

ವಿದ್ಯುತ್ ಗ್ರಿಡ್‌ಗಳು ಒತ್ತಡದಲ್ಲಿದ್ದು, ಶಾರ್ಟ್ ಸರ್ಕಿಟ್ ಮತ್ತು ಬೆಂಕಿಯ ಘಟನೆಗಳು ಹೆಚ್ಚಾಗುತ್ತಿವೆ. ಉತ್ತರದ ಪ್ರಾದೇಶಿಕ ಲೋಡ್ ಡೆಸ್ಪಾಚ್ ಸೆಂಟರ್ (ಎನ್‌ಆರ್‌ಎಲ್‌ ಡಿಸಿ) ಪ್ರಕಾರ, ಬುಧವಾರ ಉತ್ತರ ಪ್ರದೇಶದಲ್ಲಿ ವಿದ್ಯುತ್ ಬೇಡಿಕೆ 89.4 ಗಿಗಾ ವ್ಯಾಟ್‌ಗೆ ಏರಿಕೆಯಾಗಿದೆ. ಬೇಡಿಕೆ- ಪೂರೈಕೆ ನಡುವೆ 16.5 ಗಿಗಾವ್ಯಾಟ್‌ ಅಂತರದಿಂದ, ಟ್ರಿಪ್ಪಿಂಗ್ ಘಟನೆಗಳು ವರದಿಯಾಗಿವೆ ಎಂದು ಬುಧವಾರ ಹೇಳಿದೆ.

ಬೆಚ್ಚಗಿನ ರಾತ್ರಿಗಳು: ಅಧಿಕ ಕನಿಷ್ಠ ತಾಪಮಾನ ಅಥವಾ ಬೆಚ್ಚಗಿನ ರಾತ್ರಿಗಳು ಶಾಖದ ಪರಿಣಾಮವನ್ನು ಉಲ್ಬಣಗೊಳಿಸುತ್ತವೆ ಎಂದು ಐಎಂಡಿ ಹೇಳಿದೆ. ರಾತ್ರಿ ಅಧಿಕ ತಾಪಮಾನವನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಇದರಿಂದ ದೇಹ ತಣ್ಣಗಾಗಲು ಅವಕಾಶ ಇರುವುದಿಲ್ಲ. ನಗರಗಳಲ್ಲಿ ಅಧಿಕ ರಾತ್ರಿ ಉಷ್ಣತೆ ಸಾಮಾನ್ಯವಾಗಿದೆ. 

ಸುಡುವ ಶಾಖಕ್ಕೆ ಹವಾಮಾನ ಬದಲಾವಣೆ ಮತ್ತು ಎಲ್ ನಿನೊ ಕಾರಣವೆಂದು ತಜ್ಞರು ಹೇಳುತ್ತಾರೆ. ಜೂನ್ 12 ಮತ್ತು 18 ರ ನಡುವೆ ಮುಂಗಾರು ಮುಂದುವರಿದಿಲ್ಲ. ಈ ಪರಿಸ್ಥಿತಿ ಮುಂಗಾರಿನ ಮುನ್ನಡೆಗೆ ಅನುಕೂಲಕರವಾಗಿದೆ. ಉತ್ತರ ಭಾರತದಲ್ಲಿ ಮಳೆಗಾಗಿ ಕಾಯುವಿಕೆಯನ್ನು ವಿಸ್ತರಿಸಿದೆ.

Tags:    

Similar News