Vinesh Phogat | ಅಖಾಡದಾಚೆಗೂ ಜಯಿಸಿದ ಕುಸ್ತಿಪಟು: ಕೈತಪ್ಪಿದ ಪದಕ, 'ಕೈ'ಹಿಡಿದ ಜನತಂತ್ರ

ಹರ್ಯಾಣ ವಿಧಾನಸಭೆಯ ಜುಲಾನಾ ಕ್ಷೇತ್ರದಿಂದ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ಅವರನ್ನು 6000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

Update: 2024-10-08 13:32 GMT
6000ಕ್ಕಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಕುಸ್ತಿಪಟು ವಿನೇಶ್ ಫೋಗಟ್

ಪ್ಯಾರೀಸ್‌ ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತೆಯಾಗಿ ಕಣ್ಣೀರಿಟ್ಟಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಮಂಗಳವಾರ ಎಲ್ಲ ನೋವು ಮರೆತು ಸಂಭ್ರಮಿಸುವ ದಿನ. ತೂಕದ ವ್ಯತ್ಯಾಸದಿಂದಾಗಿ ಒಲಿಂಪಿಕ್ಸ್‌ ಚಿನ್ನದ ಪದಕ ಕೈತಪ್ಪಿದರೂ, ದೇಶದ ಜನತಂತ್ರ ವ್ಯವಸ್ಥೆ ಅವರ ಕೈಹಿಡಿದಿದೆ. 

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದ ವಿನೇಶ್‌ ಫೋಗಟ್‌ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್‌ ಕುಮಾರ್‌ ವಿರುದ್ಧ ಜಯ ಗಳಿಸಿ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ. ಸುಮಾರು 6000 ಮತಗಳ ಅಂತರದಲ್ಲಿ ಅವರು ಗೆಲುವಿನ ನಗೆ ಬೀರಿದ್ದಾರೆ.

ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದ ಫೋಗಟ್

ಜುಲಾನಾ ಕ್ಷೇತ್ರದ ಫಲಿತಾಂಶ ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಹೊರಬಿದ್ದಿದ್ದು, ಕುಸ್ತಿಪಟು ವಿನೇಶ್ ಫೋಗಟ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಯೋಗೇಶ್ ಕುಮಾರ್ ಅವರನ್ನು 6000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

ಮತ್ತೊಂದೆಡೆ, ಮತ್ತೊಬ್ಬ ಕುಸ್ತಿಪಟು ಕವಿತಾ ರಾಣಿ ಕೂಡ ಇದೇ ಕ್ಷೇತ್ರದಿಂದ ವಿನೇಶ್ ವಿರುದ್ಧ ಆಮ್‌ ಆದ್ಮಿ ಪಾರ್ಟಿಯಿಂದ ಸ್ಪರ್ಧಿಸಿದ್ದರು. ಆದರೆ ಅವರು ಕೇವಲ 1200 ಮತಗಳನ್ನು ಪಡೆದಿದ್ದಾರೆ. ವಿನೇಶ್ ಫೋಗಟ್ ಅವರು 64,491 ಮತಗಳನ್ನು ಪಡೆದರೆ, ಯೋಗೇಶ್ ಕುಮಾರ್ ಅವರು 58,728 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ. ಐಎನ್‌ಎಲ್‌ಡಿ ಅಭ್ಯರ್ಥಿ ಸುರೇಂದರ್ ಲಾಥರ್ ಅವರು 10,123 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಆಪ್ ಅಭ್ಯರ್ಥಿ ಕವಿತಾ ರಾಣಿ ಪರ ಕೇವಲ 1266 ಮತಗಳು ಪಡೆದಿದ್ದಾರೆ. 

ಆರಂಭಿಕ ಹಿನ್ನಡೆ ಬಳಿಕ ಪುಟಿದೆದ್ದ ಕುಸ್ತಿಪಟು

ಆರಂಭಿಕ ಸುತ್ತುಗಳ ಮತ ಎಣಿಕೆಯಲ್ಲಿ ವಿನೇಶ್ ಮುನ್ನಡೆ ಪಡೆದಿದ್ದರು. ಆದರೆ ಐದನೇ ಸುತ್ತಿನ ಮತ ಎಣಿಕೆ ಬಳಿಕ ಅವರು ಒಂದು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದರು. ಸತತ ಹಿನ್ನಡೆ ನಡುವೆಯೇ, ಜಿಂದ್‌ನಲ್ಲಿನ ಮತ ಎಣಿಕಾ ಕೇಂದ್ರದಿಂದ ವಿನೇಶ್ ಫೋಗಟ್ ನಿರ್ಗಮಿಸುವುದು ಕಂಡುಬಂದಿತ್ತು. ನಾಲ್ಕನೇ ಸುತ್ತಿನ ಮತ ಎಣಿಕೆ ವೇಳೆ ಅವರು ಸುಮಾರು 3 ಸಾವಿರ ಮತಗಳ ಅಂತರದಿಂದ ಹಿನ್ನಡೆ ಹೊಂದಿದ್ದರು.

ಏಳನೇ ಸುತ್ತಿನ ಬಳಿಕ ವಿನೇಶ್ ಫೋಗಟ್ ಅವರು 38 ಮತಗಳ ಅಲ್ಪ ಮುನ್ನಡೆ ಪಡೆದಿದ್ದರು. ಎಂಟನೇ ಸುತ್ತಿನ ನಂತರ ಅವರ ಮತಗಳ ಮುನ್ನಡೆ ಅಂತರ 2,100 ಮತಗಳನ್ನು ದಾಟಿತು. 9ನೇ ಸುತ್ತಿನ ಮತ ಎಣಿಕೆಯ ನಂತರ ಅವರ ಮುನ್ನಡೆ ಮತ್ತಷ್ಟು ಹಿಗ್ಗಿತು. ಆಗ ಅವರು 4130 ಮತಗಳಿಂದ ಮುನ್ನಡೆ ಪಡೆದಿದ್ದರು. 11ನೇ ಸುತ್ತಿನ ಮತ ಎಣಿಕೆಯಲ್ಲಿ ವಿನೇಶ್ 6050 ಮತಗಳಿಂದ ಮುನ್ನಡೆ ಸಾಧಿಸಿದ್ದರು. 14ನೇ ಸುತ್ತಿನ ಎಣಿಕೆ ಬಳಿಕ ವಿನೇಶ್ 5,909 ಮತಗಳ ಅಂತರದ ಮುನ್ನಡೆ ಪಡೆದಿದ್ದರು.

ಆಗಸ್ಟ್ 17 ರಂದು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ನಿರಾಶೆಗೊಂಡು ಭಾರತಕ್ಕೆ ಬರಿಗೈಲಿ ಹಿಂದಿರುಗಿದಾಗ ದೆಹಲಿಯಿಂದ ಹರಿಯಾಣಕ್ಕೆ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರಲಾಗಿತ್ತು. ಯಾವುದೇ ಒಲಿಂಪಿಕ್ ಪದಕ ವಿಜೇತರನ್ನು ಸ್ವಾಗತಿಸುವುದಕ್ಕಿಂತ ಹೆಚ್ಚಿನ ಸಂಭ್ರಮಾಚರಣೆಯೊಂದಿಗೆ ವಿನೇಶ್ ಅವರನ್ನು ಸ್ವಾಗತಿಸಲಾಗಿತ್ತು. ಬಳಿಕ ಅವರು ತಮ್ಮ ಕುಸ್ತಿಗೆ ನಿವೃತ್ತಿ ಘೋಷಿಸಿ ರಾಜಕೀಯ ಕ್ಷೇತ್ರಕ್ಕೆ ಬರುವುದಾಗಿ ಘೋಷಿಸಿದ್ದರು. ಕುಸ್ತಿಯಿಂದ ನಿವೃತ್ತಿ ಪಡೆದು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದರು. ಬಳಿಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಆಹ್ವಾನದ ಮೇರೆಗೆ ಅವರು ಕಾಂಗ್ರೆಸ್‌ ಪಕ್ಷವನ್ನು ಸೇರಿ, ಚುನಾವಣಾ ಕಣಕ್ಕಿಳಿದಿದ್ದರು.

ಇದು ಪ್ರತಿಯೊಬ್ಬ ಮಹಿಳೆಯ ಹೋರಾಟ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ವಿನೇಶ್, "ಇದು ಜನರ ಹೋರಾಟವಾಗಿತ್ತು. ಅವರು ಗೆದ್ದಿದ್ದಾರೆ. ನಾನು ಕೇವಲ ಮುಖವಾಗಿದ್ದೆ. ನನಗೆ ಸಿಕ್ಕಿರುವ ಪ್ರೀತಿ ಮತ್ತು ಗೌರವಕ್ಕೆ ನಾನು ಆಭಾರಿಯಾಗಿದ್ದೇನೆ" ಎಂದಿದ್ದಾರೆ. "ಇದು ಪ್ರತಿಯೊಬ್ಬ ಮಹಿಳೆಯ ಹೋರಾಟವಾಗಿತ್ತು. ಇದು ಹೋರಾಟ ಹಾಗೂ ಸತ್ಯದ ಗೆಲುವು. ಈ ದೇಶದ ಜನರ ಪ್ರೀತಿ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ನಾನು ರಾಜಕೀಯದಲ್ಲೇ ಮುಂದುವರಿಯುವೆ" ಎಂದಿದ್ದಾರೆ. 

ರಾಜಕೀಯಕ್ಕೆ ಪ್ರೇರಣೆ ನೀಡಿದ ಕೈತಪ್ಪಿದ ಪದಕ

ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ಚಿನ್ನದ ಪದಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಕಂಚು, ಏಷ್ಯನ್ ಗೇಮ್ಸ್‌ನಲ್ಲಿ ಎರಡು ಪದಕ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 8 ಪದಕಗಳನ್ನು ಗೆದ್ದಿರುವ ವಿನೇಶ್ ಫೋಗಟ್ ಅವರಿಗೆ ಒಲಿಂಪಿಕ್ಸ್‌ನಲ್ಲಿ ಪದಕ ತರಲು ಸಾಧ್ಯವಾಗಲಿಲ್ಲ.

ಸತತ ಮೂರು ಬಾರಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರೂ ಒಮ್ಮೆಯೂ ಪದಕ ಲಭಿಸಿರಲಿಲ್ಲ. ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಅವರು ಒಂದೇ ದಿನದಲ್ಲಿ ಮೂರು ಪಂದ್ಯಗಳನ್ನು ಯಶಸ್ವಿಯಾಗಿ ಗೆಲ್ಲುವ ಮೂಲಕ ಫೈನಲ್‌ಗೆ ತಲುಪಿದರು. ಪದಕ ಗೆಲ್ಲುವ ಭರವಸೆ ಹೊಂದಿದ್ದರು. ಆದರೆ ಫೈನಲ್‌ ಪಂದ್ಯದ ದಿನ ಬೆಳಿಗ್ಗೆ ಅವರು ಅಧಿಕ ತೂಕ ಹೊಂದಿದ್ದಾರೆ ಎಂಬ ಕಾರಣದಿಂದಾಗಿ ಅವರನ್ನು ಪಂದ್ಯದಿಂದ ಅನರ್ಹಗೊಳಿಸಲಾಯಿತು. ಹಾಗಾಗಿ ಅವರು ಪದಕವಂಚಿತರಾಗಿ ಮರಳಿದ್ದರು. 

ಅಖಾಡದಾಚೆಗೂ ದಿಟ್ಟ ಹೋರಾಟಗಾರ್ತಿ

ಒಲಿಂಪಿಕ್ಸ್‌ಗೆ ತಯಾರಿ ನಡೆಸುವ ಹಲವು ತಿಂಗಳುಗಳ ಹಿಂದೆ ಅವರು ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಗಳ ವಿರುದ್ಧ ಮಹಿಳಾ ಆಟಗಾರ್ತಿಯರ ಪರ ಆಂದೋಲನ ಪ್ರಾರಂಭಿಸಿದ್ದರು.

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಮತ್ತು ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಅವರು ನಡೆಸಿದ ಹೋರಾಟ, ಇಡೀ ದೇಶಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು. ಇದಲ್ಲದೇ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧವೂ ಹಲವು ಆರೋಪಗಳು ಕೇಳಿಬಂದಿದ್ದವು. ವಿನೇಶ್ ಫೋಗಟ್ ಮತ್ತು ಅನೇಕ ಕುಸ್ತಿಪಟುಗಳು ದೀರ್ಘಕಾಲದವರೆಗೆ ಕೋರ್ಟ್‌ಗಳನ್ನು ಸುತ್ತಬೇಕಾಯಿತು. ಬ್ರಿಜ್ ಭೂಷಣ್ ರಾಜೀನಾಮೆ ನೀಡಿದರು. ಮಹಿಳಾ ಕುಸ್ತಿಪಟುಗಳ ಸುರಕ್ಷತೆ ಮತ್ತು ಖಾಸಗಿತನದ ರಕ್ಷಣೆಗಾಗಿ ದನಿ ಎತ್ತಿದ ದಿಟ್ಟ ಆಟಗಾರ್ತಿ ವಿನೇಶ್‌ ಅವರು ತಿಂಗಳುಗಟ್ಟಲೆ ನಿರಂತರ ಧರಣಿ ನಡೆಸಿದ್ದರು. ಆ ವೇಳೆ ದೆಹಲಿ ಪೊಲೀಸರು ಅವರನ್ನು ಬೀದಿಗೆ ಎಳೆದೊಯ್ದ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದರು.

Tags:    

Similar News