ಗುಜರಾತಿನಲ್ಲಿ ಮಹಾ ಮಳೆ: 8 ಮಂದಿ ಸಾವು, 800ಕ್ಕೂ ಹೆಚ್ಚು ಮಂದಿ ಸ್ಥಳಾಂತರ

Update: 2024-07-25 06:49 GMT
ಗುಜರಾತಿನ ಸೌರಾಷ್ಟ್ರ ಪ್ರದೇಶದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ

ಅಹಮದಾಬಾದ್, ಜು.24- ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು 800 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. 

ನದಿಗಳು ಮತ್ತು ಅಣೆಕಟ್ಟುಗಳು ಉಕ್ಕಿ ಹರಿಯುತ್ತಿರುವ ಕಾರಣ, ಗುಜರಾತಿನ ಹೆಚ್ಚಿನ ಭಾಗಗಳಲ್ಲಿ ಹಲವು ಗ್ರಾಮಗಳು ಮತ್ತು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಬೆಳಗ್ಗೆಯಿಂದ ದಕ್ಷಿಣ ಭಾಗ ಮತ್ತು ವಡೋದರಾ, ಸೂರತ್, ಭರೂಚ್ ಮತ್ತು ಆನಂದ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವು ಸ್ಥಳಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲು ಸೂಚಿಸಲಾಗಿದೆ ಎಂದು ಹೇಳಿದರು.

ಕೆಲವೆಡೆ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ʻಕಳೆದ 24 ಗಂಟೆಗಳಲ್ಲಿ ಗುಜರಾತಿನ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ಎಂಟು ಜನರು ಸಾವನ್ನಪ್ಪಿದ್ದಾರೆ. 826 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್)ಯ 20 ಮತ್ತು ಎನ್‌ಡಿಆರ್‌ಎಫ್‌ನ 11 ತಂಡಗಳನ್ನು ನಿಯೋಜಿಸಿದ್ದೇವೆ,ʼ ಎಂದು ರಾಜ್ಯ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಹೇಳಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹಲವು ಜಿಲ್ಲೆಗಳಲ್ಲಿ 'ರೆಡ್ ಅಲರ್ಟ್' ಹೊರಡಿಸಿರುರುವುದರಿಂದ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ರಾಜ್ಯದ ಎಲ್ಲ 206 ಪ್ರಮುಖ ಅಣೆಕಟ್ಟುಗಳಿಗೆ ನೀರು ಹರಿಯುತ್ತಿದೆ ಮತ್ತು ಗುಜರಾತ್‌ನ ಅತಿ ದೊಡ್ಡ ಜಲಾಶಯವಾದ ಸರ್ದಾರ್ ಸರೋವರ ಅಣೆಕಟ್ಟು ಶೇ. 54 ರಷ್ಟು ತುಂಬಿದೆ ಎಂದು ಪಾಂಡೆ ಹೇಳಿದರು.

ಆನಂದ್ ಜಿಲ್ಲೆಯ ಬೋರ್ಸಾದ್ ತಾಲೂಕಿನಲ್ಲಿ 12 ಗಂಟೆಗಳಲ್ಲಿ 354 ಮಿಮೀ ಮಳೆಯಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಮಾಹಿತಿ ನೀಡಿದೆ. ಆನಂದ್ ಕಲೆಕ್ಟರ್ ಪ್ರವೀಣ್ ಚೌಧರಿ, ಎನ್ಡಿಆರ್‌ಎಫ್‌ ತಂಡವನ್ನು ಸೇವೆಗೆ ಇಳಿಸಲಾಗಿದೆ ಮತ್ತು ಜನರನ್ನು ರಕ್ಷಿಸಲು ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.

ಮಂಗಳವಾರ ಸೂರತ್‌ಗೆ ಅಪ್ಪಳಿಸಿದ ಭಾರೀ ಮಳೆಯು ನಗರವನ್ನು ಜಲಾವೃತಗೊಳಿಸಿತು. ನಿರಂತರ ಮಳೆಯಿಂದ ಭರೂಚ್ ಮತ್ತು ನವಸಾರಿ ಆಡಳಿತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ. ಸೂರತ್ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 132 ರಸ್ತೆಗಳನ್ನು ಬಂದ್ ಮಾಡಲಾಗಿದೆ. 

ವಡೋದರಾ ವಿಭಾಗದ ರೈಲ್ವೆ ಸೇತುವೆಯಡಿ ನೀರಿನ ಮಟ್ಟ ಏರಿಕೆಯಿಂದ 11 ದೂರ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳನ್ನು ತಡೆಹಿಡಿಯಲಾಗಿದೆ ಮತ್ತು ನಾಲ್ಕು ಸ್ಥಳೀಯ ಪ್ರಯಾಣಿಕ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 

Tags:    

Similar News