ಗುಜರಾತ್ ಮಹಾ ಮಳೆ | 26 ಸಾವು, 17,800 ಮಂದಿ ಸ್ಥಳಾಂತರ
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ ಮಾತನಾಡಿದರು. ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ರಾಜ್ಯಕ್ಕೆ ಕೇಂದ್ರದ ಬೆಂಬಲದ ಭರವಸೆ ನೀಡಿದರು.;
ಗುಜರಾತಿನಲ್ಲಿ ಸತತ ನಾಲ್ಕನೇ ದಿನವೂ ಭಾರಿ ಮಳೆ ಆಗಿದ್ದು, ಕಳೆದ ಮೂರು ದಿನಗಳಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಪ್ರವಾಹ ಪೀಡಿತ ಪ್ರದೇಶಗಳಿಂದ 17,800 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಗುರುವಾರ (ಆಗಸ್ಟ್ 29) ಸೌರಾಷ್ಟ್ರ ಮತ್ತು ಕಚ್ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಶುಕ್ರವಾರದವರೆಗೆ (ಆಗಸ್ಟ್ 30) ಅಧಿಕ ಮಳೆಯ ಸೂಚನೆ ನೀಡಿದೆ. ಸೌರಾಷ್ಟ್ರ ಮತ್ತು ಕಚ್ ಪ್ರದೇಶದಲ್ಲಿ ತೀವ್ರ ಕುಸಿತವು ಈಶಾನ್ಯ ಅರೇಬಿಯನ್ ಸಮುದ್ರದ ಮೇಲೆ ಶುಕ್ರವಾರ (ಆಗಸ್ಟ್ 30) ಅಧಿಕಗೊಳ್ಳಬಹುದು ಎಂದು ಹೇಳಿದೆ.
ʻಸೌರಾಷ್ಟ್ರ ಮತ್ತು ಕಚ್ ಮೇಲಿನ ತೀವ್ರ ಕುಸಿತ ಕಳೆದ 6 ಗಂಟೆಗಳಲ್ಲಿ ಪ್ರಾಯೋಗಿಕವಾಗಿ ಸ್ಥಿರವಾಗಿತ್ತು ಮತ್ತು ಭುಜ್ ನ ಸುಮಾರು 50 ಕಿಮೀ ಉತ್ತರ-ವಾಯವ್ಯ ಭಾಗದಿಂದ ಆಗಸ್ಟ್ 30 ರ ಬೆಳಗ್ಗೆ ಈಶಾನ್ಯ ಅರೇಬಿಯನ್ ಸಮುದ್ರದೆಡೆಗೆ ಚಲಿಸಲಿದೆ, ʼಎಂದು ಹೇಳಿದೆ.
ಸಾವಿನ ಸಂಖ್ಯೆ 26: ಭಾನುವಾರ ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಸೇತುವೆ ದಾಟುವಾಗ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ 7 ಮಂದಿ ನಾಪತ್ತೆಯಾಗಿದ್ದರು. ಏಳು ಮೃತದೇಹಗಳನ್ನು ರಕ್ಷಣಾ ತಂಡಗಳು ಪತ್ತೆ ಹಚ್ಚಿವೆ ಎಂದು ಎಸ್‌ಪಿ ರಾಹುಲ್ ತ್ರಿಪಾಠಿ ತಿಳಿಸಿದ್ದಾರೆ. ಮೂರು ದೇಹಗಳು ಮಂಗಳವಾರ ಮತ್ತು ನಾಲ್ಕು ಬುಧವಾರ ಪತ್ತೆಯಾಗಿವೆ ಎಂದು ಮೊರ್ಬಿ ಅಗ್ನಿಶಾಮಕ ಅಧಿಕಾರಿ ದೇವೇಂದ್ರಸಿನ್ಹ್ ಜಡೇಜಾ ತಿಳಿಸಿದ್ದಾರೆ; ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಗೋಡೆಗಳ ಕುಸಿತ ಮತ್ತು ಮುಳುಗುವಿಕೆಯಂತಹ ಮಳೆ ಸಂಬಂಧಿತ ಘಟನೆಗಳಲ್ಲಿ ಸೋಮವಾರ (ಆಗಸ್ಟ್ 26) ಏಳು, ಮಂಗಳವಾರ (ಆಗಸ್ಟ್ 27) ಒಂಬತ್ತು ಹಾಗೂ ಬುಧವಾರ (ಆಗಸ್ಟ್ 28) ರಾಜ್‌ಕೋಟ್‌ನಲ್ಲಿ ಕಾರು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ಒಂದೇ ಕುಟುಂಬದ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಎಂಗೆ ಪ್ರಧಾನಿ ಕರೆ: ವಡೋದರಾದಲ್ಲಿ ಮಳೆ ಬಿಡುವು ತೆಗೆದುಕೊಂಡಿದ್ದರೂ, ನಗರದ ಮೂಲಕ ಹರಿಯುವ ವಿಶ್ವಾಮಿತ್ರಿ ನದಿಯ ತಗ್ಗು ಪ್ರದೇಶಗಳನ್ನು ಪ್ರವೇಶಿಸಿತು. ವಸತಿ ಪ್ರದೇಶಗಳಿಗೆ ಪ್ರವೇಶಿಸಿ, ಕಟ್ಟಡಗಳು, ರಸ್ತೆಗಳು ಮತ್ತು ವಾಹನಗಳನ್ನು ಮುಳುಗಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕರೆ ಮಾಡಿ, ಮಾತನಾಡಿದರು. ನೈಸರ್ಗಿಕ ವಿಕೋಪವನ್ನು ನಿಭಾಯಿಸಲು ರಾಜ್ಯಕ್ಕೆ ಕೇಂದ್ರದ ಬೆಂಬಲದ ಭರವಸೆ ನೀಡಿದರು.
ಸಿಎಂ ಪಟೇಲ್, ʻಪ್ರಧಾನಿ ಅವರು ಗುಜರಾತಿನಲ್ಲಿ ಭಾರೀ ಮಳೆಯಿಂದ ಸೃಷ್ಟಿಯಾಗಿರುವ ಪರಿಸ್ಥಿತಿ ಕುರಿತು ನನ್ನೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ ಮತ್ತು ಸಹಾಯ ನೀಡುವುದಾಗಿ ಹೇಳಿದರುʼ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಸರಾಸರಿ ಶೇ.105 ಮಳೆ: ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ರಾಜ್ಯದಲ್ಲಿ ವಾರ್ಷಿಕ ಸರಾಸರಿ ಮಳೆಯ ಶೇ.105 ರಷ್ಟು ಮಳೆ ಆಗಿದೆ. ಸೌರಾಷ್ಟ್ರ ಪ್ರದೇಶದ ಜಿಲ್ಲೆಗಳಾದ ದ್ವಾರಕಾ, ಜಾಮ್‌ನಗರ, ರಾಜ್‌ಕೋಟ್ ಮತ್ತು ಪೋರಬಂದರ್ ನಲ್ಲಿ ಬುಧವಾರ ಸಂಜೆ 6ರೊಳಗಿನ 12 ಗಂಟೆಗಳಲ್ಲಿ 50 ಮಿಮೀ ಇಂದ 200 ಮಿಮೀ ಮಳೆ ಆಗಿದೆ. ದ್ವಾರಕಾ ಜಿಲ್ಲೆಯ ಭನ್ವಾಡ್ ತಾಲೂಕಿನಲ್ಲಿ ಅತಿ ಹೆಚ್ಚು,185 ಮಿಮೀ ಮಳೆಯಾಗಿದೆ.
ದ್ವಾರಕಾ ಜಿಲ್ಲೆಯ ಖಂಭಾಲಿಯಾ ತಾಲೂಕಿನಲ್ಲಿ 454 ಮಿಮೀ, ಜಾಮ್‌ನಗರ ನಗರ 387 ಮಿಮೀ, ಜಾಮ್‌ನಗರದ ಜಾಮ್‌ಜೋಧ್‌ಪುರ ತಾಲೂಕಿನಲ್ಲಿ 329 ಮಿಮೀ ಮಳೆ ಆಗಿದೆ. ರಾಜ್ಯದ 251 ತಾಲೂಕುಗಳ ಪೈಕಿ 13 ರಲ್ಲಿ 200 ಮಿಮೀ ಗಿಂತ ಹೆಚ್ಚು ಹಾಗೂ 39 ತಾಲೂಕುಗಳಲ್ಲಿ 100 ಮಿಮೀ.ಗಿಂತ ಹೆಚ್ಚಿನ ಮಳೆಯಾಗಿದೆ.
ತಗ್ಗು ಪ್ರದೇಶಗಳಿಂದ ಸ್ಥಳಾಂತರ: ವಡೋದರಾ ನಗರದಲ್ಲಿ ಮನೆಗಳು ಮತ್ತು ಮೇಲ್ಛಾವಣಿಯಲ್ಲಿ ಸಿಲುಕಿರುವ ಜನರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಎಸ್‌ಡಿಆರ್‌ಎಫ್ ಮತ್ತು ಸೇನೆಯ ತಂಡಗಳು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಡೋದರದಲ್ಲಿ ಇದುವರೆಗೆ 5,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಮತ್ತು 1,200 ಜನರನ್ನು ರಕ್ಷಿಸಲಾಗಿದೆ ಎಂದು ಸಚಿವ ರುಶಿಕೇಶ್ ಪಟೇಲ್ ತಿಳಿಸಿದ್ದಾರೆ. ಬುಧವಾರ ಸೇನೆಯ ಮೂರು ಹೆಚ್ಚುವರಿ ತಂಡ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ನ ತಲಾ ಒಂದು ತಂಡವನ್ನು ಹೆಚ್ಚುವರಿಅಯಗಿ ನಿಯೋಜಿಸಲಾಗಿದೆ.
ನಗರದ ಶುಚೀಕರಣ: ಪ್ರವಾಹದ ನೀರು ಇಳಿಮುಖವಾದ ನಂತರ ವಡೋದರಾ ನಗರವನ್ನು ಶುಚಿಗೊಳಿಸಲು ಮತ್ತು ಸೋಂಕುನಿವಾರಕ ಗಳನ್ನು ಸಿಂಪಡಿಸಲು ಮುಖ್ಯಮಂತ್ರಿ ಪಟೇಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಡೋದರದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೆರವಾಗಲು ಎನ್‌ಡಿಆರ್‌ಎಫ್‌ನ ಐದು ಹೆಚ್ಚುವರಿ ತಂಡ ಮತ್ತು ನಾಲ್ಕು ಸೇನಾ ತಂಡವನ್ನು ನಿಯೋಜಿಸಲು ಆದೇಶಿಸಿದರು. ಅಹಮದಾಬಾದ್ ಮತ್ತು ಸೂರತ್‌ನಿಂದ ರಕ್ಷಣಾ ದೋಣಿಗಳನ್ನು ಕಳುಹಿಸಲು ಸೂಚಿಸಿದರು.
ಅಣೆಕಟ್ಟು, ಜಲಾಶಯ ಭರ್ತಿ: ರಾಜ್ಯದ 140 ಜಲಾಶಯಗಳು ಮತ್ತು ಅಣೆಕಟ್ಟುಗಳು ತುಂಬಿವೆ ಮತ್ತು 24 ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ರಸ್ತೆ ಮತ್ತು ರೈಲು ಮಾರ್ಗಗಳು ಜಲಾವೃತಗೊಂಡಿದ್ದರಿಂದ, ವಾಹನ ಮತ್ತು ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
206 ಅಣೆಕಟ್ಟುಗಳ ಪೈಕಿ 122 ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗಿದೆ. 48 ರೈಲುಗಳನ್ನು ರದ್ದುಗೊಳಿಸಲಾಗಿದೆ, 14ನ್ನು ಭಾಗಶಃ ರದ್ದುಗೊಳಿಸಲಾಗಿದೆ ಮತ್ತು 23 ರೈಲುಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಪಶ್ಚಿಮ ರೈಲ್ವೆಯ ಅಹಮದಾಬಾದ್ ವಿಭಾಗ ತಿಳಿಸಿದೆ.