ಜಿಎಸ್‌ಟಿ ಸರಳೀಕರಣದಿಂದ ಕರ್ನಾಟಕಕ್ಕೆ 15,000 ಕೋಟಿ ರೂ. ನಷ್ಟದ ಆತಂಕ; ಕೃಷ್ಣ ಬೈರೇಗೌಡ
ಜಿಎಸ್‌ಟಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಿರಗೊಳ್ಳುವವರೆಗೂ ರಾಜ್ಯಗಳಿಗೆ ನಷ್ಟ ಪರಿಹಾರ ನೀಡುವ ವ್ಯವಸ್ಥೆ ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.;
ಕೃಷ್ಣ ಬೈರೇಗೌಡ
ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್ ಪ್ರಸ್ತಾಪಿಸಿರುವ ತೆರಿಗೆ ಸರಳೀಕರಣ ವ್ಯವಸ್ಥೆಯಿಂದ ಕರ್ನಾಟಕಕ್ಕೆ ಅಂದಾಜು 15,000 ಕೋಟಿ ರೂಪಾಯಿಗಳಷ್ಟು ಆದಾಯ ನಷ್ಟವಾಗುವ ಸಾಧ್ಯತೆಯಿದೆ ಎಂದು ರಾಜ್ಯ ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈ ಕ್ರಮವು ರಾಜ್ಯಗಳ ಆರ್ಥಿಕ ಸ್ವಾಯತ್ತತೆಗೆ ದೊಡ್ಡ ಹೊಡೆತ ನೀಡಲಿದೆ ಎಂದು ಕಂದಾಯ ಸಚಿವರ ಕೃಷ್ಣ ಭೈರೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಜಿಎಸ್‌ಟಿ ವ್ಯವಸ್ಥೆಯು ಸಂಪೂರ್ಣವಾಗಿ ಸ್ಥಿರಗೊಳ್ಳುವವರೆಗೂ ರಾಜ್ಯಗಳಿಗೆ ನಷ್ಟ ಪರಿಹಾರ ನೀಡುವ ವ್ಯವಸ್ಥೆ ಮುಂದುವರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಬಲವಾಗಿ ಒತ್ತಾಯಿಸಿದ್ದಾರೆ.
ಸರಳೀಕರಣಕ್ಕೆ ಸ್ವಾಗತ, ಆದರೆ ಷರತ್ತುಗಳು ಅನ್ವಯ
"ಜಿಎಸ್‌ಟಿ ಕೌನ್ಸಿಲ್ ಮುಂದಿಟ್ಟಿರುವ ತೆರಿಗೆ ಸರಳೀಕರಣದ ಪ್ರಸ್ತಾಪವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ಸುಧಾರಣೆಯು ರಾಜ್ಯಗಳ ತೆರಿಗೆ ಆದಾಯವನ್ನು ರಕ್ಷಿಸುವಂತಿರಬೇಕು. ಇದರ ಸಂಪೂರ್ಣ ಲಾಭ ದೇಶದ ಜನಸಾಮಾನ್ಯರಿಗೆ ಸಿಗಬೇಕೇ ಹೊರತು, ಕೆಲವೇ ಕೆಲವು ದೊಡ್ಡ ಕಂಪನಿಗಳಿಗೆ ಮಾತ್ರ ಲಾಭವಾಗಬಾರದು" ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.
ನಷ್ಟವನ್ನು ಸರಿದೂಗಿಸಲು ಕೇಂದ್ರಕ್ಕೆ ಸಲಹೆ
ತೆರಿಗೆ ಸರಳೀಕರಣದಿಂದ ರಾಜ್ಯಗಳಿಗೆ ಆಗಲಿರುವ ಭಾರಿ ನಷ್ಟವನ್ನು ತುಂಬಿಕೊಡಲು ಕೇಂದ್ರ ಸರ್ಕಾರವೇ ಜವಾಬ್ದಾರಿ ಹೊರಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕಾಗಿ ಈ ಕೆಳಗಿನ ಪರಿಹಾರ ಮಾರ್ಗಗಳನ್ನು ಸೂಚಿಸಿದ್ದಾರೆ. ಕೇಂದ್ರದಿಂದ ಸಾಲ: ರಾಜ್ಯಗಳಿಗೆ ಉಂಟಾಗುವ ಆದಾಯ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ಸಾಲ ಪಡೆಯಬೇಕು. ಸಾಲವನ್ನು ಮರುಪಾವತಿಸಲು, ಈಗಿರುವ 5 ವರ್ಷಗಳ ಅವಧಿಯ ನಂತರವೂ ಪರಿಹಾರ ಸೆಸ್ (compensation cess) ಸಂಗ್ರಹವನ್ನು ಮುಂದುವರಿಸಬೇಕು. 2024-25ನೇ ಹಣಕಾಸು ವರ್ಷದಿಂದಲೇ ರಾಜ್ಯಗಳಿಗೆ ವಾರ್ಷಿಕ ಶೇ 14ರ ದರದಲ್ಲಿ ನಷ್ಟ ಪರಿಹಾರವನ್ನು ವಿತರಿಸಲು ಆರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.
ಜಿಎಸ್‌ಟಿ ಸುಧಾರಣೆಗಳ ಹೆಸರಿನಲ್ಲಿ ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೇರುವುದನ್ನು ಕರ್ನಾಟಕ ಸರ್ಕಾರ ವಿರೋಧಿಸಿದೆ. ರಾಜ್ಯಗಳ ಹಿತಾಸಕ್ತಿಯನ್ನು ಕಾಪಾಡಿಕೊಂಡು, ಜನಸಾಮಾನ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ಮಾತ್ರ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಿದೆ.