ಅಮೆರಿಕದಲ್ಲಿ ಗ್ರೀನ್‌ಕಾರ್ಡ್ ಪರಿಶೀಲನೆ ಕಠಿಣ; ಶ್ವೇತಭವನದ ಬಳಿ ದಾಳಿ ಹಿನ್ನೆಲೆ ಬಿಗಿ ಕ್ರಮ
ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರ ಮೇಲೆ ಟ್ರಂಪ್ ಆಡಳಿತ ಕೈಗೊಂಡಿರುವ ಕಠಿಣ ಕ್ರಮಗಳು ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ಗ್ರೀನ್‌ಕಾರ್ಡ್
ಅಮೆರಿಕದ ಶ್ವೇತಭವನ ಬಳಿ ಅಫ್ಘಾನ್ ಮೂಲದ ವ್ಯಕ್ತಿಯೊಬ್ಬರು ಇಬ್ಬರು ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ ಬಳಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ʼಗ್ರಿನ್ ಕಾರ್ಡ್ʼ ಬಳಕೆ ನಿಯಮಗಳನ್ನು ಕಠಿಣಗೊಳಿಸಲಿದೆ. ಅಮೆರಿಕಾದಲ್ಲಿ ನೆಲೆಸಿರುವ ಎಲ್ಲಾ ದೇಶಗಳ ಗ್ರೀನ್ ಕಾರ್ಡ್ ಬಳಕೆದಾರರನ್ನು "ಕಠಿಣ ಮರುಪರಿಶೀಲನೆ"ಗೆ ಒಳಪಡಿಸಲು ನಿರ್ಧರಿಸಿದ್ದು, ಇದು ಭಾರತೀಯರ ಆತಂಕಕ್ಕೆ ಕಾರಣವಾಗಿದೆ.
ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ (USCIS) ನಿರ್ದೇಶಕ ಜೋಸೆಫ್ ಎಡ್ಲೋ ಅವರು ಈ ಕುರಿತಂತೆ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರತಿಯೊಬ್ಬ ಗ್ರೀನ್ ಕಾರ್ಡ್ ಹೊಂದಿರುವವರನ್ನು ಕಟ್ಟುನಿಟ್ಟಾಗಿ ಮರುಪರಿಶೀಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
"ನಮಗೆ ಅಮೆರಿಕಾದ ಜನರ ಸುರಕ್ಷತೆ ಅತ್ಯಂತ ಮುಖ್ಯ. ಈ ಹಿಂದಿನ ಆಡಳಿತದ ನಿರ್ಲಕ್ಷ್ಯ ಪೂರ್ಣ ಪುನರ್ವಸತಿ ನೀತಿಯಿಂದಾಗಿ ಅಮೆರಿಕನ್ನರು ಬೆಲೆ ತೆರುತ್ತಿದ್ದಾರೆ. ದೇಶದ ಭದ್ರತೆ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತೀಯರ ಮೇಲೆ ಪರಿಣಾಮ ಬೀರುವುದೇ?
ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರ ಮೇಲೆ ಟ್ರಂಪ್ ಆಡಳಿತ ಕೈಗೊಂಡಿರುವ ಕಠಿಣ ಕ್ರಮಗಳು ಯಾವುದೇ ನೇರ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ಅಮೆರಿಕದಲ್ಲಿ ಪಟ್ಟಿ ಮಾಡಿರುವ 19 ಅತಿ ಅಪಾಯಕಾರಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿಲ್ಲ. ಆ ಪಟ್ಟಿಯಲ್ಲಿ ಆಫ್ಘಾನಿಸ್ತಾನ, ಮ್ಯಾನ್ಮಾರ್, ಬುರುಂಡಿ, ಚಾದ್, ರಿಪಬ್ಲಿಕ್ ಆಫ್ ದ ಕಾಂಗೋ, ಕ್ಯೂಬಾ, ಇಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೈಟಿ, ಇರಾನ್, ಲಾವೋಸ್, ಲಿಬಿಯಾ, ಸಿಯೆರಾ ಲಿಯೋನ್, ಸೋಮಾಲಿಯಾ, ಸುಡಾನ್, ಟೋಗೋ, ತುರ್ಕ್ಮೆನಿಸ್ತಾನ್, ವೆನೆಜುವೆಲಾ ಮತ್ತು ಯೆಮನ್ ದೇಶಗಳಿವೆ. ಹಾಗಾಗಿ ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಹೇಳಲಾಗಿದೆ.
ಕಳೆದ ಜೂನ್ ತಿಂಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 19 ಅಪಾಯಕಾರಿ ರಾಷ್ಟ್ರಗಳಿಗೆ ಪ್ರಯಾಣವನ್ನು ನಿಷೇಧಿಸಿದ್ದರು. ಹೊಸ ನಿಯಮಾವಳಿಗಳ ಪ್ರಕಾರ ಈ 19 ದೇಶಗಳ ಪ್ರಜೆಗಳಿಗೆ ಗ್ರೀನ್ ಕಾರ್ಡ್ ನೀಡುವಾಗ ಕಠಿಣ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಗ್ರೀನ್ ಕಾರ್ಡ್ ವಿಶೇಷತೆ ಏನು?
ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಹಾಗೂ ಉದ್ಯೋಗ ಕೈಗೊಳ್ಳಲು ಗ್ರೀನ್ ಕಾರ್ಡ್ ನೀಡಲಾಗುತ್ತದೆ. ಸಾಮಾನ್ಯವಾಗಿ ಮೂರರಿಂದ ಐದು ವರ್ಷದ ನಂತರ ನಾಗರಿಕತ್ವ ಪಡೆಯಲು ಸಹ ಇದು ನೆರವಾಗಲಿದೆ. ಜತೆಗೆ ಅಮೆರಿಕದಲ್ಲಿ ವಾಸಿಸುವವರಿಗೆ ಕಾನೂನಿನಡಿ ಭದ್ರತೆ ಒದಗಿಸುತ್ತದೆ.
ಕೆಲ ದಿನಗಳ ಹಿಂದೆ ಶ್ವೇತಭವನದ ಬಳಿ ಅಫ್ಘಾನ್ ಮೂಲದ ವ್ಯಕ್ತಿಯು ಇಬ್ಬರು ನ್ಯಾಷನಲ್ ಗಾರ್ಡ್ಸ್ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದ. ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಆಫ್ಘಾನ್ ಮೂಲದ ವ್ಯಕ್ತಿಯು 2021ರಲ್ಲಿ ಬೈಡೆನ್ ಆಡಳಿತದ ಸಮಯದಲ್ಲಿ ಅಮೆರಿಕಗೆ ಬಂದಿದ್ದ. ಇದೇ ವೇಳೆ ಆಫ್ಘಾನಿಸ್ತಾನದಿಂದ ಸಾವಿರಾರು ಜನರನ್ನು ಸ್ಥಳಾಂತರಿಸಿ ಪುನರ್ವಸಿಸಲು ರೂಪಿಸಿದ್ದ ಕಾರ್ಯಕ್ರಮದಡಿ ಆಶ್ರಯ ಪಡೆದಿದ್ದ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಆತನ ಆಶ್ರಯ ಕೋರಿದ ಅರ್ಜಿ ಅಂಗೀಕಾರಗೊಂಡು ಅಧಿಕೃತವಾಗಿ ವಲಸೆ ವ್ಯವಸ್ಥೆಯಡಿ ಸ್ಥಾನಮಾನ ಪಡೆದಿದ್ದ.