ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುವುದು ದೊಡ್ಡ ಭಾಗ್ಯ: ಗೌತಮ್ ಗಂಭೀರ್

Update: 2024-07-10 06:18 GMT

ಹೊಸದಿಲ್ಲಿ, ಜು.9- ನೂತನವಾಗಿ ನೇಮಕಗೊಂಡಿರುವ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ʻತ್ರಿವರ್ಣ ಧ್ವಜಕ್ಕೆ ಸೇವೆ ಸಲ್ಲಿಸುವುದು ಸಂಪೂರ್ಣ ಗೌರವದ ಕೆಲಸ ಮತ್ತು ತಂಡಕ್ಕೆ ಉತ್ತಮ ಫಲಿತಾಂಶ ತರಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. 

ಭಾರತದ 2011 ರ ಒಂದು ದಿನದ ಪಂದ್ಯದ ವಿಶ್ವಕಪ್ ವಿಜಯದ ಹೀರೋಗಳಲ್ಲಿ ಒಬ್ಬರಾದ ಗಂಭೀರ್, ಇತ್ತೀಚೆಗೆ ಟಿ20 ವಿಶ್ವಕಪ್ ವಿಜಯದ ಬಳಿಕ ರಾಹುಲ್ ದ್ರಾವಿಡ್ ಅವರ ನಿರ್ಗಮನದ ನಂತರ ಭಾರತ ತಂಡದ ತರಬೇತಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. 

ʻಭಾರತ ನನ್ನ ಅಸ್ಮಿತೆ ಮತ್ತು ನನ್ನ ದೇಶಕ್ಕೆ ಸೇವೆ ಸಲ್ಲಿಸುವುದು ನನ್ನ ಜೀವನದ ಬಹುದೊಡ್ಡ ಗೌರವ. ಬೇರೆ ಜವಾಬ್ದಾರಿ ವಹಿಸಿಕೊಂಡು, ತಂಡಕ್ಕೆ ಹಿಂತಿರುಗಿರುವುದು ಗೌರವದ ವಿಷಯವಾಗಿದೆ. ಆದರೆ, ನನ್ನ ಗುರಿ ಯಾವಾಗಲೂ ಒಂದೇ ಆಗಿರುತ್ತದೆ. ಅದು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡುವುದು,ʼ ಎಂದಿದ್ದಾರೆ. 

ʻನೀಲಿ ವಸ್ತ್ರದಾರಿಗಳು 1.4 ಶತಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸುತ್ತಾರೆ ಮತ್ತು ಕನಸುಗಳನ್ನು ನನಸಾಗಿಸಲು ನನ್ನ ಕೈಯಲ್ಲಿ ಸಾಧ್ಯವಿರುವುದನ್ನೆಲ್ಲ ಮಾಡುತ್ತೇನೆʼ ಎಂದು ಗಂಭೀರ್ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.

ಎರಡು ಬಾರಿ ಪ್ರಶಸ್ತಿ ಗಳಿಸಿದ ಐಪಿಎಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಿದ್ದ ಗಂಭೀರ್, ಆನಂತರ 2024 ರಲ್ಲಿ ಮೂರನೇ ಐಪಿಎಲ್ ಟ್ರೋಫಿಗೆ ಮಾರ್ಗದರ್ಶನ ನೀಡಲು ಮರಳಿದರು.ದ್ರಾವಿಡ್ ಅವರ ಮೂರು ವರ್ಷಗಳ ಸೇವೆಗೆ ಅವರು ಅಭಿನಂದನೆ ಸಲ್ಲಿಸಿದರು. 

ʻತ್ರಿವರ್ಣ ಧ್ವಜ, ನನ್ನ ಜನರು, ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಇದೊಂದು ಅಪರೂಪದ ಅವಕಾಶವಾಗಿದೆ. ರಾಹುಲ್ ದ್ರಾವಿಡ್ ಮತ್ತು ಅವರ ಸಹಾಯಕ ಸಿಬ್ಬಂದಿಯ ಅತ್ಯುತ್ತಮ ಸೇವೆಯನ್ನು ಅಭಿನಂದಿಸಲು ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್ ಸೇರಿದಂತೆ ಕ್ರಿಕೆಟ್‌ನ ಕೆಲವು ಪ್ರಮುಖ ದಿಗ್ಗಜರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿ ದ್ದೇನೆ,ʼ ಎಂದು ಗಂಭೀರ್ ಹೇಳಿದ್ದಾರೆ.

ʻನನ್ನ ಆಟದ ದಿನಗಳಲ್ಲಿ ಭಾರತೀಯ ಜೆರ್ಸಿಯನ್ನು ಧರಿಸುವಾಗ ಹೆಮ್ಮೆಪಡುತ್ತಿದ್ದೆ. ಈ ಹೊಸ ಪಾತ್ರ ಕೂಡ ಅದಕ್ಕೆ ಭಿನ್ನವಾಗಿರುವುದಿಲ್ಲʼ ಎಂದರು.

ʻಕ್ರಿಕೆಟ್ ನನ್ನ ಚೈತನ್ಯ. ಬಿಸಿಸಿಐ, ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿ.ವಿ.ಎಸ್. ಲಕ್ಷ್ಮಣ್, ಸಹಾಯಕ ಸಿಬ್ಬಂದಿ ಮತ್ತು ಮುಖ್ಯವಾಗಿ ಆಟಗಾರರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಎದುರು ನೋಡುತ್ತಿದ್ದೇನೆ,ʼ ಎಂದು ಅವರು ಹೇಳಿದರು.

Tags:    

Similar News