ಫಿನ್‌ಟೆಕ್ ವಲಯಕ್ಕೆ ನೆರವಿಗೆ ವಿವಿಧ ಕ್ರಮ: ಪ್ರಧಾನಿ

ಕಳೆದ 10 ವರ್ಷಗಳಲ್ಲಿ ಫಿನ್‌ಟೆಕ್ ವಲಯ 31 ಶತಕೋಟಿ ಡಾಲರ್ ಹೂಡಿಕೆ‌ ಆಕರ್ಷಿಸಿದೆ ಮತ್ತು ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು ಶೇ.500 ರಷ್ಟು ಬೆಳೆದಿವೆ ಎಂದು ಪ್ರಧಾನಿ ಮೋದಿ ಹೇಳಿದರು.

Update: 2024-08-30 09:53 GMT

ಫಿನ್‌ಟೆಕ್ ವಲಯವನ್ನು ಬಲಪಡಿಸಲು ಮತ್ತು ಉತ್ತೇಜಿಸಲು ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ನವದೆಹಲಿಯಲ್ಲಿ ಗ್ಲೋಬಲ್ ಫಿನ್‌ಟೆಕ್ ಫೆಸ್ಟ್ 2024 ಉದ್ದೇಶಿಸಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ಈ ವಲಯ 31 ಶತಕೋಟಿ ಡಾಲರ್ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು ಫಿನ್‌ಟೆಕ್ ಸ್ಟಾರ್ಟ್‌ಅಪ್‌ಗಳು ಶೇ.500 ರಷ್ಟು ಬೆಳೆದಿವೆ. ಏಂಜೆಲ್ ತೆರಿಗೆ ರದ್ದುಗೊಳಿಸುವಿಕೆಯು ಈ ವಲಯದ ಬೆಳವಣಿಗೆಗೆ ಇಟ್ಟ ಹೆಜ್ಜೆಯಾಗಿದೆ ಎಂದು ಪ್ರಧಾನಿ ತಿಳಿಸಿದರು. 

ನಿಯಂತ್ರಕರು ಸೈಬರ್ ವಂಚನೆ ತಡೆಯಲು ಮತ್ತು ಜನರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಣಕಾಸು ಸೇವೆಗಳ ಪ್ರಜಾಪ್ರಭುತ್ವೀಕರಣದಲ್ಲಿ ಫಿನ್‌ಟೆಕ್ ಮಹತ್ವದ ಪಾತ್ರ ವಹಿಸಿದೆ. ಭಾರತೀಯರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. 

ವೇಗ ಮತ್ತು ಪ್ರಮಾಣ: ʻಭಾರತೀಯರು ಫಿನ್‌ಟೆಕ್‌ ನ್ನು ಅಳವಡಿಸಿಕೊಳ್ಳುವ ವೇಗ ಮತ್ತು ಪ್ರಮಾಣಕ್ಕೆ ಸಾಟಿಯಿಲ್ಲ. ಇಂಥ ಉದಾಹರಣೆ ಜಗತ್ತಿನಲ್ಲಿ ಬೇರೆಲ್ಲೂ ಕಂಡುಬರುವುದಿಲ್ಲ. ದೇಶದಲ್ಲಿ ಫಿನ್‌ಟೆಕ್ ವಲಯ ತಂದಿರುವ ಪರಿವರ್ತನೆಯು ಕೇವಲ ತಂತ್ರಜ್ಞಾನಕ್ಕೆ ಸೀಮಿತ ವಾಗಿಲ್ಲ. ಅದು ದೂರಗಾಮಿ ಸಾಮಾಜಿಕ ಪರಿಣಾಮ ಬೀರಿದೆ ,ʼ ಎಂದು ಹೇಳಿದರು. 

ಫಿನ್‌ಟೆಕ್ ಸಮಾನಾಂತರ ಆರ್ಥಿಕತೆಯನ್ನು ತಗ್ಗಿಸಿದೆ. ಹಣಕಾಸು ಸೇವೆಗಳಲ್ಲಿ ಹಳ್ಳಿ ಮತ್ತು ನಗರದ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ. ವಿಶ್ವದ ಅತಿ ದೊಡ್ಡ ಕಿರುಬಂಡವಾಳ ಯೋಜನೆಯಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ 27 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು. 

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾತನಾಡಿ, ಡಿಜಿಟಲ್ ತಂತ್ರಜ್ಞಾನಗಳು ಆರ್ಥಿಕ ಒಳಗೊಳ್ಳುವಿಕೆಯ ವಿಸ್ತರಣೆ, ದಕ್ಷತೆ ಸುಧಾರಣೆ ಮತ್ತು ದೇಶಾದ್ಯಂತ ನೈಜ ಸಮಯದ ಸೇವೆಗಳನ್ನು ಸಕ್ರಿಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ದೇಶ ಡಿಜಿಟಲ್ ಪಾವತಿಗಳಲ್ಲಿ ಜಾಗತಿಕ ನಾಯಕನಾಗಿದೆ. ನೀತಿ ನಿರೂಪಕರು, ನಿಯಂತ್ರಕರು ಮತ್ತು ನವೋದ್ಯಮಿಗಳ ನಡುವಿನ ಸಹಯೋಗ ದೇಶದ ಫಿನ್‌ಟೆಕ್ ಪ್ರಯಾಣದ ನಿರ್ಣಾಯಕ ಅಂಶ,ʼ ಎಂದು ದಾಸ್ ಹೇಳಿದರು.

ರಿಸರ್ವ್ ಬ್ಯಾಂಕಿನ ನಿಯಂತ್ರಣ ಚೌಕಟ್ಟುಗಳು ಹೊಸ ಮತ್ತು ನವೀನ ವ್ಯವಹಾರಗಳು ಕ್ರಮಬದ್ಧವಾಗಿ ಬೆಳೆಯಲು ಅನುಕೂಲ ಮಾಡಿಕೊಟ್ಟಿವೆ ಎಂದು ಹೇಳಿದರು.

Tags:    

Similar News