NEET SCAM| ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ: ರಾಷ್ಟ್ರಪತಿ ದ್ರೌಪದಿ ಮುರ್ಮು
ಸರಕಾರವು ನ್ಯಾಯಯುತ ತನಿಖೆ ನಡೆಸಲು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳಲ್ಲಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ಹೇಳಿದರು.;
ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳ ತನಿಖೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ (ಜೂನ್ 27) ಹೇಳಿದರು.
18ನೇ ಲೋಕಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶೈಕ್ಷಣಿಕ ರಂಗದಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಪ್ರಸ್ತಾಪಿಸಿದರು. ಅವರು ಮಾತನಾಡುವಾಗ ಪ್ರತಿಪಕ್ಷ ಸದಸ್ಯರು ‘ನೀಟ್’ ಎಂದು ಘೋಷಣೆ ಕೂಗಿದರು.
ಪರೀಕ್ಷೆಗಳ ಪಾವಿತ್ರ್ಯ: ಯಾವುದೇ ಕಾರಣದಿಂದ ಪರೀಕ್ಷೆಯಲ್ಲಿ ಅಡಚಣೆ ಉಂಟಾದರೆ ಅದು ಸೂಕ್ತವಲ್ಲ. ಸರ್ಕಾರದ ನೇಮಕಗಳು ಮತ್ತು ಪರೀಕ್ಷೆಗಳಲ್ಲಿ ಪಾವಿತ್ರ್ಯ ಹಾಗೂ ಪಾರದರ್ಶಕತೆ ಅತ್ಯಗತ್ಯ ಎಂದು ಹೇಳಿದರು.
ʻಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ಘಟನೆ ಕುರಿತು ನ್ಯಾಯಯುತ ತನಿಖೆ ನಡೆಸಲು ಮತ್ತು ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ,ʼ ಎಂದು ಹೇಳಿದರು.
ನೀಟ್ ಹಗರಣ: ನೀಟ್ ಪರೀಕ್ಷೆಯಲ್ಲಿ ಅಕ್ರಮದ ಬಳಿಕ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರ ಈ ಹೇಳಿಕೆ ಬಂದಿದೆ. ಸರ್ಕಾರ ಸಂಪೂರ್ಣ ಸಮಸ್ಯೆಯನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ಪ್ರಕಟಿಸಿದೆ. ʻಈ ಹಿಂದೆಯೂ ಕೆಲವು ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಘಟನೆಗಳು ನಡೆದಿವೆ. ಪಕ್ಷ ರಾಜಕೀಯವನ್ನು ಮೀರಿ, ರಾಷ್ಟ್ರ ಮಟ್ಟದಲ್ಲಿ ಸದೃಢ ಹೆಜ್ಜೆಗಳನ್ನು ಇಡುವ ಅವಶ್ಯಕತೆಯಿದೆ,ʼ ಎಂದು ಒತ್ತಿ ಹೇಳಿದರು. ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಂಸತ್ತು ಬಲವಾದ ಕಾನೂನು ಜಾರಿಗೆ ತಂದಿದೆ. ಪರೀಕ್ಷೆ ಪ್ರಕ್ರಿಯೆಯಲ್ಲಿ ಸುಧಾರಣೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.