GPS Toll: ಫಾಸ್ಟ್ಟ್ಯಾಗ್ಗೆ ವಿದಾಯ; ಮೇ 1ರಿಂದ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ; ಹೇಗಿದೆ ಈ ವ್ಯವಸ್ಥೆ?
ಪ್ರಯಾಣಿಕರು ಸಂಚರಿಸಿದ ನಿಖರ ದೂರಕ್ಕೆ ತಕ್ಕಂತೆ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಸಣ್ಣ ದೂರದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದೆ. ಟೋಲ್ ಬೂತ್‌ಗಳನ್ನು ತೆಗೆದುಹಾಕುವುದರಿಂದ ಟ್ರಾಫಿಕ್ ಜಾಮ್‌ನ ಸಮಸ್ಯೆ ಕಡಿಮೆಯಾಗಿ, ವಾಹನ ಚಾಲಕರಿಗೆ ಸಮಯ ಉಳಿತಾಯವಾಗಲಿದೆ.;
ಭಾರತದ ಹೆದ್ದಾರಿ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸರ್ಕಾರ ಸಜ್ಜಾಗಿದೆ. ಮೇ 1ರಿಂದ ದೇಶಾದ್ಯಂತ ಫಾಸ್ಟ್ಟ್ಯಾಗ್ ಬದಲಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹೊಸ ವ್ಯವಸ್ಥೆಯು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟ್ಲೈಟ್ ಸಿಸ್ಟಮ್ (GNSS) ತಂತ್ರಜ್ಞಾನ ಬಳಸಿಕೊಂಡು ವಾಹನಗಳ ಚಲನೆಯನ್ನು ಟ್ರ್ಯಾಕ್ ಮಾಡಿ, ಸಂಚರಿಸಿದ ದೂರದ ಆಧಾರದ ಮೇಲೆ ಟೋಲ್ ಶುಲ್ಕ ಲೆಕ್ಕಹಾಕಲಿದೆ. ಇದರಿಂದ ಟೋಲ್ ಬೂತ್‌ಗಳಲ್ಲಿ ತಡೆಯಿಲ್ಲದೆ ಸುಗಮ ಪ್ರಯಾಣ ಸಾಧ್ಯವಾಗಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
ಪ್ರಯಾಣಿಕರು ಸಂಚರಿಸಿದ ನಿಖರ ದೂರಕ್ಕೆ ತಕ್ಕಂತೆ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಇದರಿಂದ ಸಣ್ಣ ಅಂತರದ ಪ್ರಯಾಣಿಕರಿಗೆ ಹಣ ಉಳಿತಾಯವಾಗಲಿದೆ. ಟೋಲ್ ಬೂತ್‌ಗಳನ್ನು ತೆಗೆದುಹಾಕುವುದರಿಂದ ಟ್ರಾಫಿಕ್ ಜಾಮ್‌ನ ಸಮಸ್ಯೆ ಕಡಿಮೆಯಾಗಿ, ವಾಹನ ಚಾಲಕರ ಮತ್ತು ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.
ಆನ್‌ಬೋರ್ಡ್ ಯೂನಿಟ್ (OBU) ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಲೆಕ್ಕಹಾಕಿ, ಚಾಲಕರ ಬ್ಯಾಂಕ್ ಖಾತೆಯಿಂದ ಶುಲ್ಕ ಕಡಿತಗೊಳ್ಳಲಿದೆ. ಇದರಿಂದ ಕೈಯಿಂದ ಶುಲ್ಕ ಸಂಗ್ರಹದ ದೋಷಗಳು ಮತ್ತು ವಂಚನೆ ಸಾಧ್ಯತೆ ಕಡಿಮೆಯಾಗುತ್ತದೆ. ಟ್ರಾಫಿಕ್ ಜಾಮ್ ಕಡಿಮೆಯಾಗುವುದರಿಂದ ಇಂಧನ ಬಳಕೆ ಮತ್ತು ವಾಹನ ಹೊಗೆ ಕಡಿಮೆಯಾಗಿ, ಪರಿಸರಕ್ಕೆ ಒಳಿತಾಗಲಿದೆ.
ವ್ಯವಸ್ಥೆ ನಿರ್ವಹಣೆ ಹೇಗೆ?
ಈ ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ವಾಹನಗಳಿಗೆ ಆನ್‌ಬೋರ್ಡ್ ಯೂನಿಟ್ (OBU) ಎಂಬ ಸಾಧನ ಅಳವಡಿಸಬೇಕಾಗುತ್ತದೆ. ಈ ಸಾಧನವು ಜಿಪಿಎಸ್ ಮತ್ತು ಭಾರತದ ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯಾದ ನಾವಿಕ್ (NavIC) ಸ್ಯಾಟ್ಲೈಟ್ಗಳೊಂದಿಗೆ ಸಂಪರ್ಕದಲ್ಲಿರುತ್ತದೆ. ವಾಹನವು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದಾಗ, OBU ಸಾಧನವು ವಾಹನದ ಸ್ಥಳವನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತದೆ ಮತ್ತು ಸಂಚರಿಸಿದ ದೂರವನ್ನು ಲೆಕ್ಕಹಾಕುತ್ತದೆ. ಈ ದೂರದ ಆಧಾರದ ಮೇಲೆ ಟೋಲ್ ಶುಲ್ಕವನ್ನು ಚಾಲಕರ ಲಿಂಕ್ ಮಾಡಲಾದ ಬ್ಯಾಂಕ್ ಖಾತೆ ಅಥವಾ ಡಿಜಿಟಲ್ ವ್ಯಾಲೆಟ್‌ನಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸುತ್ತದೆ. .
ಹೆಚ್ಚುವರಿಯಾಗಿ, ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಹೆದ್ದಾರಿಗಳಲ್ಲಿ ಅಳವಡಿಸಲಾಗುತ್ತದೆ. ವಾಹನದ ನೋಂದಣಿ ಸಂಖ್ಯೆಯನ್ನು ಗುರುತಿಸಿ ಟೋಲ್ ಸಂಗ್ರಹವನ್ನು ಇನ್ನಷ್ಟು ನಿಖರಗೊಳಿಸುತ್ತದೆ.
ಹಂತಹಂತವಾಗಿ ಜಾರಿ
ಈ ವ್ಯವಸ್ಥೆ ಹಂತಹಂತವಾಗಿ ಜಾರಿಯಾಗಲಿದೆ. ಮೊದಲಿಗೆ ವಾಣಿಜ್ಯ ವಾಹನಗಳಾದ ಟ್ರಕ್‌ಗಳು ಮತ್ತು ಬಸ್‌ಗಳಿಗೆ ಈ ವ್ಯವಸ್ಥೆ ಅಳವಡಿಸಲಾಗುತ್ತದೆ. ಏಕೆಂದರೆ ಈ ವಾಹನಗಳು ಈಗಾಗಲೇ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ (VLT) ಸಿಸ್ಟಮ್ ಹೊಂದಿರುತ್ತದೆ. ಖಾಸಗಿ ವಾಹನಗಳನ್ನು 2026-27ರ ವೇಳೆಗೆ ಈ ವ್ಯವಸ್ಥೆಯಡಿಗೆ ತರಲಾಗುವುದು. ಆರಂಭಿಕ ಹಂತದಲ್ಲಿ, 2,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ವ್ಯವಸ್ಥೆ ಪರೀಕ್ಷಿಸಲಾಗುವುದು, ಮತ್ತು ಎರಡು ವರ್ಷಗಳಲ್ಲಿ 50,000 ಕಿ.ಮೀ.ಗೆ ವಿಸ್ತರಿಸುವ ಯೋಜನೆಯಿದೆ.
ಈ ವ್ಯವಸ್ಥೆಯ ಜಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತಾಂತ್ರಿಕ ಬೆಂಬಲ ಒದಗಿಸಲಿದೆ, ನವಿಕ್ ಸ್ಯಾಟಿಲೈಟ್‌ಗಳ ಮೂಲಕ ನಿಖರವಾದ ಸ್ಥಳ ಟ್ರ್ಯಾಕಿಂಗ್‌ಗೆ ಸಹಾಯ ಮಾಡಲಿದೆ. ಜೊತೆಗೆ, ಜಿಯೋ-ಫೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಗಳ ಒಟ್ಟು 1.4 ಲಕ್ಷ ಕಿ.ಮೀ. ಉದ್ದದಲ್ಲಿ ಟೋಲ್ ಲೆಕ್ಕಾಚಾರಕ್ಕೆ ಅಗತ್ಯವಾದ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಗುರುತಿಸಲಾಗುತ್ತದೆ.
ಜಿಪಿಎಸ್‌ಗೆ ಬದಲಾವಣೆ ಏಕೆ?
2016ರಲ್ಲಿ ಜಾರಿಗೆ ಬಂದ ಫಾಸ್ಟ್ಯಾಗ್ ವ್ಯವಸ್ಥೆಯು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಬಳಸಿಕೊಂಡು ಟೋಲ್ ಪಾವತಿ ಸರಳಗೊಳಿಸಿತು. ಆದರೆ, ಜನದಟ್ಟಣೆಯ ಟೋಲ್ ಬೂತ್‌ಗಳಲ್ಲಿ ಕಾಯುವಿಕೆ, ಟ್ಯಾಗ್‌ನ ದುರುಪಯೋಗ, ಮತ್ತು ಸಿಸ್ಟಮ್ ದೋಷಗಳಂತಹ ಸಮಸ್ಯೆಗಳು ಈ ವ್ಯವಸ್ಥೆಯಲ್ಲೂ ಸಮಸ್ಯೆ ತಲೆದೋರುವಂತೆ ಮಾಡಿದೆ. ಜಿಪಿಎಸ್ ಆಧಾರಿತ ವ್ಯವಸ್ಥೆಯು ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ.
ಸವಾಲುಗಳೇನು?
ಸುರಂಗಗಳು, ಘಾಟ್ ರಸ್ತೆಗಳು, ಅಥವಾ ಕೆಟ್ಟ ಹವಾಮಾನದಲ್ಲಿ ಸ್ಯಾಟ್ಲೈಟ್ ಸಿಗ್ನಲ್‌ಗಳು ದುರ್ಬಲವಾಗಬಹುದು.
ವಾಹನಗಳ ಸಂಚಾರವನ್ನು ಟ್ರ್ಯಾಕ್ ಮಾಡುವುದರಿಂದ ಗೌಪ್ಯತೆ ಸಮಸ್ಯೆ ಉದ್ಭವಿಸಬಹುದು. ಯಾವ ವಾಹನ ಎಲ್ಲಿ ಹೋಗುತ್ತಿದೆ ಎಂದು ಇನ್ನೊಬ್ಬರು ತಿಳಿದುಕೊಳ್ಳುವ ಸಾಧ್ಯತೆಗಳಿವೆ. ಸರ್ಕಾರವು ಜಿಪಿಎಸ್‌ಗೆ ಬದಲಾಗಿ ಭಾರತದ GAGAN ಸ್ಯಾಟ್ಲೈಟ್ ವ್ಯವಸ್ಥೆ ಬಳಸುವುದರಿಂದ ಡೇಟಾ ಸುರಕ್ಷತೆ ಖಾತರಿಪಡಿಸುವುದಾಗಿ ತಿಳಿಸಿದೆ.
ಆನ್‌ಬೋರ್ಡ್ ಯೂನಿಟ್ ಸಾಧನಗಳ ಅಳವಡಿಕೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗೆ ಆರಂಭಿಕ ಹಣಕಾಸು ಹೂಡಿಕೆ ಅಗತ್ಯವಾಗುತ್ತದೆ.
ಸರ್ಕಾರದ ಭರವಸೆಯೇನು?
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ಈ ವ್ಯವಸ್ಥೆಯು ಪ್ರಯಾಣಿಕರಿಗೆ ಸುಗಮ ಮತ್ತು ಪಾರದರ್ಶಕ ಅನುಭವ ಒದಗಿಸಲಿದೆ ಎಂದು ಭರವಸೆ ನೀಡಿದ್ದಾರೆ. ಫಾಸ್ಟ್ಟ್ಯಾಗ್ನೊಂದಿಗೆ ಹೈಬ್ರಿಡ್ ಮಾದರಿಯಲ್ಲಿ ಈ ವ್ಯವಸ್ಥೆಯನ್ನು ಆರಂಭಿಕವಾಗಿ ಜಾರಿಗೊಳಿಸಲಾಗುವುದು, ಇದರಿಂದ ಚಾಲಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. 20 ಕಿ.ಮೀ.ವರೆಗಿನ ಸಣ್ಣ ದೂರದ ಪ್ರಯಾಣಕ್ಕೆ ಯಾವುದೇ ಟೋಲ್ ಶುಲ್ಕವಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ, ಇದು ಸ್ಥಳೀಯ ಪ್ರಯಾಣಿಕರಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.