ಸಿಪಿಎಂ ಕಾರ್ಯಕರ್ತರ ದಾಳಿಯಿಂದ ಕಾಲು ಕಳೆದುಕೊಂಡ ಸದಾನಂದ ಮಾಸ್ಟರ್​ ಸೇರಿ ನಾಲ್ವರು ರಾಜ್ಯ ಸಭೆಗೆ

ರಾಷ್ಟ್ರಪತಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿದ್ದಾರೆ.;

Update: 2025-07-13 06:49 GMT

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ ಆರ್ಟಿಕಲ್ 80(1)(a) ಅಡಿಯಲ್ಲಿ ತಮ್ಮ ಅಧಿಕಾರವನ್ನು ಬಳಸಿ, ರಾಜ್ಯಸಭೆಗೆ ನಾಲ್ವರು ಸಾಧಕರನ್ನು ಶನಿವಾರ ನಾಮನಿರ್ದೇಶನ ಮಾಡಿದ್ದಾರೆ. ನಿವೃತ್ತ ಸದಸ್ಯರಿಂದ ತೆರವಾದ ಸ್ಥಾನಗಳನ್ನು ಭರ್ತಿ ಮಾಡಲು ಈ ಘೋಷಣೆಯನ್ನು ಜುಲೈ 12ರಂದುಗೆಜೆಟ್ ಅಧಿಸೂಚನೆಯ ಮೂಲಕ ಪ್ರಕಟಿಸಲಾಗಿದೆ.

ಕೇರಳದ ಶಿಕ್ಷಕ ಮತ್ತು ಬಿಜೆಪಿ ಕಾರ್ಯಕರ್ತ ಸಿ. ಸದಾನಂದನ್ ಮಾಸ್ಟರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್‌ನನ್ನು ಗಲ್ಲಿಗೇರಿಸುವಂತೆ ವಾದ ಮಂಡಿಸಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್, ರಾಜಕೀಯ ವಿಜ್ಞಾನಿ ಮತ್ತು ಇತಿಹಾಸಕಾರರಾದ ಮೀನಾಕ್ಷಿ ಜೈನ್ ಅವರು ನಾಮನಿರ್ದೇಶನಗೊಂಡ ಸದಸ್ಯರು.

ರಾಷ್ಟ್ರಪತಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 12 ಮಂದಿಯನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಅಧಿಕಾರ ಹೊಂದಿದ್ದಾರೆ.

ಕೇರಳದ ಹಿರಿಯ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಸಿ ಸದಾನಂದನ್ ಮಾಸ್ಟರ್, ಬಿಜೆಪಿಯೊಂದಿಗೆ ದೀರ್ಘಕಾಲದ ಸಂಬಂಧ ಹೊಂದಿದ್ದಾರೆ. 1994ರಲ್ಲಿ ಕೇರಳದ ಪೆರಿಂಚೇರಿಯಲ್ಲಿ ಸಿಪಿಐ(ಎಂ) ಕಾರ್ಯಕರ್ತರಿಂದ ನಡೆದ ರಾಜಕೀಯ ಹಿಂಸಾಚಾರದಲ್ಲಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. 2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರು, ಯುವಶಕ್ತಿಯ ಸಬಲೀಕರಣಕ್ಕೆ ತಮ್ಮ ಬದ್ಧತೆಗೆ ಹೆಸರಾಗಿದ್ದಾರೆ. ಪಿಎಂ ಮೋದಿ ಅವರು, "ಸದಾನಂದನ್ ಮಾಸ್ಟರ್ ಅವರ ಜೀವನವು ಧೈರ್ಯ ಮತ್ತು ಅನ್ಯಾಯದ ವಿರುದ್ಧ ಬಗ್ಗದಿರುವ ಸ್ಫೂರ್ತಿಯ ಸಂಕೇತವಾಗಿದೆ. ಅವರ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರ ಕೊಡುಗೆಗಳು ಶ್ಲಾಘನೀಯ" ಎಂದು ಈ ಹಿಂದೆ ಶ್ಲಾಘಿಸಿದ್ದರು.

ಉಜ್ಜ್ವಲ್ ನಿಕಮ್ ಅವರು ಭಾರತದ ಪ್ರಮುಖ ಸರ್ಕಾರಿ ಅಭಿಯೋಜಕರಾಗಿದ್ದು, 26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ವಿಶೇಷ ವಕೀಲರಾಗಿದ್ದರು. ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಂಬೈ ಉತ್ತರ ಮಧ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ರಿಂಗ್ಲಾ, ಅಮೆರಿಕ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ನಲ್ಲಿ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಭಾರತದ G20 ಅಧ್ಯಕ್ಷತೆಯ ಮುಖ್ಯ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.

ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಮಾಜಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಮೀನಾಕ್ಷಿ ಜೈನ್, ಭಾರತೀಯ ಇತಿಹಾಸ ಕ್ಷೇತ್ರದಲ್ಲಿ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ. ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಅವರು ಕೆಲಸ ಮಾಡಿದ್ದಾರೆ. 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಅವರು, ಈ ಹಿಂದೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೋದಿ ಅಭಿನಂದನೆ: ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಹರ್ಷವರ್ಧನ್ ಶ್ರಿಂಗ್ಲಾ, ಉಜ್ವಲ್ ನಿಕಮ್, ಸಿ.ಸದಾನಂದನ್ ಮಾಸ್ಟರ್, ಮೀನಾಕ್ಷಿ ಜೈನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಆಯ್ಕೆಯಲ್ಲಿ ರಾಷ್ಟ್ರಪತಿಗಳ ಅಧಿಕಾರ ಏನು?

ಭಾರತ ಸಂವಿಧಾನದ ಆರ್ಟಿಕಲ್ 80(1)(a) ಅಡಿಯಲ್ಲಿ ರಾಷ್ಟ್ರಪತಿಗಳಿಗೆ ರಾಜ್ಯಸಭೆಗೆ 12 ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವಿದೆ. ಈ ಅಧಿಕಾರವನ್ನು ಆರ್ಟಿಕಲ್ 80(3) ರ ಪ್ರಕಾರ, ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯಸಭೆಗೆ ತರುವ ಉದ್ದೇಶದಿಂದ ಬಳಸಲಾಗುತ್ತದೆ. ಈ ನಾಮನಿರ್ದೇಶನವು ಸಂಸತ್ತಿಗೆ ವಿವಿಧ ಕ್ಷೇತ್ರಗಳ ಪರಿಣತಿ ಮತ್ತು ಅನುಭವವನ್ನು ತರಲು ನೆರವಾಗುತ್ತದೆ, ರಾಜಕೀಯ ಪರಿಗಣನೆಗಳನ್ನು ಮೀರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಔಚಿತ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. 

Tags:    

Similar News