ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯುನಿಸ್ಟ್ ಚಳವಳಿಯ ನಾಯಕ ವಿ.ಎಸ್. ಅಚ್ಯುತಾನಂದನ್ ನಿಧನ

ಹೃದಯಾಘಾತಕ್ಕೆ ಒಳಗಾದ ಅವರನ್ನು ತಿರುವನಂತಪುರಂನ ಎಸ್‌ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಪೂರ್ಣ ಪ್ರಜ್ಞೆಯನ್ನು ಮರಳಿ ಪಡೆಯಲೇ ಇಲ್ಲ;

Update: 2025-07-21 12:02 GMT

ಕೇರಳದ ಮಾಜಿ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ)ನ ಹಿರಿಯ ನಾಯಕ ವಿ.ಎಸ್. ಅಚ್ಯುತಾನಂದನ್ ಅವರು ಸೋಮವಾರ (ಜುಲೈ 21) ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

2017ರಲ್ಲಿ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ವಿ.ಎಸ್. ಅಚ್ಯುತಾನಂದನ್ ಅವರು ಸಕ್ರಿಯ ರಾಜಕಾರಣದಿಂದ ದೂರ ಸರಿದು, ನಿವೃತ್ತ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ಹದಗೆಟ್ಟಿದ್ದರಿಂದ, ಜೂನ್ 23 ರಂದು ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಂತರ ಹೃದಯಾಘಾತಕ್ಕೆ ಒಳಗಾದ ಅವರನ್ನು ತಿರುವನಂತಪುರಂನ ಎಸ್‌ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು. ಅಲ್ಲಿ ಅವರಿಗೆ ವೆಂಟಿಲೇಟರ್ ಬೆಂಬಲ ನೀಡಿ, ವೈದ್ಯರ ತಂಡವು ನಿರಂತರವಾಗಿ ನಿಗಾ ವಹಿಸಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಪೂರ್ಣ ಪ್ರಜ್ಞೆಯನ್ನು ಮರಳಿ ಪಡೆಯಲೇ ಇಲ್ಲ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯಕೀಯ ಮಂಡಳಿ ಮತ್ತು ಅಚ್ಯುತಾನಂದನ್ ಅವರ ಕುಟುಂಬದೊಂದಿಗೆ ಸಮಾಲೋಚನೆ ನಡೆಸಿದ ನಂತರ, ಅವರ ನಿಧನವನ್ನು ಅಧಿಕೃತವಾಗಿ ಘೋಷಿಸಲಾಯಿತು. ಅವರು ಪತ್ನಿ ವಸುಮತಿ, ಪುತ್ರ ಡಾ. ವಿ.ಎ. ಅರುಣ್ ಕುಮಾರ್, ಮತ್ತು ಪುತ್ರಿ ಡಾ. ವಿ.ಎ. ಆಶಾ ಅವರನ್ನು ಅಗಲಿದ್ದಾರೆ.

'ದಣಿವರಿಯದ ಯೋಧ'ನಿಗೆ ಕಂಬನಿ

ವಿ.ಎಸ್. ಅಚ್ಯುತಾನಂದನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್, "ವಿ.ಎಸ್. ಅವರು ವಿರಾಮವಿಲ್ಲದ ಹೋರಾಟಗಳ ದಣಿವರಿಯದ ಯೋಧ. ಕಾರ್ಮಿಕ ವರ್ಗದ ಪ್ರಗತಿಗೆ ಶಕ್ತಿ ತುಂಬಿದ ಹೋರಾಟಗಾರ. ಕೇರಳದ ರಾಜಕೀಯ ಭೂದೃಶ್ಯವನ್ನು ರೂಪಿಸಿದ ಅಸಂಖ್ಯಾತ ಚಳವಳಿಗಳನ್ನು ಮುನ್ನಡೆಸಿದ ಕಮ್ಯುನಿಸ್ಟ್‌ನ ಅಚಲ ಬದ್ಧತೆ ಅವರದ್ದಾಗಿತ್ತು," ಎಂದು ಸ್ಮರಿಸಿದ್ದಾರೆ.

"ಯಾವುದೇ ಸಮಾಜದಲ್ಲಿ ಕಿಚ್ಚು ಹಚ್ಚುವ ಅಪರೂಪದ ಸಾಮರ್ಥ್ಯ ಮತ್ತು ಯಾವುದೇ ಬಿಕ್ಕಟ್ಟನ್ನು ನೇರವಾಗಿ ಎದುರಿಸುವ ಶಕ್ತಿ ವಿ.ಎಸ್. ಅವರಿಗಿತ್ತು. ಮುಂಬರುವ ಪೀಳಿಗೆಗೆ ಅಳಿಸಲಾಗದ ಹೆಜ್ಜೆಗುರುತುಗಳನ್ನು ಬಿಟ್ಟು, ಆ ಕ್ರಾಂತಿಕಾರಿ ನಾಯಕ ಇದೀಗ ಚಿರನಿದ್ರೆಗೆ ಜಾರಿದ್ದಾರೆ," ಎಂದು ಅವರು ಭಾವಪೂರ್ಣವಾಗಿ ನುಡಿನಮನ ಸಲ್ಲಿಸಿದರು.

Tags:    

Similar News