ಶ್ರೀಲಂಕಾ ನೌಕಾಪಡೆಯ ಗುಂಡಿನ ದಾಳಿಗೆ 5 ಭಾರತೀಯ ಮೀನುಗಾರರಿಗೆ ಗಾಯ; ಭಾರತದ ಖಂಡನೆ
ಜಾಫ್ನಾದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಗಾಯಗೊಂಡ ಮೀನುಗಾರರನ್ನು ಭೇಟಿ ಮಾಡಿ ನೆರವು ನೀಡಿದ್ದಾರೆ. ಮೀನುಗಾರರು ಮತ್ತು ಅವರ ಕುಟುಂಬಗಳಿಗೆ ಸಂಪರ್ಕ ಸಾಧಿಸಲು ನೆರವಾಗುತ್ತಿದ್ದಾರೆ.;
ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ ಶ್ರೀಲಂಕಾ ನೌಕಾಪಡೆಯು ಮಂಗಳವಾರ ಮುಂಜಾನೆ ನಡೆಸಿದ ಗುಂಡಿನ ದಾಳಿಯಲ್ಲಿ ಮೀನುಗಾರರು ಸೇರಿದಂತೆ ಐವರು ಭಾರತೀಯರು ಗಾಯಗೊಂಡಿದ್ದಾರೆ. ಇದರಿಂದ ಅಸಮಾಧಾನಗೊಂಡಿರುವ ಭಾರತ, ಶ್ರೀಲಂಕಾದ ರಾಯಭಾರಿಯನ್ನು ಕರೆಸಿ ಖಂಡನೆ ವ್ಯಕ್ತಪಡಿಸಿದೆ.
ನವದೆಹಲಿಯಲ್ಲಿರುವ ಲಂಕಾದ ಹಂಗಾಮಿ ಹೈಕಮಿಷನರ್ಗೆ ವಿದೇಶಾಂಗ ಸಚಿವಾಲಯಕ್ಕೆ (ಎಂಇಎ) ಕರೆಸಿ ಘಟನೆ ಬಗ್ಗೆ ವಿವರಣೆ ಕೇಳಲಾಗಿದೆ. ನೆರೆಯ ರಾಷ್ಟ್ರವು ಮಾಡುತ್ತಿರುವ ಬಲಪ್ರಯೋಗ ಸ್ವೀಕಾರಾರ್ಹವಲ್ಲ ಎಂದು ಭಾರತ ತನ್ನ ನೇರ ಪ್ರತಿಕ್ರಿಯೆ ನೀಡಿದೆ.
"ಡೆಲ್ಫ್ಟ್ ದ್ವೀಪದ ಸಮೀಪದಲ್ಲಿ 13 ಭಾರತೀಯ ಮೀನುಗಾರರು ಇದ್ದ ದೋಣಿಯನ್ನು ವಶಪಡಿಸಿಕೊಳ್ಳುವ ವೇಳೆ ಶ್ರೀಲಂಕಾ ನೌಕಾಪಡೆಯು ಗುಂಡು ಹಾರಿಸಿದೆ" ಎಂದು ಸಚಿವಾಲಯ ಹೇಳಿದೆ. ಮೀನುಗಾರಿಕಾ ದೋಣಿಯಲ್ಲಿದ್ದ 13 ಮೀನುಗಾರರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಜಾಫ್ನಾ ಬೋಧನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ಮೂವರು ಮೀನುಗಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ .
ಜಾಫ್ನಾದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಗಾಯಗೊಂಡ ಮೀನುಗಾರರನ್ನು ಭೇಟಿ ಮಾಡಿ ನೆರವು ನೀಡಿದ್ದಾರೆ. ಮೀನುಗಾರರು ಮತ್ತು ಅವರ ಕುಟುಂಬಗಳಿಗೆ ಸಂಪರ್ಕ ಸಾಧಿಸಲು ನೆರವಾಗುತ್ತಿದ್ದಾರೆ.
ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ವಿಷಯವನ್ನು ಶ್ರೀಲಂಕಾದ ವಿದೇಶಾಂಗ ಸಚಿವಾಲಯದ ಗಮನಕ್ಕೆ ತಂದಿದೆ. ಜೀವನೋಪಾಯದ ಕಾಳಜಿ ಗಮನದಲ್ಲಿಟ್ಟುಕೊಂಡು ಮೀನುಗಾರರ ಸಮಸ್ಯೆಗಳನ್ನು ಮಾನವೀಯ ರೀತಿಯಲ್ಲಿ ಪರಿಗಣಿಸುವ ಅಗತ್ಯವನ್ನು ಭಾರತ ಸರ್ಕಾರ ದ್ವೀಪ ರಾಷ್ಟ್ರಕ್ಕೆ ಮನವರಿಕೆ ಮಾಡಿದೆ.
"ಬಂಧನದ ವೇಳೆ ಬಲಪ್ರಯೋಗ ಸ್ವೀಕಾರಾರ್ಹವಲ್ಲ. ಈ ನಿಟ್ಟಿನಲ್ಲಿ ಉಭಯ ಸರ್ಕಾರಗಳ ನಡುವೆ ಅಸ್ತಿತ್ವದಲ್ಲಿರುವ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು," ಎಂದು ವಿದೇಶಾಂಗ ಇಲಾಖೆ ಸ್ಮರಿಸಿದೆ.