ಇಂಡಿಗೋ ವಿಮಾನ ಎಂಜಿನ್‌ನಲ್ಲಿ ಬೆಂಕಿ, ತಪ್ಪಿದ ಮತ್ತೊಂದು ದುರಂತ

ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಪೈಲಟ್ ಟೇಕ್-ಆಫ್‌ನ್ನು ಸ್ಥಗಿತಗೊಳಿಸಿ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.;

Update: 2025-07-23 14:05 GMT

ಸಾಂದರ್ಭಿಕ ಚಿತ್ರ

ಅಹಮದಾಬಾದ್‌ನಿಂದ 60 ಪ್ರಯಾಣಿಕರನ್ನು ಹೊತ್ತು ದಿಯುಗೆ ಹೊರಟಿದ್ದ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು ಪೈಲಟ್‌ಗಳ ಸಮಯಪ್ರಜ್ಞೆಯಿಂದ ಭಾರಿ ದುರಂತ ತಪ್ಪಿದಂತಾಗಿದೆ. 

ಮಾಧ್ಯಮ ವರದಿಗಳ ಪ್ರಕಾರ, ವಿಮಾನವು ಟೇಕ್-ಆಫ್‌ಗೆ ಹೊರಡಲು ಪ್ರಾರಂಭಿಸಿದ ಸ್ವಲ್ಪ ಸಮಯದ ನಂತರ, ಒಂದು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ  ಪೈಲಟ್ ಟೇಕ್‌ಆಫ್‌ನ್ನು ಸ್ಥಗಿತಗೊಳಿಸಿ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. 

ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಟೇಕ್‌ಆಫ್‌ಗೆ ಸಿದ್ಧರಾಗಲು ಪ್ರಾರಂಭಿಸಿದ ಕೂಡಲೇ, ಪೈಲಟ್ ವಾಯು ಸಂಚಾರ ನಿಯಂತ್ರಣ ಅಧಿಕಾರಿಗೆ ʼಮೇಡೇʼ ಕರೆ ಮಾಡಿ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು ಎಂದು ತಿಳಿಸಿದೆ.

ಅಹಮದಾಬಾದ್‌ನಿಂದ ದಿಯುಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E 7966 ಟೇಕ್ ಆಫ್ ಆಗುವ ಸ್ವಲ್ಪ ಮೊದಲು ತಾಂತ್ರಿಕ ದೋಷ ಕಂಡುಬಂದಿದೆ. ತಕ್ಷಣ ಪೈಲಟ್‌ಗಳು ಅಧಿಕಾರಿಗಳಿಗೆ ಮಾಹಿತಿ ನೀಡಿ ಟೇಕ್‌ಆಫ್‌ ಸ್ಥಗಿತಗೊಳಿಸಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ್ನನ್ನು ಸುರಕ್ಷಿತವಾಗಿ ಇಳಿಸಿದ್ದಾರೆ. ವಿಮಾನವು ಪುನಃ ಕಾರ್ಯಾಚರಣೆ ಮಾಡುವ ಮೊದಲು ಅಗತ್ಯ ತಪಾಸಣೆ ಮತ್ತು ನಿರ್ವಹಣೆ ಮಾಡಲಾಗುವುದು" ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ಗೋವಾದಿಂದ ಇಂದೋರ್‌ಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ತಾಂತ್ರಿಕ ಕಾರಣದಿಂದ ಮಂಗಳವಾರ(ಜು.22) ತುರ್ತು ಭೂ ಸ್ಪರ್ಶವಾಗಿತ್ತು. ಈ ಘಟನೆ ನಡೆದು ಒಂದು ದಿನದ ನಂತರ ಮತ್ತೊಂದು ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. 

ಇತ್ತೀಚೆಗಷ್ಟೇ ಅಹಮದಾಬಾದ್‌ನ ವಿಮಾನ ನಿಲ್ದಾಣದಲ್ಲಿ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಸೆಕೆಂಡುಗಳಲ್ಲಿ ಅಪಘಾತಕ್ಕೀಡಾಗಿ ಸ್ಫೋಟಗೊಂಡು 260 ಪ್ರಯಾಣಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಪ್ರಯಾಣಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. 

Tags:    

Similar News