ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್‌ ಬಾಕ್ಸ್‌ನಿಂದ  ದತ್ತಾಂಶ ತೆಗೆಯುವ ಪ್ರಕ್ರಿಯೆ ಆರಂಭ
x

ವಿಮಾನ ಅಪಘಾತ

ಏರ್ ಇಂಡಿಯಾ ಅಪಘಾತ: ಬ್ಲ್ಯಾಕ್‌ ಬಾಕ್ಸ್‌ನಿಂದ ದತ್ತಾಂಶ ತೆಗೆಯುವ ಪ್ರಕ್ರಿಯೆ ಆರಂಭ

2025ರ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ವಿಮಾನವು ಟೇಕಾಫ್ ನಂತರ ಕೆಲವೇ ಕ್ಷಣಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಬ್ಲಾಕ್‌ಗೆ ಢಿಕ್ಕಿ ಹೊಡೆದು ಭೀಕರವಾಗಿ ಪತನಗೊಂಡಿತ್ತು.


ಏರ್ ಇಂಡಿಯಾ ಅಪಘಾತದ ನಂತರ ಪತ್ತೆಯಾದ ಬ್ಲ್ಯಾಕ್‌ಬಾಕ್ಸ್‌ ಸಂಬಂಧಿಸಿದ ಮಾಹಿತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ಹಂಚಿಕೊಂಡಿದೆ. ಜೂನ್ 24 ರಂದು, ಕ್ರ್ಯಾಶ್ ಪ್ರೊಟೆಕ್ಷನ್ ಮಾಡ್ಯೂಲ್ (ಸಿಪಿಎಂ) ಮುಂಭಾಗದ ಬ್ಲ್ಯಾಕ್‌ ಬಾಕ್ಸ್‌ ಅನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು. ಜೂನ್ 25 ರಂದು, ಮೆಮೊರಿ ಮಾಡ್ಯೂಲ್ ಅನ್ನು ಪತ್ತೆ ಮಾಡಿ ಮತ್ತು ಅದರ ಡೇಟಾವನ್ನು ಎಎಐಬಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಗೂ ಸಿವಿಆರ್ ಮತ್ತು ಎಫ್‌ಡಿಆರ್ ಡೇಟಾದ ವಿಶ್ಲೇಷಣೆ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ.

2025ರ ಜೂನ್ 12ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ವಿಮಾನವು ಟೇಕಾಫ್ ನಂತರ ಕೆಲವೇ ಕ್ಷಣಗಳಲ್ಲಿ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಬ್ಲಾಕ್‌ಗೆ ಢಿಕ್ಕಿ ಹೊಡೆದು ಭೀಕರವಾಗಿ ಪತನಗೊಂಡಿತ್ತು. ಈ ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 241 ಜನರು ಮತ್ತು ಸ್ಥಳದಲ್ಲಿದ್ದ39 ಜನರು ಮೃತಪಟ್ಟಿದ್ದರು.

ಅಪಘಾತದ ತನಿಖೆಗೆ ಬ್ಲ್ಯಾಕ್‌ಬಾಕ್ಸ್‌ ಮಾಹಿತಿ ಬಹುಮುಖ್ಯ

ವಿಮಾನ ಅಪಘಾತದ ತನಿಖೆಗೆ ಮುಖ್ಯವಾದ ಫ್ಲೈಟ್ ಡೇಟಾ ರೆಕಾರ್ಡರ್ (FDR) ಮತ್ತು ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ (CVR) ಎಂಬ ಎರಡು ಬ್ಲಾಕ್ ಬಾಕ್ಸ್‌ಗಳನ್ನು ಸ್ಥಳದಿಂದ ಮರುಪಡೆಯಲಾಗಿದೆ. ವಿಮಾನ ಪತನದ ನಂತರ ಈ ಪೆಟ್ಟಿಗೆಗಳನ್ನು ಭಾರತೀಯ ವಾಯುಪಡೆಯ ವಿಮಾನದ ಮೂಲಕ ಅಹಮದಾಬಾದ್‌ನಿಂದ ದೆಹಲಿಗೆ ಸಾಗಿಸಲಾಯಿತು.

ವಿಮಾನ ಪತನಕ್ಕೆ ಕಾರಣವಾದ ಅಂಶಗಳ ಪತ್ತೆ?

ಈ ಡೇಟಾದ ವಿಶ್ಲೇಷಣೆಯಿಂದ ವಿಮಾನದ ತಾಂತ್ರಿಕ ಸ್ಥಿತಿ, ಎಂಜಿನ್‌ಗಳ ಕಾರ್ಯಕ್ಷಮತೆ, ಪೈಲಟ್‌ಗಳ ಸಂವಹನ ಹಾಗೂ ಇತರ ಪ್ರಮುಖ ಅಂಶಗಳು ಹೊರಬರುತ್ತವೆ. ಈ ಮೂಲಕ ವಿಮಾನ ಪತನಕ್ಕೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಲು ಸಹಾಯವಾಗಲಿದೆ. ಈ ತನಿಖೆಯಲ್ಲಿ ಅಮೆರಿಕದ ನ್ಯಾಷನಲ್ ಟ್ರಾನ್ಸ್‌ಪೋರ್ಟೇಶನ್ ಸೇಫ್ಟಿ ಬೋರ್ಡ್ (NTSB) ಹಾಗೂ ಬೋಯಿಂಗ್ ಕಂಪನಿಯ ತಜ್ಞರು ಸಹ ಭಾಗವಹಿಸುತ್ತಿದ್ದಾರೆ.

ಭವಿಷ್ಯದಲ್ಲಿ ಇಂತಹ ದುರ್ಘಟನೆಗಳನ್ನು ತಡೆಯಲು ಕ್ರಮ

ಈ ದುರ್ಘಟನೆಯ ನಂತರ, ಏರ್ ಇಂಡಿಯಾ ತನ್ನ ಬಳಿಯಿರುವ ಎಲ್ಲ ಬೋಯಿಂಗ್ 787 ಡ್ರೀಮ್‌ ಲೈನರ್ ವಿಮಾನಗಳ ಪರಿಶೀಲನೆ ಹಾಗೂ ಸುರಕ್ಷತಾ ತಪಾಸಣೆಯನ್ನು ಕಡ್ಡಾಯಗೊಳಿಸಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಂಪನಿ ಮುಂದಾಗಿದೆ.

Read More
Next Story