ಮೂರನೇ ಬಾರಿಗೆ ರೈತರ ಜಾಥಾ ವಿಫಲ: ಪೊಲೀಸರಿಂದ ಮತ್ತೆ ಆಶ್ರುವಾಯು ಪ್ರಯೋಗ
ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ದೆಹಲಿಗೆ ತೆರಳದಂತೆ ಚದುರಿಸಲು ಹರಿಯಾಣದ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಿದರು ಮತ್ತು ಜಲಫಿರಂಗಿ ಪ್ರಯೋಗಿಸಿದರು.;
ಡೆಲ್ಲಿಯ ಕಡೆಗೆ ಸಾಗುತ್ತಿದ್ದ 101 ರೈತರ "ಜಾಥಾ" ಶನಿವಾರ ಮತ್ತೊಮ್ಮೆ ವಿಫಲಗೊಂಡಿದೆ. (ಡಿಸೆಂಬರ್ 14) ಮಧ್ಯಾಹ್ನ 12 ಗಂಟೆಗೆ ಶಂಭು ಗಡಿ ಸ್ಥಳದಿಂದ ದೆಹಲಿಗೆ ತಮ್ಮ ಕಾಲ್ನಡಿಗೆ ಮೆರವಣಿಗೆಯನ್ನು ಪುನರಾರಂಭ ಮಾಡಲು ರೈತರು ಮುಂದಾದರು. ಈ ವೇಳೆ ಪೊಲೀಸರು ಮತ್ತೊಂದು ಬಾರಿ ತಡೆದರು.
ಶಂಭು ಗಡಿಯಲ್ಲಿ ಪ್ರತಿಭಟನಾ ನಿರತ ರೈತರನ್ನು ದೆಹಲಿಗೆ ತೆರಳದಂತೆ ಚದುರಿಸಲು ಹರಿಯಾಣದ ಪೊಲೀಸರು ಅಶ್ರುವಾಯು ಶೆಲ್ಗಳನ್ನು ಬಳಸಿದರು ಮತ್ತು ಜಲಫಿರಂಗಿ ಉಡಾಯಿಸಿದರು.
ಅಶ್ರುವಾಯು ಶೆಲ್ ದಾಳಿಯಲ್ಲಿ ಕೆಲವು ರೈತರು ಗಾಯಗೊಂಡಿದ್ದು, ಪ್ರತಿಭಟನಾ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಆಂಬ್ಯುಲೆನ್ಸ್ ಗಳಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಕ್ಕೂ ಮುನ್ನ ಅಂಬಾಲಾ ಜಿಲ್ಲಾಧಿಕಾರಿ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್.ಭೋರಿಯಾ ಅವರು ಪ್ರತಿಭಟನಾ ನಿರತ ರೈತರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
ರೈತರು ದೆಹಲಿಗೆ ಹೋಗಲು ಹಠ ಹಿಡಿದಿದ್ದರು ಮತ್ತು ಮುಂದುವರಿಯಲು ಅವಕಾಶ ನೀಡುವಂತೆ ಭದ್ರತಾ ಸಿಬ್ಬಂದಿಯನ್ನು ಒತ್ತಾಯಿಸಿದರು. ಕೆಲವು ಮೀಟರ್ ರೈತರು ನಡೆಯಲು ಆರಂಭಿಸಿದ ಬಳಿಕ ಪೊಲೀಸರು ಬ್ಯಾರಿಕೇಡ್ಗಳನ್ನು ಇಟ್ಟು ತಡೆದರು.
ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಡಿಸೆಂಬರ್ 6 ರಿಂದ ರಾಷ್ಟ್ರ ರಾಜಧಾನಿಗೆ ಮೆರವಣಿಗೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಅವರು ಡಿಸೆಂಬರ್ 6 ಮತ್ತು ಡಿಸೆಂಬರ್ 8ರಂದು ಎರಡು ಪ್ರಯತ್ನಗಳನ್ನು ಮಾಡಿದ್ದರು. ಹರಿಯಾಣದಲ್ಲಿ ಭದ್ರತಾ ಸಿಬ್ಬಂದಿ ಮುಂದುವರಿಯಲು ಅವಕಾಶ ನೀಡಿರಲಿಲ್ಲ.
ಮೊಬೈಲ್ ಇಂಟರ್ನೆಟ್ ಸ್ಥಗಿತ
ಹರಿಯಾಣ ಸರ್ಕಾರವು ಅಂಬಾಲಾದ 12 ಹಳ್ಳಿಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ ಎಸ್ಎಂಎಸ್ ಸೇವೆಗಳನ್ನು ಡಿಸೆಂಬರ್ 17ರವರೆಗೆ ಸ್ಥಗಿತಗೊಳಿಸಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಸುಮಿತಾ ಮಿಶ್ರಾ ಹೊರಡಿಸಿದ ಆದೇಶದ ಪ್ರಕಾರ, ಸಾರ್ವಜನಿಕ ಶಾಂತಿ ಕಾಪಾಡಿಕೊಳ್ಳಲು ಶನಿವಾರ ಮುಂಜಾನೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಅಂಬಾಲಾದ ಡಾಂಗ್ಡೆಹ್ರಿ, ಲೆಹ್ಘರ್, ಮಣಕ್ಪುರ, ದಾಡಿಯಾನಾ, ಬಾರಿ ಘೇಲ್, ಚೋಟಿ ಘೇಲ್, ಲಾರ್ಸಾ, ಕಾಲು ಮಜ್ರಾ, ದೇವಿ ನಗರ (ಹಿರಾ ನಗರ, ನರೇಶ್ ವಿಹಾರ್), ಸದ್ದೋಪುರ್, ಸುಲ್ತಾನ್ಪುರ ಮತ್ತು ಕಕ್ರು ಗ್ರಾಮಗಳಲ್ಲಿ ಮೊಬೈಲ್ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ ಎಂದು ಮಿಶ್ರಾ ಹೇಳಿದರು.
ಅಂಬಾಲಾ ಜಿಲ್ಲಾಡಳಿತವು ಈಗಾಗಲೇ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಿದೆ. ಇದು ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರನ್ನು ಕಾನೂನುಬಾಹಿರವಾಗಿ ಒಟ್ಟುಗೂಡಿಸುವುದನ್ನು ನಿಷೇಧಿಸಲಾಗಿದೆ.