Delhi Chalo | ರೈತರ ಮೇಲೆ ಪೊಲೀಸರ ಆಶ್ರುವಾಯ ದಾಳಿ; ಕಾಲ್ನಡಿಗೆ ಜಾಥಾ ಮತ್ತೆ ಸ್ಥಗಿತ

Delhi Chalo | ರೈತರು ನಡಿಗೆ ಆರಂಭಿಸಿದ ಕೆಲವೇ ಮೀಟ್​ಗಳ ದೂರದಲ್ಲಿ ಹರಿಯಾಣ ಪೊಲೀಸರು ಅವರನ್ನು ತಡೆದರು. ಮೆರವಣಿಗೆಯ ಭಾಗವಾಗಿರುವ 101 ರೈತರನ್ನು ಗುರುತಿಸಲು ಅವಕಾಶ ನೀಡುವಂತೆ ಪೊಲೀಸರು ರೈತ ಸಂಘಗಳಿಗೆ ತಿಳಿಸಿದರು;

Update: 2024-12-08 10:57 GMT

ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು 101 ರೈತರ ಗುಂಪು ಘೋಷಿಸಿರುವ ಕಾಲ್ನಡಿಗೆ ಜಾಥಾ ಮತ್ತೆ ಸ್ಥಗಿತಗೊಂಡಿದೆ. ಭಾನುವಾರ (ಡಿಸೆಂಬರ್ 8) ಮಧ್ಯಾಹ್ನ 12 ಗಂಟೆಗೆ ಶಂಭು ಗಡಿಯಿಂದ ದೆಹಲಿಗೆ ಕಾಲ್ನಡಿಗೆ ಮೆರವಣಿಗೆಯನ್ನು ಪುನರಾರಂಭಿಸಿದಾಗ ಪೊಲೀಸರು ಆಶ್ರುವಾಯು ಸಿಡಿಸಿ ಅವರ ನಡಿಗೆಗೆ ತಡೆ ಕೊಟ್ಟರು. ರೈತರಿಗೆ ದೆಲ್ಲಿ ಚಲೊ ಮುಂದುವರಿಸಲು ಸಾಧ್ಯವಾಗಲಿಲ್ಲ.

ರೈತರು ನಡಿಗೆ ಆರಂಭಿಸಿದ ಕೆಲವೇ ಮೀಟ್​ಗಳ ದೂರದಲ್ಲಿ ಹರಿಯಾಣ ಪೊಲೀಸರು ಅವರನ್ನು ತಡೆದರು. ಮೆರವಣಿಗೆಗೆ ಅನುಮತಿ ಇದೆಯೇ ಎಂದು ತೋರಿಸಲು ಮತ್ತು ಮೆರವಣಿಗೆಯ ಭಾಗವಾಗಿರುವ 101 ರೈತರನ್ನು ಗುರುತಿಸಲು ಅವಕಾಶ ನೀಡುವಂತೆ ಪೊಲೀಸರು ರೈತ ಸಂಘಗಳಿಗೆ ತಿಳಿಸಿದರು. ಇದು ಎರಡೂ ಕಡೆಗಳ ನಡುವೆ ಮತ್ತೊಂದು ಮುಖಾಮುಖಿಗೆ ಕಾರಣವಾಯಿತು. ನಂತರ, ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಜೋರು ಘರ್ಷಣೆ

ಶುಕ್ರವಾರ ರೈತರು ಮೊದಲ ಬಾರಿಗೆ ಕಾಲ್ನಡಿಗೆ ಜಾಥಾಗೆ ಯತ್ನಿಸಿದ್ದರು. ಆದರೆ, ಪಂಜಾಬ್-ಹರಿಯಾಣ ಗಡಿಯಲ್ಲಿ ಭದ್ರತಾ ಸಿಬ್ಬಂದಿ ಹಾರಿಸಿದ ಅಶ್ರುವಾಯು ಶೆಲ್​​ಗಳಿಂದ ಕೆಲವರು ಗಾಯಗೊಂಡ ಮೆರವಣಿಗೆಯನ್ನು ಸ್ಥಗಿತಗೊಳಿಸಿದ್ದರು.

"ನಾವು ಮೊದಲು ಅವರನ್ನು (ರೈತರನ್ನು) ಗುರುತಿಸಬೇಕಾಗಿದೆ. ನಂತರ ನಾವು ಅವರಿಗೆ ಮುಂದುವರಿಯಲು ಅವಕಾಶ ನೀಡಬಹುದು. ನಮ್ಮ ಬಳಿ 101 ರೈತರ ಹೆಸರುಗಳ ಪಟ್ಟಿ ಇದೆ. ಆದರೆ ಜಾಥಾದಲ್ಲಿ ಇರುವವರು ಅವರಲ್ಲ. ಅವರನ್ನು ಗುರುತಿಸಲು ಅವರು ನಮಗೆ ಅವಕಾಶ ನೀಡುತ್ತಿಲ್ಲ. ಅವರು ಗುಂಪಾಗಿ ಮುಂದುವರಿಯುತ್ತಿದ್ದಾರೆ " ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಭಟನಾ ನಿರತ ರೈತರು ದೆಹಲಿಗೆ ಹೋಗಲು ಅವಕಾಶ ನೀಡದ ಪೊಲೀಸರ ವಿರುದ್ಧ ರೈತರು ತಿರುಗೇಟು ನೀಡಿದ್ದಾರೆ.

"ಅವರು (ಪೊಲೀಸರು) ಇಟ್ಟುಕೊಂಡಿರುವ ಪಟ್ಟಿ ತಪ್ಪು. ಆ ಪಟ್ಟಿಯಲ್ಲಿ ಇಲ್ಲಿಗೆ ಬರುವ ರೈತರ ಹೆಸರು ಇಲ್ಲ. ನಮಗೆ ಮುಂದುವರಿಯಲು ಅವಕಾಶ ನೀಡುವಂತೆ ನಾವು ಅವರನ್ನು (ಪೊಲೀಸರನ್ನು) ಕೇಳಿದ್ದೇವೆ. ನಾವು ಅವರಿಗೆ ನಮ್ಮ ಗುರುತಿನ ಚೀಟಿಗಳನ್ನು ತೋರಿಸುತ್ತೇವೆ. ನಮಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಹಾಗಾದರೆ ನಾವು ನಮ್ಮ ಗುರುತನ್ನು ಏಕೆ ಸಾಬೀತುಪಡಿಸಬೇಕು. ನಾವು ಮಾತುಕತೆಯ ಮೂಲಕ ವಿಷಯಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ.ನಾವು ಹೋಗಿಯೇ ಹೋಗುತ್ತೇವೆ " ಎಂದು ರೈತರೊಬ್ಬರು ಹೇಳಿದರು.

"ನಾವು ಈಗಾಗಲೇ ಮೆರವಣಿಗೆಯ ಭಾಗವಾಗಿರುವ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ, ಅವರು (ಪೊಲೀಸರು) ನಮಗೆ ಚಲಿಸಲು ಅನುಮತಿಸುವ ಮೊದಲು ಮೊದಲು ಐಡಿಗಳನ್ನು ಪರಿಶೀಲಿಸುವುದಾಗಿ ನಿರ್ಧರಿಸಿದರೆ ನಾವು ಅದಕ್ಕೆ ಸಹಕರಿಸುತ್ತೇವೆ. ನಾವು ಶಿಸ್ತನ್ನು ತೋರಿಸಿದ್ದೇವೆ ಮತ್ತು ಹಾಗೆಯೇ ಮುಂದುವರಿಯುತ್ತೇವೆ. ಅವರು ಇಂದು ಅಶ್ರುವಾಯುವನ್ನು ಹೆಚ್ಚು ಬಳಸುತ್ತಿದ್ದಾರೆ. ನಾವು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಿದ್ದೇವೆ. ನಮ್ಮ ಸಮಸ್ಯೆಗಳಿಗೆ ಪ್ರಧಾನಿ ಬಳಿ ಪರಿಹಾರವಿದೆ" ಎಂದು ರೈತ ಮುಖಂಡ ಸರ್ವನ್ ಸಿಂಗ್ ಪಾಂಡೆರ್ ಹೇಳಿ ದ್ದಾರೆ.

ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳು

ಬೆಂಬಲ ಬೆಲೆಗೆ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರೈತರು ಒತ್ತಾಯಿಸುತ್ತಿದ್ದಾರೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಲು ತಮ್ಮೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲು ಅವರು ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪಂಜಾಬ್ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್ ಶನಿವಾರ ಮಾತನಾಡಿ, ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆಗಾಗಿ ಕೇಂದ್ರದಿಂದ ಯಾವುದೇ ಸಂದೇಶವನ್ನು ಬಂದಿಲ್ಲ ಎಂದು ಹೇಳಿದ್ದರು.

Tags:    

Similar News