ಶಂಭು ಗಡಿಯಲ್ಲಿ ರೈತರು ದೆಹಲಿ ಪ್ರವೇಶಿಸದಂತೆ ಹಾಕಲಾಗಿದ್ದ ಸಿಮೆಂಟ್​ ಬ್ಯಾರಿಕೇಡ್‌ಗಳ ತೆರವು

ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಿದ್ದ ಶಂಭು-ಅಂಬಾಲ ರಸ್ತೆಯ ತಡೆಗಳನ್ನು ತೆರವು ಮಾಡಲು ಬೆಳಿಗ್ಗೆಯಿಂದಲೇ ಜೆಸಿಬಿ ಮೂಲಕ ಕಾರ್ಯಾಚಾರಣೆಗೆ ಮುಂದಾಗಿದ್ದಾರೆ.;

Update: 2025-03-20 13:41 GMT

 ಪ್ರತಿಭಟನಾಕಾರ ರೈತರು ಸ್ಥಾಪಿಸಿದ ಸಿಮೆಂಟ್​ ಬ್ಯಾರಿಕೇಡ್‌ಗಳನ್ನು​ ತೆರವುಗೊಳಿಸಲು ಮುಂದಾಗಿದ್ದಾರೆ.

ಶಂಭು ಗಡಿಯಿಂದ ಪ್ರತಿಭಟನಾನಿರತ ರೈತರ ತೆರವಿನ ಬೆನ್ನಲ್ಲೇ ಹರಿಯಾಣ ಭದ್ರತಾ ಸಿಬ್ಬಂದಿ ಗುರುವಾರ ಬೆಳಿಗ್ಗೆ ಪಂಜಾಬ್ ರೈತರು ದೆಹಲಿಗೆ ಹೋಗುವುದನ್ನು ತಡೆಯಲು ನಿರ್ಮಿಸಲಾದ ಸಿಮೆಂಟ್ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಮುಚ್ಚಿದ್ದ ಶಂಭು-ಅಂಬಾಲ ರಸ್ತೆಯ ತಡೆಗಳನ್ನು ತೆರವು ಮಾಡಲು ಬೆಳಿಗ್ಗೆಯಿಂದಲೇ ಜೆಸಿಬಿ ಮೂಲಕ ಕಾರ್ಯಾಚಾರಣೆಗೆ ಮುಂದಾಗಿದ್ದಾರೆ. 

ಪಂಜಾಬ್​​ನ ಪ್ರತಿಭಟನಾನಿರತ ರೈತರ ದೆಹಲಿ ಚಲೋ ಕಾರ್ಯಕ್ರಮ ತಡೆಯಲು ದೆಹಲಿ ಕಡೆಗೆ ಸಾಗುವ ಮಾರ್ಗದಲ್ಲಿ ರೈತರ ಪ್ರವೇಶವನ್ನು ತಡೆಯಲು ಪಂಜಾಬ್​ ಗಡಿಗಳಲ್ಲಿ ಸಿಮೆಂಟ್​ ಬ್ಲಾಕ್​, ಕಬ್ಬಿಣದ ಮೊಳೆ ಮತ್ತು ಮುಳ್ಳು ತಂತಿಗಳಿಂದ ಭದ್ರಪಡಿಸಲಾಗಿತ್ತು.

ಬುಧವಾರ ಸಂಜೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜೊತೆಗಿನ ಸಭೆಯ ಬಳಿಕ ಪಂಜಾಬ್​ ರೈತರು ಸಭೆ ನಡೆಸಿದ್ದರು. ಆ ಬಳಿಕ ಚಂಡೀಗಢಕ್ಕೆ ವಾಪಸಾಗುವ ವೇಳೆ ಪಂಜಾಬ್ ಪೊಲೀಸರು ಸರ್ವಾನ್ ಸಿಂಗ್ ಪಂಧೇರ್ ಮತ್ತು ಜಗಜಿತ್ ಸಿಂಗ್ ದಲ್ಲೆವಾಲ್ ಸೇರಿದಂತೆ ಹಲವು ರೈತ ನಾಯಕರನ್ನು ಮೊಹಾಲಿಯಲ್ಲಿ ಬಂಧಿಸಿದ್ದಾರೆ. ಅಲ್ಲದೇ, ಕಳೆದೊಂದು ವರ್ಷದಿಂದ ಶಂಭು ಮತ್ತು ಖಾನೌರಿ ಸ್ಥಳಗಳಲ್ಲಿ ಪ್ರತಿಭಟನಾನಿರತ ರೈತರನ್ನೂ ಪೊಲೀಸರು ತೆರವುಗೊಳಿಸಿದರು. ಪ್ರತಿಭಟನೆಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಟೆಂಟ್‌ಗಳು​ ಮತ್ತು ವೇದಿಕೆಗಳನ್ನು ಜೆಸಿಬಿ ಬಳಸಿ ಕೆಡವಿದ್ದಾರೆ.

ಎರಡೂ ಕಡೆಯ ನಡುವಿನ ಏಳನೇ ಸುತ್ತಿನ ಮಾತುಕತೆಯಲ್ಲಿ, ಕೇಂದ್ರ ನಿಯೋಗವನ್ನು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಪ್ರತಿನಿಧಿಸಿದ್ದರು. ಸಭೆಯಲ್ಲಿ ರೈತರ ವಿವಿಧ ಬೇಡಿಕೆಗಳ ಬಗ್ಗೆ ವಿಶೇಷವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿಪಡಿಸುವ ಕಾನೂನು ಬಗ್ಗೆ ಚರ್ಚಿಸಲಾಯಿತು. ಸಭೆಯ ಬಳಿಕ ರೈತರು ಮೊಹಾಲಿ ಪ್ರವೇಶಿಸುತ್ತಿದ್ದಂತೆ, ಪೊಲೀಸರು ಅವರನ್ನು ತಡೆದು ಹೊರಹಾಕಲು ಮುಂದಾದರು.

ರೈತರನ್ನು ಪ್ರತಿಭಟನಾ ಸ್ಥಳದಿಂದ ಹೊರಹಾಕಿರುವ ಕ್ರಮ ಸಮರ್ಥಿಸಿಕೊಂಡ ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ, ದೀರ್ಘಕಾಲದಿಂದ ಎರಡು ಹೆದ್ದಾರಿಗಳು ಬಂದ್​ ಆಗಿರುವುದರಿಂದ ಕೈಗಾರಿಕೆಗಳು ಮತ್ತು ವ್ಯವಹಾರಗಳಿಗೆ ಹೊಡೆತ ಬಿದ್ದಿದೆ. ಎಎಪಿ ಉದ್ಯೋಗ ಸೃಷ್ಟಿಗೆ ಬದ್ಧವಾಗಿದೆ. ಆದರೆ, ಇದು ವ್ಯಾಪಾರ ಮತ್ತು ಕೈಗಾರಿಕೆಗಳು ಸುಗಮವಾಗಿ ನಡೆದರೆ ಮಾತ್ರ ಸಾಧ್ಯ ಎಂದು ಸಮರ್ಥಿಸಿಕೊಂಡರು. 

"ವ್ಯಾಪಾರವು ಸಂಕಷ್ಟದಲ್ಲಿದೆ. ಎಲ್ಲಾ ಸಂದರ್ಭಗಳನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ನಿಮ್ಮ ಹೋರಾಟ ಕೇಂದ್ರದ ವಿರುದ್ಧ ಎಂದು ನಾವು ರೈತ ನಾಯಕರಿಗೆ ಹೇಳುತ್ತಿದ್ದೇವೆ. ನಾವು ನಿಮ್ಮೊಂದಿಗಿದ್ದೇವೆ. ಆದರೆ ನೀವು ಗಡಿಯನ್ನು ಮುಚ್ಚುವ ಮೂಲಕ ಪಂಜಾಬ್‌ಗೆ ಭಾರಿ ನಷ್ಟವನ್ನುಂಟುಮಾಡುತ್ತಿದ್ದೀರಿ" ಎಂದು ಅವರು ತಿಳಿಸಿದರು. 

ರೈತರ ನ್ಯಾಯಯುತ ಬೇಡಿಕೆಗಳನ್ನು ಬೆಂಬಲಿಸಲು ಪಂಜಾಬ್ ಸರ್ಕಾರ ಬದ್ಧವಾಗಿದೆ. ಎಎಪಿ ಸಚಿವರು ಕೇಂದ್ರದ ಮುಂದೆ ರೈತರ ಕಳವಳಗಳನ್ನು ಮಂಡಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಎರಡು ಹೆದ್ದಾರಿಗಳನ್ನು ತೆರವುಗೊಳಿಸುವ ಮೊದಲು ಪೊಲೀಸರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನಾ ನಿರತ ರೈತರು ಕಳೆದ ವರ್ಷ ಫೆಬ್ರವರಿ 13 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು (ಶಂಭು-ಅಂಬಾಲ) ಮತ್ತು ಖಾನೌರಿ (ಸಂಗ್ರೂರ್-ಜಿಂದ್) ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದರು. ದೆಹಲಿಗೆ ಅವರ ಮೆರವಣಿಗೆಯನ್ನು ಭದ್ರತಾ ಪಡೆಗಳು ವಿಫಲಗೊಳಿಸಿದಾಗಿನಿಂದ ಈ ರೈತರು ಈ ಕ್ರಮವನ್ನು ಕೈಗೊಂಡಿದ್ದರು.

Tags:    

Similar News